ಕೊರೋನಾ ಸೋಂಕಿತರಿಗೆ ಸಮರ್ಪಕ ಬೆಡ್ ವ್ಯವಸ್ಥೆ ರೂಪಿಸಲು ಸರ್ಕಾರ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು – ಜುಲೈ 2, 2020: ರಾಜ್ಯದಲ್ಲಿ ಹೆಚ್ಚುತ್ತಿರುವ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಗುರುವಾರ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.

ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಹಂಚಿಕೆಗೆ ಸಮರ್ಪಕ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು ನೂತನ ಮಾರ್ಗಸೂಚಿಗಳು ನಾಳೆಯೇ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಸಚಿವರು ಹೇಳಿದರು.

ಖಾಸಗಿ ಆಸ್ಪತ್ರೆಗಳೂ ಕೋವಿಡ್ ಸೋಂಕಿತರಿಗಾಗಿ ಹಾಸಿಗೆಗಳನ್ನು ಮೀಸಲಿಡಲು ಒಪ್ಪಿಕೊಂಡಿವೆ. ತಜ್ಞರುಗಳ ಸಲಹೆಯನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಪರೀಕ್ಷಾ ಸಾಮರ್ಥ್ಯ ಸೇರಿದಂತೆ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಕಾರ್ಯತಂತ್ರ ರೂಪಿಸಲಾಗಿದೆ.

ಸೋಂಕಿನ ಲಕ್ಷಣ ಇಲ್ಲದವರಿಗೆ ಮನೆಯಲ್ಲೇ ಚಿಕಿತ್ಸೆ ನೀಡುವ ಕುರಿತಂತೆ ಕೂಡ ಸಭೆಯಲ್ಲಿ ಚರ್ಚಿಸಲಾಗಿದ್ದು ಎಲ್ಲಾ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಗದುಗಿನ ಮೆಡಿಕಲ್ ಕಾಲೇಜಿನಲ್ಲಿ ರಾಜ್ಯದ 79ನೇ ಕೋವಿಡ್ ಪ್ರಯೋಗಾಲಯಕ್ಕೆ ಗುರುವಾರ ಚಾಲನೆ ನೀಡಲಾಯಿತು. ಬೆಂಗಳೂರಿನಿಂದಲೇ ಆನ್‌ಲೈನ್ ಮೂಲಕ ಲ್ಯಾಬ್‌ಗೆ ಚಾಲನೆ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಗದುಗಿನ ವೈದ್ಯಕೀಯ ಕಾಲೇಜು ಇಡೀ ರಾಜ್ಯವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದೆ.

ಪ್ರಾರಂಭವಾದ 5 ವರ್ಷ ಅವಧಿಗೂ ಮುನ್ನವೇ ಪಿಜಿ ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ಪಡೆದ, ದೇಶದಲ್ಲೇ ಮೊದಲ ಮೆಡಿಕಲ್ ಕಾಲೇಜು ಇದಾಗಿದೆ ಎಂದು ಬಣ್ಣಿಸಿದರು.

ಕಳೆದ 4-5 ತಿಂಗಳಿನಿಂದ ಕೋವಿಡ್ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಲಿದೆ. ಗದಗಿನ ಆರ‍್ಟಿಪಿಸಿಆರ್ ಪ್ರಯೋಗಾಲಯ ಸೇರಿದಂತೆ ಇಂದು ರಾಜ್ಯದಲ್ಲಿ 44 ಸರ್ಕಾರಿ ಹಾಗೂ 35 ಖಾಸಗಿ ಲ್ಯಾಬ್‍ಗಳು ಕೆಲಸ ಮಾಡುತ್ತಿವೆ. ದಿನವೊಂದಕ್ಕೆ 15,000 ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಇದುವರೆಗೆ ಸುಮಾರು ಐದೂವರೆ ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಚಿವರು ಹೇಳಿದರು.

ಅಲ್ಲದೆ ರೋಗ ಲಕ್ಷಣ ರಹಿತ ಸೋಂಕಿತರನ್ನು ಪತ್ತೆ ಹಚ್ಚಲು ಸುಮಾರು 1.5 ಕೋಟಿ ಮನೆಗಳನ್ನು ಭೌತಿಕ ಹಾಗೂ ದೂರವಾಣಿ ಸಮೀಕ್ಷೆ ನಡೆಸಲಾಗಿದೆ. ಮುಂದಿನ ರೂಪುರೇಷೆಗಳು ಶೀಘ್ರದಲ್ಲೇ ಪ್ರಕಟವಾಗಲಿವೆ ಎಂದು ಸುಧಾಕರ್ ತಿಳಿಸಿದ್ದಾರೆ.

ಗದುಗಿನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಿ.ಸಿ.ಪಾಟೀಲ್, ಮಾಜಿ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್, ಸಂಸದರಾದ ಶ್ರೀ ಶಿವಕುಮಾರ್ ಉದಾಸಿ, ಶ್ರೀ ಗದ್ದಿ ಗೌಡರ್, ಶಾಸಕರಾದ ಶ್ರೀ ಕಳಕಪ್ಪ ಬಂಡಿ, ಶ್ರೀ ರಾಮಣ್ಣ ಲಮಾಣಿ, ಶ್ರೀ ಬಸವರಾಜ್ ಹೊರಟ್ಟಿ, ಶ್ರೀ ಶ್ರೀನಿವಾಸ್ ಮಾನೆ, ಶ್ರೀ ಎಸ್.ವಿ.ಸಂಕನೂರ, ಶ್ರೀ ಪ್ರದೀಪ್ ಶೆಟ್ಟರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು

Facebook Comments

Sri Raghav

Admin