ಬೆಂಗಳೂರಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ..!
ಆನೇಕಲ್,ಜ.27- ಬೇಗೂರಿನ ಪ್ರೆಸ್ಟೀಜ್ ಹಾಗೂ ಬಿಟಿಎಂ ಬಡಾವಣೆ ಬಳಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ನಿವಾಸಿಗಳ ನಿದ್ದೆಗೆಡಿಸಿದೆ. ಕಳೆದ ಭಾನುವಾರ ಅಪಾರ್ಟ್ಮೆಂಟ್ ಬಳಿ ಚಿರತೆ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರಿಂದ ನಿವಾಸಿಗಳು ಆತಂಕಕ್ಕೀಡಾಗಿದ್ದರು. ಕಳೆದ ರಾತ್ರಿ ಮತ್ತೆ ಚಿರತೆ ಅಪಾರ್ಟ್ಮೆಂಟ್ ಒಳಗೆ ಒಡಾಡಿದ್ದು, ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಚಿರತೆ ಸೆರೆಗಾಗಿ ನಿವಾಸಿಗಳು ಮಾಡಿದ ಮನವಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಅಪಾರ್ಟ್ಮೆಂಟ್ ಬಳಿ ಬೋನ್ ಇಡಲಾಗಿತ್ತು. ಆದರೆ, ಚಿರತೆ ಮಾತ್ರ ಸೆರೆಯಾಗದೆ ಚಳ್ಳೆಹಣ್ಣು ತಿನ್ನಿಸುತ್ತ ಓಡಾಡುತ್ತಿದೆ. ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ ಸಿಬ್ಬಂದಿ ಬೋನಿನ ಬಳಿ ಮೇಕೆ ಮರಿಯನ್ನು ಕಟ್ಟಿ ಚಿರತೆ ಸೆರೆಗಾಗಿ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.
ಮನೆಯಿಂದ ಹೊರಬರಲು ನಿವಾಸಿಗಳು ಹೆದರುತ್ತಿದ್ದಾರೆ. ಕಳೆದ ಒಂದು ವಾರದಿಂದಲೂ ಸಹ ಚಿರತೆಯ ಭಯದಲ್ಲೇ ಪ್ರತಿನಿತ್ಯ ಜೀವನ ನಡೆಸುವಂತಾಗಿದೆ. ಯಾವ ಕ್ಷಣದಲ್ಲಿ ಚಿರತೆ ಪ್ರತ್ಯಕ್ಷವಾಗುತ್ತದೆಯೋ ಎಂಬ ಆತಂಕದಲ್ಲೇ ಕಾಲ ಜನರು ಕಾಲ ಕಳೆಯುತ್ತಿದ್ದಾರೆ. ಪದೇ ಪದೇ ಚಿರತೆ ಪ್ರತ್ಯಕ್ಷವಾಗುತ್ತಿದ್ದು, ಬನ್ನೇರುಘಟ್ಟ ಅರಣ್ಯದಿಂದ ಚಿರತೆಗಳು ನಗರದತ್ತ ಹೊರಬರುತ್ತಿವೆ ಎಂದು ಶಂಕಿಸಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಮಡಿವಾಳದ ಬಳಿಯೂ ಸಹ ಚಿರತೆ ಕಾಣಿಸಿಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಸೆರೆಹಿಡಿದಿದ್ದರು. ಈಗ ಬೇಗೂರು ಬಳಿ ಚಿರತೆ ಬಂದಿದ್ದು, ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.