ರಸ್ತೆ ಗುಂಡಿಗೆ ಬಲಿಯಾದ ಬಿಇ ವಿದ್ಯಾರ್ಥಿನಿ..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ನ.4- ಪಾಸ್‌ಪೋರ್ಟ್ ವೆರಿಫಿಕೇಷನ್‌ಗಾಗಿ ತಂದೆಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದ ಮಗಳು ಆಯತಪ್ಪಿ ರಸ್ತೆಗುಂಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎಂಜಿನಿಯರಿಂಗ್ ಮುಗಿಸಿದ್ದ ಸಿಂಧುಜಾ (23) ಮೃತಪಟ್ಟ ದುರ್ದೈವಿ.

ನಗರದ ಅಗ್ನಿಶಾಮಕ ಠಾಣೆಯ ನೌಕರರಾಗಿರುವ ಕುಮಾರಪ್ಪ ಎಂಬುವವರ ಪುತ್ರಿಯಾದ ಸಿಂಧುಜಾ ತಿಪಟೂರಿನಲ್ಲಿ ಬಿಇ ಮುಗಿಸಿದ್ದು, ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಉದ್ಯೋಗ ಲಭಿಸಿದ್ದರಿಂದ ನಿನ್ನೆ ಪಾಸ್‌ಪೋರ್ಟ್ ಪರಿಶೀಲನೆ ಸಲುವಾಗಿ ತಂದೆ ಜತೆ ಸ್ಕೂಟಿಯಲ್ಲಿ ನಗರಠಾಣೆಗೆ ಹೋಗುತ್ತಿದ್ದರು.

ಕೆಎಂ ರಸ್ತೆಯ ಮಾರ್ಗಮಧ್ಯೆ ದೊಡ್ಡಗುಂಡಿ ಇರುವುದನ್ನು ಗಮನಿಸಿದ ಕುಮಾರಪ್ಪ ಅವರು ಗುಂಡಿಗೆ ಬೀಳುವುದನ್ನು ತಪ್ಪಿಸಲು ಬೈಕ್‌ಅನ್ನು ಪಕ್ಕಕ್ಕೆ ತೆಗೆದುಕೊಳ್ಳುತ್ತಿದ್ದಂತೆ ನಿಯಂತ್ರಣ ತಪ್ಪಿ ಇಬ್ಬರೂ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಸಿಂಧುಜಾ ಅವರ ತಲೆ ಹಾಗೂ ಎದೆ ಭಾಗಕ್ಕೆ ಗಂಭೀರ ಪೆಟ್ಟಾಗಿದೆ. ತಕ್ಷಣ ಸಿಂಧುಜಾ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಕುಮಾರಪ್ಪ ಅವರಿಗೆ ಇಬ್ಬರು ಪುತ್ರಿಯರಿದ್ದು, ಎರಡನೆ ಪುತ್ರಿ ಸುಷ್ಮಾ ಶಿವಮೊಗ್ಗದಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಮೊದಲ ಮಗಳನ್ನು ಕಳೆದುಕೊಂಡ ಕುಟುಂಬದವರ ರೋದನ ಮುಗಿಲುಮುಟ್ಟಿತ್ತು.ಈ ಬಗ್ಗೆ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಮಾರ್ಗದಲ್ಲಿ ರಸ್ತೆ ಗುಂಡಿಗಳಿಂದ ಕೂಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದನ್ನು ಸರಿಪಡಿಸುವ ಗೊಡವೆಗೇ ಹೋಗಿಲ್ಲ. ಪ್ರತಿನಿತ್ಯ ವಾಹನ ಸವಾರರು ಗುಂಡಿಗಳಿಂದಾಗಿ ಬಿದ್ದು ಕೈ-ಕಾಲು ಮುರಿದುಕೊಂಡಿರುವ ಉದಾಹರಣೆಗಳೂ ಇವೆ.

ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಮಳೆ ನಿಂತ ಮೇಲೆ ಗುಂಡಿ ಮುಚ್ಚುವ ಕಾರ್ಯ ಮಾಡುವುದಾಗಿ ಬೇಜವಾಬ್ದಾರಿಯಿಂದ ಹೇಳುತ್ತಾರೆ ಎಂದು ಸ್ಥಳೀಯರೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.

Facebook Comments