ಗಂಭೀರ ಸ್ಥಿತಿಯತ್ತ ಕರ್ನಾಟಕ : ಬೆಂಗಳೂರಿನಂತೆ ಈಗ ಜಿಲ್ಲೆ-ತಾಲ್ಲೂಕುಗಳಲ್ಲೂ ಬೆಡ್‍ ಸಮಸ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.27- ಕೊರೊನಾ ಸೋಂಕು ರಾಜ್ಯಾದ್ಯಂತ ತೀವ್ರವಾಗಿ ವ್ಯಾಪಿಸುತ್ತಿದೆ. ರಾಜಧಾನಿ ಬೆಂಗಳೂರಿಗೆ ಸೀಮಿತವಾಗಿದ್ದ ಬೆಡ್‍ಗಳ ಸಮಸ್ಯೆ ಈಗ ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಕಾಲಿಟ್ಟಿದೆ.

ಗ್ರಾಮೀಣ ಭಾಗದಲ್ಲೂ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ 19 ರೋಗಿಗಳಿಗೆ ಮೀಸಲಿಟ್ಟಿದ್ದ ಹಾಸಿಗೆಗಳು ಭರ್ತಿಯಾಗಿ ಅಲ್ಲೂ ಕೂಡ ಹಾಸಿಗೆ ಕೊರತೆ ಕಾಡುತ್ತಿದೆ.

ಖಾಸಗಿ ಆಸ್ಪತ್ರೆಯವರು ಕೊರೊನಾ ಸೋಂಕಿತರನ್ನು ಅಡ್ಮಿಟ್ ಮಾಡಿಕೊಳ್ಳಲು ಹಲವೆಡೆ ಮೀನಾಮೇಷ ಎಣಿಸುತ್ತಿರುವುದರಿಂದ ರೋಗಿಗಳು ಚಿಕಿತ್ಸೆಗಾಗಿ ಪರೆದಾಡುತ್ತಿದ್ದಾರೆ.

ಚಿಕಿತ್ಸೆ ವಿಳಂಬದಿಂದ ಕೆಲವೆಡೆ ರೋಗಿಗಳು ಸಾವನ್ನಪ್ಪುತ್ತಿರುವ ಘಟನೆಗಳು ನಡೆದಿವೆ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಲಾಕ್‍ಡೌನ್ ಮಾಡಿದ ಹಿನ್ನೆಲೆಯಲ್ಲಿ ನಗರ ವಾಸಿಗಳೆಲ್ಲ ಬೆಂಗಳೂರು ತೊರೆದು ತಮ್ಮ ಗ್ರಾಮಗಳಿಗೆ ತೆರಳಿದ್ದರಿಂದ ಸೋಂಕು ಹಳ್ಳಿಗಳಿಗೂ ವ್ಯಾಪಿಸಿದ್ದು, ಈಗ ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

ಬಹುತೇಕ ತಾಲ್ಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಗಳ ಕೋವಿಡ್ ಆಸ್ಪತ್ರೆಗಳು ಭರ್ತಿಯಾಗಿ ಚಿಕಿತ್ಸೆಗಾಗಿ ಸೋಂಕಿತರು ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಪ್ರತಿದಿನ ಐದು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ರಾಜಧಾನಿ ಬೆಂಗಳೂರಿನಲ್ಲಿ 2000 ದಷ್ಟು ಪ್ರಕರಣಗಳು ಪತ್ತೆಯಾದರೆ ಬಳ್ಳಾರಿ ಜಿಲ್ಲೆಯಲ್ಲಿ 579, ಮೈಸೂರಿನಲ್ಲಿ 230, ದಕ್ಷಿಣ ಕನ್ನಡದಲ್ಲಿ 199,

ಉಡುಪಿ ಜಿಲ್ಲೆಯಲ್ಲಿ 169, ಹಾಸನ 164, ಬೆಳಗಾವಿ 100, ಕಲಬುರಗಿ 152, ವಿಜಯಪುರ 132 ಹೀಗೆ ಪ್ರತಿ ಜಿಲ್ಲೆಗಳಲ್ಲಿ ಪ್ರತಿದಿನ 150ಕ್ಕೂ ಹೆಚ್ಚು ಕೊರೊನಾ ಪೀಡಿತರು ಪತ್ತೆಯಾಗುತ್ತಿದ್ದು, ಚಿಕಿತ್ಸೆ ನೀಡುವುದು ಸವಾಲಾಗಿದೆ.

ಜಿಲ್ಲಾಮಟ್ಟದಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲೂ ಕೂಡ ಹಾಸಿಗೆಗಳನ್ನು ಕಾಯ್ದಿರಿಸಿದ್ದರೂ ಖಾಸಗಿ ಆಸ್ಪತ್ರೆಯವರು ಎಂದಿನಂತೆ ತಮ್ಮ ವಸೂಲಿ ಬಾಜಿಗಿಳಿದಿದ್ದಾರೆ. ಇದಕ್ಕೆ ಬ್ರೇಕ್ ಹಾಕಲು ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಆದರೂ ಜನಸಾಮಾನ್ಯರಿಗೆ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ಆತಂಕದ ನಡುವೆ ಅಲೆದಾಟ ತಪ್ಪಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ನಿನ್ನೆ ದಾವಣಗೆರೆಯಲ್ಲಿ ಸೋಂಕಿತರೊಬ್ಬರು ಆಸ್ಪತ್ರೆಗಳಿಗೆ ಅಲೆದಾಡಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ.

ಅಲ್ಲಿನ ಜಿಲ್ಲಾಧಿಕಾರಿಯವರು, ಯಾವುದೇ ಆಸ್ಪತ್ರೆಯವರು ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದೇ ರೀತಿ ಬೆಳಗಾಂ, ಹುಬ್ಬಳ್ಳಿ-ಧಾರವಾಡ, ದಕ್ಷಿಣ ಕನ್ನಡ, ರಾಯಯಚೂರು, ಬೀದರ್ ಮುಂತಾದೆಡೆಯೂ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ದಿನೇ ದಿನೇ ಸೋಂಕು ಮತ್ತು ಸಾವಿನ ಗ್ರಾಫ್ ಏರಿಕೆಯಾಗುತ್ತಲೇ ಇದೆ. ಆಸ್ಪತ್ರೆಗಳು ಭರ್ತಿಯಾಗುತ್ತಿವೆ. ಖಾಸಗಿಯವರು ತಮ್ಮ ಎಂದಿನ ಧೋರಣೆ ಮುಂದುವರೆಸಿದ್ದಾರೆ.

ಸರ್ಕಾರ ಕಠಿಣ ಕ್ರಮದ ಮೂಲಕ ಜನಸಾಮಾನ್ಯರ ಆರೋಗ್ಯದ ಕಡೆ ಗಮನಹರಿಸಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕು, ಜನರ ಆತಂಕವನ್ನು ನಿವಾರಣೆ ಮಾಡಬೇಕು.

Facebook Comments

Sri Raghav

Admin