ನೀವೂ ಕೊರೋನಾ ವಾರಿಯರ್ಸ್ ಆಗಬಯಸುವಿರಾ..? ಹಾಗಾದರೆ ತಕ್ಷಣ ಈ ಕೆಲಸ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.14- ನಗರದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಸೋಂಕು ನಿವಾರಣೆ ಹೋರಾಟದಲ್ಲಿ ಸಾರ್ವಜನಿಕರೇ ನೀವು ಭಾಗಿಯಾಗಬೇಕೆ..? ಹಾಗಾದರೆ ಕೂಡಲೇ ಈ ವೆಬ್‍ಸೈಟ್ ಓಪನ್ ಮಾಡಿ. ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿವಾರಣೆ ದೃಷ್ಟಿಯಿಂದ ಬಿಬಿಎಂಪಿ blcares.in ವೆಬ್‍ಸೈಟ್ ಬಿಡುಗಡೆ ಮಾಡಿದೆ.

ಈ ವೆಬ್‍ಸೈಟ್ ಓಪನ್ ಮಾಡಿದರೆ ಕೊರೊನಾ ನಿಯಂತ್ರಣ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿಯುಳ್ಳವರು ಒಂದು ಬಟನ್ ಪ್ರೆಸ್ ಮಾಡಿದರೆ ಯಾವ ಪ್ರದೇಶ, ಯಾವ ಬೂತ್‍ಗೆ ಸೇರಬೇಕು ಎಂಬುದು ಗೊತ್ತಾಗಲಿದೆ.

ಕೊರೊನಾ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಮೊದಲು ಬೂತ್ ಲೆವೆಲ್ ಘಟಕದ ಸದಸ್ಯರಾಗಬಹುದು. ಸದಸ್ಯರಾದವರಿಗೆ ಈ ವೆಬ್‍ಸೈಟ್‍ನಲ್ಲಿ ತಾವಿರುವ ಸುತ್ತಮುತ್ತಲ ಪ್ರದೇಶಗಳ ವಿವರ ತಿಳಿಯಲಿದೆ. ನಂತರ ಮನೆ ಮನೆಗೆ ತೆರಳಿ ಕೊರೊನಾ ಹೋರಾಟದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಈ ವೆಬ್‍ಸೈಟ್‍ನಲ್ಲಿ ಲಾಗ್‍ಇನ್ ಆಗಿ ಸದಸ್ಯತ್ವ ಪಡೆಯಬಹುದು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿದರು.

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಇಂದು ರೆಸಿಡೆಂಟ್ ವೆಲ್‍ಫೇಸ್ ಅಸೋಸಿಯೇಷನ್ ಸದಸ್ಯರ ಜತೆ ಸಭೆ ನಡೆಸಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದೇವೆ. ಅವರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ. ವೆಬ್‍ಸೈಟ್‍ನಲ್ಲಿ ಅವರು ಕೂಡ ಕೈ ಜೋಡಿಸಬಹುದು ಎಂದು ಹೇಳಿದರು.

ಮುಂದಿನ ಒಂದು ತಿಂಗಳೊಳಗೆ ಬೂತ್ ಲೆವೆಲ್ ಸದಸ್ಯರು, ಅಕಾರಿಗಳ ನೆರವಿನಿಂದ ನಗರದಲ್ಲಿ ಎರಡು ಬಾರಿ ಸರ್ವೆ ಮಾಡಿದರೆ ಎಷ್ಟು ಸೋಂಕಿತರಿದ್ದಾರೆ ಎಂಬುದನ್ನು ಪತ್ತೆಹಚ್ಚಿ ಸೂಕ್ತ ಸಮಯದಲ್ಲಿ ಅವರಿಗೆ ಚಿಕಿತ್ಸೆ ನೀಡಿದರೆ ಸೋಂಕು ಇನ್ನೂ ಹೆಚ್ಚು ಹರಡುವುದನ್ನು ತಡೆಯುವಲ್ಲಿ ಯಶಸ್ವಿಯಾಗಬಹುದು ಎಂದು ಆಯುಕ್ತರು ಹೇಳಿದರು.

ಸದಸ್ಯರು ಮನೆ ಮನೆಗೆ ಹೋಗಿ ಉಸಿರಾಟದ ಸಮಸ್ಯೆ ಮತ್ತಿತರ ಸಮಸ್ಯೆಗಳು ಇರುವುದನ್ನು ಪತ್ತೆಹಚ್ಚಬಹುದು. ಇದರಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆ ಮಾಡಬಹುದು. ಮೊಬೈಲ್ ಟೀಮ್‍ಗಳಿಗೆ ಟೆಸ್ಟ್ ಕಿಟ್‍ಗಳನ್ನು ಕಳುಹಿಸಲಾಗಿದೆ.

ಕಂಟೈನ್ಮೆಂಟ್ ಝೋನ್‍ಗಳಲ್ಲಿ ರೂಲ್ಸ್ ಬದಲಾವಣೆಗೆ ಪತ್ರ ಬರೆಯಲಾಗಿದೆ. ಸೋಂಕಿತರಿರುವ ಕಡೆ ಬ್ಯಾರಿಕೇಡ್, ಬ್ಯಾನರ್ ಹಾಕುವ ಬಗ್ಗೆ ಇನ್ನೆರಡು ದಿನಗಳಲ್ಲಿ ಸ್ಪಷ್ಟನೆ ಬರಲಿದೆ. ಯಾವುದೆಲ್ಲ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ಧರಿಸುತ್ತೇವೆ ಎಂದು ಹೇಳಿದರು.

ನಗರದಲ್ಲಿ 1860 ಫ್ಲಾಟ್‍ಗಳಿದ್ದು, ಅವರಿಗೆ ಫಾರಂ ತುಂಬಿಕೊಡುವಂತೆ ತಿಳಿಸಿದ್ದೇವೆ. ಟೆಸ್ಟ್ ಮಾಡುವವರು ಪಿಪಿಇ ಕಿಟ್ ಬಳಸಿಕೊಳ್ಳಬಹುದು. ಈಸ್ಟ್ ಝೋನ್‍ನಲ್ಲಿ 1438 ಬೂತ್‍ಗಳಿದ್ದು, ಇಲ್ಲಿ ಕೆಲಸ ನಡೆಯುತ್ತಿದೆ. ಎಲ್ಲ ಬೂತ್ ಲೆವೆಲ್ ಆಫೀಸರ್‍ಗಳು ಬೇರೆ ಕಡೆಯಿಂದ ಬರಬೇಕಾಗಿದೆ.

ಹೀಗಾಗಿ ಸ್ಥಳೀಯರನ್ನು ಬೂತ್ ಲೆವೆಲ್ ಆಫೀಸರ್ ಮಾಡಲಾಗುವುದು. ಅವರು ಮಾಡಿರುವ ಕೆಲಸವನ್ನು ಅಪ್‍ಲೋಡ್ ಮಾಡಿದರೆ ನಾವು ಇಲ್ಲಿಂದಲೇ ವೀಕ್ಷಿಸಬಹುದು. ಅತಿ ಹೆಚ್ಚು ಟೆಸ್ಟ್ ಮಾಡುವುದರಿಂದ ಕೊರೊನಾ ಚೈನ್ ಕಟ್ ಮಾಡಬಹುದು ಎಂದು ಮಂಜುನಾಥ್ ಪ್ರಸಾದ್ ಹೇಳಿದರು.

Facebook Comments

Sri Raghav

Admin