ಸಿಎಂ ಘರ್ಜನೆಗೆ ಕೊನೆಗೂ ಮಣಿದ ಖಾಸಗಿ ಆಸ್ಪತ್ರೆಗಳು, ಬೆಡ್ ವಿವರ ಆನ್ಲೈನ್ನಲ್ಲಿ ಲಭ್ಯ
ಬೆಂಗಳೂರು, ಜು.14- ಕೋವಿಡ್-19 ಸೋಂಕಿತರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಲಭ್ಯವಿರುವ ಹಾಸಿಗೆಗಳ ನೈಜ ಮಾಹಿತಿಯನ್ನು ಆನ್ಲೈನ್ ಮೂಲಕ ಪಡೆಯಬಹುದಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ಕುಮಾರ್ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆಗಳಿವೆ ಎಂಬ ಕೇಂದ್ರೀಕೃತ ಆನ್ಲೈನ್ ಮಾಹಿತಿಯನ್ನು ಬಿಬಿಎಂಪಿ ನೀಡಲಿದೆ. ಲಭ್ಯವಿರುವ ಹಾಸಿಗೆ, ವೆಂಟಿಲೇಟರ್ಗಳನ್ನು ಆನ್ಲೈನ್ನಲ್ಲಿ ಪಡೆಯಬಹುದು.
ಲಭ್ಯತೆ ಆಧಾರದ ಮೇಲೆ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಅನುಕೂಲವಾಗಬಹುದು ಎಂಬ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಆಸ್ಪತ್ರೆ ಹಾಸಿಗೆಗಳ ಡ್ಯಾಷ್ಬೋರ್ಡ್ ಆರಂಭದ ಲಿಂಕ್ ಟ್ವಿಟ್ ಮಾಡಿರುವ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 5879 ಹಾಸಿಗೆಗಳನ್ನು ಕೋವಿಡ್ಗೆ ಮೀಸಲಿರಿಸಲಾಗಿದೆ. ಸಾಮಾನ್ಯ ಹಾಸಿಗೆ 3159, ಎಚ್ಡಿಯು 2097, ಐಸಿಯು 317, ವೆಂಟಿಲೇಟರ್ 306 ಮೀಸಲಿಡಲಾಗಿದೆ.
ಭರ್ತಿಯಾಗಿರುವ ಹಾಸಿಗೆಗಳ ವಿವರ: ಸಾಮಾನ್ಯ ಹಾಸಿಗೆ 972, ಎಚ್ಡಿಯು 1208, ಐಸಿಯು 67, ವೆಂಟಿಲೇಟರ್ 120 ಸೇರಿದಂತೆ 2367 ಭರ್ತಿಯಾಗಿವೆ.ಸಾಮಾನ್ಯ ಹಾಸಿಗೆ 2187, ಎಚ್ಡಿಯು 889, ಐಸಿಯು 250, ವೆಮಟಿಲೇಟರ್ 186 ಲಭ್ಯವಿವೆ.
ಈ ಎಲ್ಲವನ್ನೂ ಡ್ಯಾಷ್ಬೋರ್ಡ್ನಲ್ಲಿ ಪ್ರಕಟಿಸಲಾಗಿದೆ. ಈ ಮಾಹಿತಿ ಆಧಾರದಲ್ಲಿ ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ನೇರವಾಗಿ ದಾಖಲಿಸಬಹುದಾಗಿದೆ.
ನಿನ್ನೆಯಷ್ಟೆ ಮುಖ್ಯಮಂತ್ರಿ ಯಡಿಯೂರಪ್ಪನವರು ಖಾಸಗಿ ಆಸ್ಪತ್ರೆಗಳ ಹಾಸಿಗೆಗಳ ವಿವರಗಳನ್ನು ನೀಡುವಂತೆ ತರಾಟೆಗೆ ತೆಗೆದುಕೊಂಡಿದ್ದರು. ಈ ವ್ಯವಸ್ಥೆ ರೂಪಿಸಲು ಸೂಚಿಸಿ 15 ದಿನವಾದರೂ ಇನ್ನೂ ಜಾರಿಗೆ ಬಂದಿಲ್ಲ ಎಂದು ಹರಿಹಾಯ್ದಿದ್ದರು.
ಈ ಬೆನ್ನಲ್ಲೇ ಬಿಬಿಎಂಪಿ ಆಯುಕ್ತ ಅನಿಲ್ಕುಮಾರ್ ಅವರು ಡ್ಯಾಷ್ಬೋರ್ಡ್ ಆರಂಭದ ಲಿಂಕ್ಅನ್ನು ಟ್ವಿಟ್ ಮಾಡಿ ವಿವರ ನೀಡಿದ್ದಾರೆ.