ಪಬ್‍ನಲ್ಲಿ ಶಿಳ್ಳೆ ಹೊಡೆದ ವಿಚಾರಕ್ಕೆ ಗಲಾಟೆ, ಬೀರು ಬಾಟಲಿನಿಂದ ಹಲ್ಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು , ಅ.22- ಪಬ್‍ನಲ್ಲಿ ಶಿಳ್ಳೆ ಹೊಡೆದ ವಿಚಾರಕ್ಕೆ ಗಲಾಟೆ ಉಂಟಾಗಿ ಬೀರು ಬಾಟಲಿನಿಂದ ರಿಯಲ್ ಎಸ್ಟೇಟ್ ಏಜೆಂಟನಿಗೆ ಹೊಡೆದಿರುವ ಘಟನೆ ಎಚ್.ಎಸ್.ಆರ್. ಲೇ ಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊನ್ನೆ ರಾತ್ರಿ ನಡೆದಿದೆ. ಬೇಗೂರು ನಿವಾಸಿ , ರಿಯಲ್ ಎಸ್ಟೇಟ್ ಏಜೆಂಟ್ ಸೂರ್ಯಕಾಂತ್ ಗಂಭೀರ ಗಾಯಗೊಂಡಿದ್ದು , ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ತಲೆಗೆ 18 ಹೊಲಿಗೆಗಳನ್ನು ಹಾಕಲಾಗಿದೆ.

ಎಚ್.ಎಸ್.ಆರ್. ಲೇ ಔಟ್ ಮೂರನೆ ಸೆಕ್ಟರ್ 17ನೆ ಕ್ರಾಸ್‍ನಲ್ಲಿರುವ ಪಬ್‍ವೊಂದಕ್ಕೆ ಮೊನ್ನೆ ರಾತ್ರಿ 9.30ರ ಸುಮಾರಿನಲ್ಲಿ ಕೇರಳ ಮೂಲದ 15 ಮಂದಿ ಯುವಕರು ಬರ್ತ್ ಡೇ ಪಾರ್ಟಿ ಮಾಡಲು ಬಂದಿದ್ದಾರೆ. ಆ ಸಂದರ್ಭದಲ್ಲಿ ಬೇಗೂರಿನ ನಿವಾಸಿ ಸೂರ್ಯಕಾಂತ್ ತನ್ನ ಸ್ನೇಹಿತರ ಜತೆ ಊಟ ಮಾಡಲು ಈ ಪಬ್‍ಗೆ ಹೋಗಿದ್ದರು.

ಸೂರ್ಯಕಾಂತ್ ವಾಶ್‍ರೂಂಗೆ ಹೋಗಿ ಶಿಳ್ಳೆ ಹೊಡೆದುಕೊಂಡು ಹಾಡು ಹಾಡುತ್ತಿದ್ದ. ಆ ವೇಳೆ ವಾಶ್ ರೂಂನಲ್ಲಿದ್ದ ಕೇರಳ ಮೂಲದ ವ್ಯಕ್ತಿ ಅದನ್ನು ಪ್ರಶ್ನಿಸಿದ್ದಾರೆ. ಕೇರಳದ ವ್ಯಕ್ತಿ ತನ್ನ ಭಾಷೆಯಲ್ಲಿ ಮಾತನಾಡಿದಾಗ ತನಗೆ ಬೈಯುತ್ತಿದ್ದಾನೆ ಎಂದುಕೊಂಡ ಸೂರ್ಯಕಾಂತ್ ನಾನು ಏನಾದರೂ ಮಾಡುತ್ತೇನೆ. ಅದನ್ನು ಕೇಳಲು ನೀನಾರು ಎಂದು ಕನ್ನಡದಲ್ಲಿ ಹೇಳಿದಾಗ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ.

ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಕೇರಳದ ಸ್ನೇಹಿತರು ಏಕಾಏಕಿ ಸೂರ್ಯಕಾಂತ್ ಜತೆ ಜಗಳವಾಡಿ ಬೀರು ಬಾಟಲಿನಿಂದ ತಲೆಗೆ ಬಲವಾಗಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾರೆ.ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸೋರುತ್ತಿದ್ದರಿಂದ ಸೂರ್ಯಕಾಂತ್ ಅವರನ್ನು ತಕ್ಷಣ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಎಚ್.ಎಸ್.ಆರ್. ಲೇ ಔಟ್ ಠಾಣೆ ಪೊಲೀಸರು ಪಬ್‍ಗೆ ಧಾವಿಸಿ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಸ್ಥಳದಲ್ಲಿದ್ದ ಸಿಸಿ ಟಿವಿಗಳನ್ನು ಪರಿಶೀಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.

ಮೂವರ ಬಂಧನ: ಈ ಪ್ರಕರಣಕ್ಕೆ ಸಂಬಂಸಿದಂತೆ ಎಚ್.ಎಸ್.ಆರ್. ಲೇ ಔಟ್ ಠಾಣೆ ಪೊಲೀಸರು ಪಬ್‍ನಲ್ಲಿದ್ದ ಸಿಸಿ ಟಿವಿ ಫುಟೇಜ್ ಆಧಾರದ ಮೇಲೆ ಕೇರಳದ ರಾಹುಲ್ ರಾಜ್ , ಯುವರಾಜ ಮತ್ತು ಗಣೇಶ್ ಎಂಬುವರನ್ನು ಬಂಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments