ಬಿಡಿಎ ಸೈಟ್ ಕೊಳ್ಳಲು ಪ್ಲಾನ್ ಮಾಡಿದ್ದೀರಾ..? ಯಾಮಾರಿಸ್ತಾರೆ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.12- ಬಿಡಿಎ ನಿರ್ಮಿಸಿರುವ ಕೆಂಪೇಗೌಡ ಲೇಔಟ್ ನ ನಿವೇಶನಗಳ ನಕಲಿ ಹಕ್ಕುಪತ್ರ ಸೃಷ್ಟಿಸಿ ಸಾರ್ವಜನಿಕರಿಗೆ ತಲಾ 50 ಸಾವಿರ ರೂ.ನಿಂದ 3 ಲಕ್ಷ ರೂ.ವರೆಗೆ ಮಾರಾಟ ಮಾಡಿರುವ ಜಾಲವನ್ನು ಪತ್ತೆ ಮಾಡಲಾಗಿದೆ.

ವಿಜಯಾನಂದಸ್ವಾಮಿ ಎಂಬಾತ ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ (ರಿ) ರಚಿಸಿಕೊಂಡು ಅದಕ್ಕೆ ತಾನೇ ರಾಜ್ಯಾಧ್ಯಕ್ಷನಾಗಿದ್ದು , ರಮೇಶ ಎಂಬುವನ ಜತೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾನೆ.

ತಲಾ 15 ಸಾವಿರ ರೂ. ಕೊಟ್ಟು ಸಂಘದ ಸದಸ್ಯತ್ವ ಪಡೆಯುವವರಿಗೆ ನಿವೇಶನ ಕೊಡಿಸುವುದಾಗಿ ಈಗಾಗಲೇ 1 ಸಾವಿರ ಜನರಿಂದ ನೋಂದಣಿ ಮಾಡಿಸಿಕೊಂಡು, ಸಂಘದ ಲೆಟರ್‍ಹೆಡ್‍ನಲ್ಲಿ ಬಿಬಿಎಂಪಿ ಮೇಯರ್‍ಗೆ ನಿವೇಶನ ನೀಡುವಂತೆ ಮನವಿ ಪತ್ರ ಬರೆಯುತ್ತಾರೆ.

ನಂತರ ಕೆಲವು ದಿನಗಳಲ್ಲಿ 50 ಸಾವಿರ ರೂ.ನಿಂದ 3 ಲಕ್ಷ ರೂ. ಪಡೆದು 50 ಜನಕ್ಕೆ ಬಿಡಿಎ ನಿವೇಶನ ನಕಲಿ ಪತ್ರ ಹಂಚಿಕೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಿವೇಶನ ಪಡೆದ 6 ಜನರು ಬಿಡಿಎ ಕೇಂದ್ರ ಕಚೇರಿಗೆ ಹೋಗಿ ವಿಚಾರಿಸಿದಾಗ ಅಧಿಕಾರಿಗಳಿಗೆ ಅನುಮಾನ ಬಂದು, ಪ್ರಕರಣದ ಜಾಲವನ್ನು ಪತ್ತೆಹಚ್ಚಿದ್ದಾರೆ.

ವಿಜಯಾನಂದ ಸ್ವಾಮಿಯನ್ನು ವಿಚಾರಣೆ ನಡೆಸಿದಾಗ 3 ಸಾವಿರ ಜನರಿಗೆ ನಿವೇಶನದ ನಕಲಿ ಪತ್ರ ಹಂಚಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

Facebook Comments