ಬೆಡ್ ಬ್ಲಾಕಿಂಗ್ ಜೊತೆಗೆ ಲಸಿಕೆ, ಔಷಧಿ ಬ್ಲಾಕಿಂಗ್ ದಂಧೆಯೂ ನಡೆದಿದೆ: ಕಾಂಗ್ರೆಸ್ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 26- ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರನ್ನು ಬಂಧಿಸಲು ಕಾಂಗ್ರೆಸ್ ಆಗ್ರಹಿಸಿದೆ. ಹಗರಣದಲ್ಲಿ ಬೆಡ್ ಬ್ಲಾಕಿಂಗ್ ಶಾಸಕರ ಆಪ್ತ ಎಂದು ಹೇಳಲಾದ ವ್ಯಕ್ತಿಯ ಬಂಧನವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಕರೋನಾ ಕಾಲಘಟ್ಟವನ್ನು ಬಿಜೆಪಿ ನಿರ್ಲಜ್ಜವಾಗಿ, ಅಮಾನವೀಯವಾಗಿ ತನ್ನ ಭ್ರಷ್ಟಾಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದೆ.

1ನೇ ಅಲೆಯಲ್ಲಿ ಬೆಡ್ ಬಾಡಿಗೆ ಹಗರಣ ನಡೆಸಲಾಯಿತು, 2ನೇ ಅಲೆಯಲ್ಲಿ ಬೆಡ್ ಬ್ಲಾಕಿಂಗ್ ಹಗರಣ ನಡೆಸಿದೆ. ಜನ ಬೀದಿಯಲ್ಲಿ ನರಳಿ ಸಾಯುತ್ತಿರುವಾಗ ಬಿಜೆಪಿ ತನಗೆ ಸಿಕ್ಕ ಅಧಿಕಾರವನ್ನು ಭ್ರಷ್ಟಾಚಾರದ ಮೆಡಿಕಲ್ ಭಯೋತ್ಪಾದನೆಗೆ ಬಳಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದೆ.

ಬಿಜೆಪಿ ಪಕ್ಷದ ಮೆಡಿಕಲ್ ಭಯೋತ್ಪಾದನೆ ಸತೀಶ್ ರೆಡ್ಡಿ ಆಪ್ತನ ಬಂಧನದಿಂದ ಸಾಭೀತಾಗಿದೆ. ತನ್ನ ಬೆಂಬಲಿಗರ ಮೂಲಕ ವಾರ್ ರೂಮ್ ಸಿಬ್ಬಂದಿಗಳನ್ನು ಬೆದರಿಸಿ, ನಿಯಂತ್ರಿಸಿ ದಂಧೆ ನಡೆಸುತ್ತಿದ್ದ ಕಿಂಗ್ ಪಿನ್ ಸತೀಶ್ ರೆಡ್ಡಿಯ ಬಂಧನದಿಂದ ಮಾತ್ರ ಪ್ರಕರಣ ಪೂರ್ಣ ಬಯಲಾಗಲು ಸಾಧ್ಯ ಎಂದು ಹೇಳಿದೆ.

ತಮ್ಮ ಹಗರಣ ಮುಚ್ಚಿಕೊಳ್ಳಲು ಅಮಾಯಕ ವಾರ್ ರೂಮ್ ಸಿಬ್ಬಂದಿಗಳ ಹೆಸರನ್ನು ಬಳಸಿ ಕೋಮು ಬಣ್ಣ ನೀಡಲು ಮುಂದಾಗಿದ್ದ ಸಂಸದ ತೇಜಸ್ವಿ ಸೂರ್ಯ ಈಗ ಎಲ್ಲಿ ಅಡಗಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 17 ಸಿಬ್ಬಂದಿಗಳ ಉದ್ಯೋಗ, ಆತ್ಮಗೌರವ, ಮರ್ಯಾದೆಯನ್ನು ಕಿತ್ತುಕೊಂಡ ಎಳೆ ಸಂಸದನಿಗೆ ಪಶ್ಚಾತಾಪ ಇಲ್ಲವೇ? ಅವರಿಗಾದ ನಷ್ಟಕ್ಕೆ ಪರಿಹಾರ ದೊರಕಿಸಿಕೊಡುವ ಕೆಲಸವನ್ನು ಮಾಡುತ್ತಾರೆಯೇ ಎಂದು ಪ್ರಶ್ಬಿಸಲಾಗಿದೆ.

ಕೇವಲ ಬೆಡ್ ಬ್ಲಾಕಿಂಗ್ ಒಂದೇ ಅಲ್ಲ, ಆಕ್ಸಿಜನ್ ಬ್ಲಾಕಿಂಗ್, ವ್ಯಾಕ್ಸಿನ್ ಬ್ಲಾಕಿಂಗ್, ರೆಮಿಡಿಸಿವಿರ್ ಬ್ಲಾಕಿಂಗ್ನ್ನೂ ಹಗರಣವನ್ನು ಬಿಜೆಪಿ ಸರ್ಕಾರ ನಡೆಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಲಸಿಕೆ ನೀಡುವಿಕೆಯಲ್ಲಿ ಖಾಸಗಿ ಆಸ್ಪತ್ರೆಯೊಂದಿಗೆ ಸೇರಿ ವ್ಯಾಕ್ಸಿನ್ ಬ್ಲಾಕಿಂಗ್ ದಂಧೆ ನಡೆಸಿದ್ದಾರೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮಾಡಿದೆ.

Facebook Comments