ತನ್ನ ಜಮೀನಿನಲ್ಲಿ ಮೇಕೆ-ಎಮ್ಮೆ ಮೇಯಿಸಬೇಡಿ ಎಂದ ಯುವಕನ ಬರ್ಬರ ಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಜೂ 28- ತನ್ನ ಜಮೀನಿನಲ್ಲಿ ಮೇಕೆ, ಎಮ್ಮೆ ಮೇಯಿಸಬೇಡ ಎಂದ ಯುವಕನೊಬ್ಬನನ್ನು ನಾಲ್ವರು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಮುತ್ಯಾನಟ್ಟಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಸಿದ್ರಾಯಿ ಕಣ್ಣಪ್ಪಾ ನಾಯಿಕ(30) ಕೊಲೆಯಾದ ದುರ್ದೈವಿ. ಸಿದ್ರಾಯಿ ನಾಯಕ ಮುತ್ಯಾನಟ್ಟಿಯಲ್ಲಿರುವ ತಮ್ಮ ಜಮೀನಲ್ಲಿ ಮಾವಿನ ತೋಟ ಮಾಡಿದ್ದು ಅದರಲ್ಲಿ ಪ್ರತಿ ದಿನ ಆರೋಪಿ ಕುಟುಂಬದವರು ಕುರಿ ಮತ್ತು ಎಮ್ಮೆಗಳನ್ನು ಇವರಿಲ್ಲದ ಸಮಯದಲ್ಲಿ ಮೇಯಿಸಲು ಹೋಗುತ್ತಿದ್ದರು.

ಈ ವಿಷಯ ತಿಳಿದ ಸಿದ್ರಾಯಿ ಜಮೀನಿನಲ್ಲಿ ಮೇಯಿಸದಂತೆ ಹೇಳಿದ್ದಾನೆ. ಆದರೆ ಇದಕ್ಕೆ ಕ್ಯಾರೆ ಅನ್ನದ ಆರೋಪಿ ಕುಟುಂಬದವರು ಹಳೇ ಚಾಳಿ ಮುಂದುವರಿದ್ದರಿಂದ ಇವರ ನಡುವೆ ವಾದ ವಿವಾದ ನಡೆದಿದೆ.

ಇದೇ ಕಾರಣಕ್ಕೆ ನಿನ್ನೆ ಸಿದ್ರಾಯಿಯನ್ನು ಹುಡುಕಿಕೊಂಡು ಹೋದ ಆರೋಪಿಗಳು ಚವ್ಹಾಟ ಗಲ್ಲಿಯ ತಮ್ಮ ಮನೆಯ ಹತ್ತಿರ ನಿಂತಿದ್ದ ಸಿದ್ರಾಯಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಸಿದ್ರಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕೊಲೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರೆಂದು ತಿಳಿದು ಬಂದಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆಗೆ ಕಾಕತಿ ಠಾಣಾ ಪೊಲೀಸರು ಬಲೆ ಬೀಸಿದ್ದಾರೆ.

ಘಟನೆ ಬಗ್ಗೆ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಕಾಕತಿ ಪಿ ಐ ಶ್ರೀಶೈಲ ಕೌಜಲಗಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಈ ಘಟನೆಗೆ ಸಂಭಂದಿಸಿದಂತೆ ಕಾಕತಿ ಫೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Facebook Comments

Sri Raghav

Admin