‘ಮಹಾ’ ಮಳೆಗೆ ಬೆಳಗಾವಿಯ 9 ಸೇತುವೆಗಳು ಜಲಾವೃತ, ಹೈಅಲರ್ಟ್ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಸೆ.9-ಮಹಾರಾಷ್ಟ್ರ ಮಳೆಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಮುಂದುವರದಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ, ಅಥಣಿ, ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ ತಾಲ್ಲೂಕುಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಹಲವೆಡೆ ನದಿ ಪಾತ್ರ ದಾಟಿ ಜಮೀನುಗಳಿಗೆ ನೀರು ನುಗ್ಗಿದೆ. ಸುಮಾರು 9 ಸೇತುವೆಗಳು ಜಲಾವೃತಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿದೆ.

ನದಿ ತೀರದ ಜನರು ಸ್ವಯಂಪ್ರೇರಿತರಾಗಿ ಗ್ರಾಮಗಳನ್ನು ತೊರೆಯುತ್ತಿದ್ದಾರೆ. ಅಥಣಿ ತಾಲೂಕಿನ ತೀರ್ಥ, ಸಪ್ತಸಾಗರ, ಉಲಗಬಾಳ ಗ್ರಾಮಗಳ ಜನರಲ್ಲಿ ಆತಂಕದ ಛಾಯೆ ಮೂಡಿದೆ.
ಚಿಕ್ಕೋಡಿ ತಾಲೂಕಿನಲ್ಲಿ ಯಡಿಯೂರ, ಮಾಂಜರಿ, ಚಂದೂರ ಗ್ರಾಮಗಳಲ್ಲಿ ಹೊಲ ಗದ್ದೆಗಳು ಜಲಾವೃತಗೊಂಡಿವೆ. ರಾಯಚೂರಿನ ದೇವದುರ್ಗ, ಶಹಾಪುರ ಸಂಚಾರ ಬಂದ್ ಆಗಿದೆ. ಹೂವಿನಹೆಡಗಿ ಸೇತುವೆ ಮುಳುಗಡೆಯಾಗಿದೆ.ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳಲ್ಲಿ ಮತ್ತೆ ಪ್ರವಾಹ ಸಂಕಷ್ಟ ಎದುರಾಗಿದೆ.

ಇತ್ತ ಕುಂದಾನಗರಿ ಬೆಳಗಾವಿಯಲ್ಲಿ ಪ್ರವಾಹದ ಭೀತಿ ತಪ್ಪಿಲ್ಲ. ಮಳೆರಾಯನ ಆರ್ಭಟವೂ ಕೂಡ ಜೋರಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆಗೆ ತತ್ತರಿಸಿದ್ದ ಖಾನಾಪುರದಲ್ಲಿ ವರುಣನ ಆರ್ಭಟ ಕೊಂಚ ಕಡಿಮೆಯಾಗಿದೆ. ಆದರೆ ನವಿಲು ತೀರ್ಥ ಜಲಾಶಯದಿಂದ ನೀರನ್ನು ಹೊರಬಿಡುವ ಪ್ರಮಾಣ ಹೆಚ್ಚಾಗಿದ್ದು, ಅನೇಕ ಗ್ರಾಮಗಳಿಗೆ ನೀರು ನುಗ್ಗಿದೆ.

ರಾಮದುರ್ಗ ತಾಲೂಕಿನ ಸುರೇಬಾನಾ, ಸುನ್ನಾಳ, ಘಟಕನೂರು, ಹಂಪಿಹೊಳೆ, ಇಡಗಲ್ಲ, ಅವರಾದಿ, ಹಲಗತ್ತಿ ಗ್ರಾಮಗಳಿಗೆ ನೀರು ನುಗ್ಗಿದೆ. ಕುಳಗೇರಿ, ಕೊಣ್ಣೂರು, ಹೊಳೆ ಹಾಲೂರು, ಬಾದಾಮಿ ಸೇತುವೆ ಸಂಪರ್ಕ ಕಡಿತಗೊಂಡಿದೆ. ರಾಮದುರ್ಗ ತಾಲೂಕಿನ ದೊಡ್ಡ ಗ್ರಾಮವಾದ ಸುರೇಬಾನದಲ್ಲಿ ನಾಡಕಚೇರಿಗೂ ನೀರು ನುಗ್ಗಿದೆ.

ಸುನ್ನಾಳ ಗ್ರಾಮದ ಗ್ರಾಮಸ್ಥರು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಮೊದಲ ಸಲ ಪ್ರವಾಹ ಬಂದಾಗ ಮಲಪ್ರಭಾ ನದಿಯ ಆಳ ಹೆಚ್ಚಿತ್ತು. ಪ್ರವಾಹ ಇಳಿಮುಖವಾದ ನಂತರ 8-10 ಅಡಿಗಳಷ್ಟು ಉಸುಕು ನದಿಯಲ್ಲಿ ಶೇಖರಣೆಗೊಂಡು ತಳದ ಆಳ ಕಡಿಮೆಯಾಗಿದೆ. ಹೀಗಾಗಿ ನದಿ ಬೇಗ ತುಂಬಿ ಉಳಿದ ನೀರು ಗ್ರಾಮಗಳಿಗೆ ನುಗ್ಗುತ್ತಿದೆ. ಇದರಿಂದ ಮಳೆ ಕಡಿಮೆಯಾದರೂ ಪ್ರವಾಹದ ಭೀತಿ ಮಾತ್ರ ಜನರನ್ನು ಕಾಡುತ್ತಿದೆ.

ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲೂಕಿನ ಕೂಡಲ ಸಂಗಮ ದೇವಾಲಯ ಜಲಾವೃತವಾಗಿದೆ. ತುಂಬಿ ಹರಿಯುತ್ತಿರುವ ಕೃಷ್ಣಾ, ಮಲಪ್ರಭಾ ನದಿ ಪಾತ್ರದ ಜನರು ಅಪಾಯಕ್ಕೆ ಸಿಲುಕಿದ್ದಾರೆ. ಗುಳೇದ ಗುಡ್ಡ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಗೋನಾಳ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಬೆಳಗಾವಿ-ಗೋವಾ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ದೇವದುರ್ಗ-ಶಹಾಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಇತ್ತ ಮಡಿಕೇರಿಯಲ್ಲೂ ವರುಣನ ಆರ್ಭಟ ಮುಂದುವರೆದಿದೆ. ಭಾಗಮಂಡಲ, ತ್ರಿವೇಣಿ ಸಂಗಮ ಮೂರನೇ ಬಾರಿಗೆ ಜಲಾವೃತವಾಗಿದೆ. ಭಾಗಮಂಡಲ, ನಾಪೆÇಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ. ತಲಕಾವೇರಿಗೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ದಕ್ಷಿಣ ಕೊಡಗಿನಲ್ಲೂ ಮಳೆಯ ಆರ್ಭಟ ಮುಂದುವರೆದಿದೆ.

Facebook Comments