ಸರ್ಕಾರಕ್ಕೆ ಕಂಟಕವಾಗುತ್ತಾ ಬೆಳಗಾವಿ ಕಾಂಗ್ರೆಸ್ ನಾಯಕರ ಮುಸುಕಿನ ಗುದ್ದಾಟ..?

ಈ ಸುದ್ದಿಯನ್ನು ಶೇರ್ ಮಾಡಿ

Belagavi-Polirtics

ಬೆಂಗಳೂರು, ಸೆ.5-ಬೆಳಗಾವಿ ಜಿಲ್ಲಾ ರಾಜಕಾರಣದ ಮುಸುಕಿನ ಗುದ್ದಾಟ ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಇದೇ ಬಿಕ್ಕಟ್ಟು ಸರ್ಕಾರಕ್ಕೆ ಮುಳುವಾಗುತ್ತಾ ಎಂಬ ಆತಂಕ ಎದುರಾಗಿದೆ. ಸರ್ಕಾರ ರಚನೆಗೆ ಪ್ರಮುಖ ಕಾರಣಕರ್ತರಾಗಿದ್ದ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಬೆಳಗಾವಿಯ ಜಾರಕಿಹೊಳಿ ಸಹೋದರರು ಪರಸ್ಪರ ಮುಖಾಮುಖಿಯಾಗಿರುವುದು ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ಆತಂಕ ಉಂಟು ಮಾಡಿದೆ. ಈ ಎರಡೂ ಬಣಗಳು ಬಲಿಷ್ಠವಾಗಿದ್ದು, ಇವರ ಬೆಂಬಲದಿಂದ ಸರ್ಕಾರ ನಡೆಯುತ್ತಿದೆ.

ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ವೈಷಮ್ಯ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬಿಕ್ಕಟ್ಟು ಉಂಟು ಮಾಡಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪಕ್ಷ ಹೆಚ್ಚಿನ ಒತ್ತು ನೀಡಿದರೆ ಸರ್ಕಾರಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ. ಒಂದು ವೇಳೆ ಲಕ್ಷ್ಮೀ ಅವರ ಪರವಾಗಿ ಕಾಂಗ್ರೆಸ್ ಮುಖಂಡರು ಕೆಲಸ ಮಾಡಿದರೆ ಸರ್ಕಾರ ಕೆಡವಲೂ ನಾವು ಸಿದ್ಧ ಎಂದು ರಮೇಶ್ ಜಾರಕಿಹೊಳಿ ತಮ್ಮ ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇದು ಸರ್ಕಾರದಲ್ಲಿರುವವರ ಆತಂಕಕ್ಕೆ ಕಾರಣವಾಗಿದೆ.

ಈ ಹಿಂದೆ ಸಹೋದರರಾದ ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಅವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಅವರಿಬ್ಬರೂ ಸಹೋದರರಾಗಿದ್ದರೂ ಅಧಿಕಾರದ ವಿಷಯ ಬಂದಾಗ ಇಬ್ಬರ ನಡುವೆ ಪೈಪೋಟಿ ನಡೆಯುತ್ತಿತ್ತು. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪ್ರಕರಣದ ಬಳಿಕ ಸಹೋದರರಿಬ್ಬರೂ ಒಂದಾಗಿದ್ದಾರೆ. ಮಾತ್ರವಲ್ಲ ಲಕ್ಷ್ಮೀ ಅವರ ವಿರುದ್ಧ ಬುಸುಗುಡುತ್ತಿದ್ದಾರೆ.

ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಡುವೆ ಹಿಂದಿನಿಂದಲೂ ಉತ್ತಮ ಬಾಂಧವ್ಯವಿತ್ತು. ಆದರೆ ಸಂಪುಟ ವಿಸ್ತರಣೆ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಪ್ರಭಾವ ಬಳಸಿ ಸಚಿವರಾಗಲು ಪ್ರಯತ್ನ ನಡೆಸಿದ್ದರು. ಇದು ರಮೇಶ್ ಜಾರಕಿಹೊಳಿ ಅವರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಮೊದಲ ಬಾರಿಗೆ ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಚಿವರಾಗುವುದು ಜಾರಕಿಹೊಳಿ ಸಹೋದರರಿಗೆ ಇಷ್ಟವಿರಲಿಲ್ಲ. ಕೊನೆಗೆ ರಮೇಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ಬೆಂಬಲದೊಂದಿಗೆ ಸಚಿವ ಸ್ಥಾನ ಅಲಂಕರಿಸಿದರು.

ಇದರಿಂದ ಹಿನ್ನಡೆ ಅನುಭವಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಕ್ಷೇತ್ರವಾದ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಪಿಎಲ್‍ಡಿ ಬ್ಯಾಂಕ್‍ನ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಸಲು ಮುಂದಾದಾಗ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವಿನ ವೈಷಮ್ಯ ಇನ್ನಷ್ಟು ಹೆಚ್ಚಾಯಿತು.

ಈ ಬ್ಯಾಂಕ್ ಇದುವರೆಗೆ ಸಂಪೂರ್ಣವಾಗಿ ಜಾರಕಿಹೊಳಿ ಸಹೋದರರ ನಿಯಂತ್ರಣದಲ್ಲಿತ್ತು. ಅವರ ಬೆಂಬಲಿಗರೇ ಅವಿರೋಧವಾಗಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾಗುತ್ತಿದ್ದರು. ಆದರೆ ಶಾಸಕರಾದ ಬಳಿಕ ಲಕ್ಷ್ಮೀ ಅವರು ತಮ್ಮ ಬೆಂಬಲಿಗರನ್ನು ನಿರ್ದೇಶಕರನ್ನಾಗಿ ಮಾಡಲು ಮುಂದಾದರು. ಇದಕ್ಕಾಗಿ ಚುನಾವಣೆ ನಡೆಸಬೇಕು ಎಂಬ ಬೇಡಿಕೆ ಇಟ್ಟಾಗ ಎರಡೂ ಬಣಗಳ ನಡುವಿನ ಮುಸುಕಿನ ಗುದ್ದಾಟ ಜೋರಾಯಿತು. ಮಾತ್ರವಲ್ಲ ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.

ಬ್ಯಾಂಕ್‍ಗೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆಯನ್ನು ನಡೆಸಿದ್ದರು. ಇದೀಗ ಧಾರವಾಡ ಹೈಕೋರ್ಟ್ ಪೀಠ ಮಹತ್ವದ ತೀರ್ಪು ನೀಡಿ, ಪಿಎಲ್‍ಡಿ ಬ್ಯಾಂಕ್‍ಗೆ ಚುನಾವಣೆ ನಡೆಸುವಂತೆ ಸೂಚಿಸಿದೆ. ಇದರಿಂದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕೈ ಮೇಲಾಗಿದ್ದು, ಮುಂದೆ ಇದು ಯಾವ ಬೆಳವಣಿಗೆಗೆ ಕಾರಣವಾಗಬಹುದು ಎಂಬ ಆತಂಕ ಕಾಂಗ್ರೆಸ್ ನಾಯಕರಲ್ಲಿದೆ.
ಮೊದಲಿನಿಂದಲೂ ಬ್ಯಾಂಕ್‍ಗೆ ಚುನಾವಣೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಜಾರಕಿಹೊಳಿ ಸಹೋದರರು ಅನಿವಾರ್ಯವಾಗಿ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಬೇಕಾಗಿದೆ. ಹೈಕೋರ್ಟ್ ತೀರ್ಪು ಹೆಬ್ಬಾಳ್ಕರ್ ಅವರ ಪರವಾಗಿ ಬಂದಿರುವುದಕ್ಕೆ ಜಾರಕಿಹೊಳಿ ಸಹೋದರರು ರೊಚ್ಚಿಗೆದ್ದಿದ್ದಾರೆ.

ಸಚಿವ ಡಿ.ಕೆ.ಶಿವಕುಮಾರ್ ಅವರು ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು. ಈ ರೀತಿಯ ಹಸ್ತಕ್ಷೇಪವನ್ನು ನಾವು ಸಹಿಸುವುದಿಲ್ಲ ಎಂದು ಈಗಾಗಲೇ ರಮೇಶ್ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ. ಮಾತ್ರವಲ್ಲ ಈ ರೀತಿಯ ಹಸ್ತಕ್ಷೇಪ ಮಾಡಿದರೆ ನಾವು ಯಾವುದೇ ತೀರ್ಮಾನ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಪರೋಕ್ಷವಾಗಿ ಸರ್ಕಾರ ಕೆಡವುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.  ಈಗಾಗಲೇ ಜಾರಕಿಹೊಳಿ ಸಹೋದರರು ತಮ್ಮ ಬೆಂಬಲಿಗ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಬೆಳಗಾವಿ ಸಮಸ್ಯೆ ಸರ್ಕಾರಕ್ಕೆ ಮುಳುವಾಗುತ್ತಾ ಎಂಬ ಆತಂಕ ಕೂಡ ಕಾಂಗ್ರೆಸ್ ಮತ್ತು ಸರ್ಕಾರದಲ್ಲಿರುವವನ್ನು ಕಾಡುತ್ತಿದೆ.

ರಮೇಶ್ ಜಾರಕಿಹೊಳಿ ಅವರು ನಿನ್ನೆ, ನನಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮೇಲೆ ಯಾವುದೇ ದ್ವೇಷವಿಲ್ಲ. ನಾವು ಒಂದೇ ಪಕ್ಷದಲ್ಲಿರುವವರು ಎಂದು ಹೇಳಿಕೆ ನೀಡಿದ್ದರೂ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಮಾತ್ರ ಸುಳ್ಳಲ್ಲ. ಇವರಿಬ್ಬರ ನಡುವೆ ಸಂಬಂಧ ಹದಗೆಡಲು ಆರ್ಥಿಕ ವ್ಯವಹಾರವೂ ಕೂಡ ಕಾರಣ ಎಂದು ಹೇಳಲಾಗುತ್ತಿದೆ. ಇದೀಗ ಪಿಎಲ್‍ಡಿ ಚುನಾವಣೆ ನಡೆದು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಣ ಗೆದ್ದರೆ ರಮೇಶ್ ಜಾರಕಿಹೊಳಿ ಸುಮ್ಮನಿರುತ್ತಾರಾ ಅಥವಾ ತೀರ್ಪನ್ನು ಒಪ್ಪಿ ಮೌನಕ್ಕೆ ಶರಣಾಗುತ್ತಾರಾ ಎಂಬುದನ್ನು ಕಾದುನೋಡಬೇಕಾಗಿದೆ.

Facebook Comments

Sri Raghav

Admin