ವೀರಣ್ಣನ ಬೆಟ್ಟದ ತಪ್ಪಲಿನಲ್ಲಿ ಕರಡಿಗಳ ಹಾವಳಿ

ಈ ಸುದ್ದಿಯನ್ನು ಶೇರ್ ಮಾಡಿ

ಮಧುಗಿರಿ, ಜೂ.26- ಬೆಟ್ಟ, ಗುಡ್ಡಗಳ ನಾಡೆಂದೇ ಪ್ರಖ್ಯಾತಿ ಹೊಂದಿರುವ ಮಧುಗಿರಿ ತಾಲ್ಲೂಕಿನ ವೀರಣ್ಣನ ಬೆಟ್ಟ ಕರಡಿಗಳ ವಾಸ ತಾಣವಾಗಿದೆ.
ಆಹಾರ ಅರಸಿ ಬರುವ ಕರಡಿಗಳು ಗ್ರಾಮಗಳಿಗೆ ಹಿಂಡು ಹಿಂಡಾಗಿ ಧಾವಿಸುತ್ತಿರುವುದರಿಂದ ಈ ಭಾಗದ ಜನರು ಆತಂಕಕ್ಕೊಳಗಾಗಿದ್ದಾರೆ.

ರಸ್ತೆ , ಹೊಲ, ಕೆರೆ, ಗಿಡ, ಪೊದೆಗಳಲ್ಲಿ ಎಲ್ಲೆಂದರಲ್ಲಿ ಕರಡಿಗಳು ಪ್ರತ್ಯಕ್ಷವಾಗುತ್ತಿರುವುದರಿಂದ ಸ್ಥಳೀಯರು ಹೊಲ ಗದ್ದೆಗಳಿಗೆ ಹೋಗಲು ಹೆದರುವಂತಾಗಿದೆ.
ಅನುಮಾನ: ಬೇರೆ ಕಡೆ ಸೆರೆ ಹಿಡಿದ ಕರಡಿಗಳನ್ನು ವೀರಣ್ಣನ ಬೆಟ್ಟಕ್ಕೆ ತಂದು ಬಿಡುತ್ತಿರುವುದರಿಂದ ಈ ಭಾಗದಲ್ಲಿ ಕರಡಿಗಳ ಹಿಂಡು ಹೆಚ್ಚಾಗುತ್ತಿದೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಕರಡಿಯೊಂದು ಮನುಷ್ಯನನ್ನು ಕಚ್ಚಿ ಸಾಯಿಸಿದ ಘಟನೆ ಜನಮಾನಸದಿಂದ ಮರೆಯಾಗುವ ಮುನ್ನವೇ ಈ ಭಾಗದಲ್ಲಿ ಮತ್ತೆ ಕರಡಿಗಳ ಹಾವಳಿ ಹೆಚ್ಚಾಗಿರುವುದರಿಂದ ಜನ ಭಯಭೀತರಾಗಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ಕರಡಿಗಳ ಸಂಖ್ಯೆ ದಿನೇ ದಿನೇ ದ್ವಿಗುಣಗೊಳ್ಳುತ್ತಿದ್ದರೂ ಅರಣ್ಯ ಇಲಾಖೆಯವರು ಅದಕ್ಕೂ ನಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಮನವಿ: ಈ ಭಾಗದಲ್ಲಿ ಇತ್ತೀಚೆಗೆ ಕರಡಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅವುಗಳನ್ನು ಹಿಡಿದು ಕರಡಿಧಾಮಕ್ಕೆ ಬಿಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮಸ್ಥರು ತಮ್ಮ ಹೊಲಗಳಲ್ಲಿ ಆಕಸ್ಮಿಕವಾಗಿ ಕರಡಿಗಳು ಪ್ರತ್ಯಕ್ಷವಾದರೆ ಅವುಗಳಿಗೆ ಯಾವುದೇ ರೀತಿ ಕಲ್ಲು ಹೊಡೆಯುವುದಾಗಲಿ ಅಥವಾ ಕೆಣಕಲು ಪ್ರಯತ್ನಪಡಬಾರದು. ಅದರ ಪಾಡಿಗೆ ಅವುಗಳನ್ನು ಬಿಟ್ಟುಬಿಟ್ಟರೆ ಅವು ಯಾರಿಗೂ ತೊಂದರೆ ಕೊಡುವುದಿಲ್ಲ ಎಂದು ಮಧುಗಿರಿ ವಲಯ ಅರಣ್ಯಾಧಿಕಾರಿ ಚಿನ್ನಪ್ಪ ಮನವಿ ಮಾಡಿಕೊಂಡಿದ್ದಾರೆ.

Facebook Comments