ಬೆಳಗಾವಿ ಪಾಲಿಕೆ ಕಚೇರಿ ಎದುರು ಹೈಡ್ರಾಮಾ , ಕನ್ನಡ ಧ್ವಜಸ್ತಂಭ ನೆಟ್ಟ ಕನ್ನಡಿಗರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಡಿ.28- ಇಲ್ಲಿನ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಸ್ಥಾಪಿಸಲು ಯತ್ನಿಸಿದ ಸರ್ವೋದಯ ಕನ್ನಡ ಸಂಘಟನೆಯ ಕಾರ್ಯಕರ್ತರನ್ನು ಮಾರ್ಕೆಟ್ ಠಾಣೆ ಪೊಲೀಸರು ತಡೆದು ವಿಫಲಗೊಳಿಸಿದ್ದಾರೆ. ಕನ್ನಡಪರ ಹೋರಾಟಗಾರ ಸರ್ವೋದಯ ಸಂಘಟನೆ ಅಧ್ಯಕ್ಷ ಶ್ರೀನಿವಾಸ ತಾಳೂಕರ ನೇತೃತ್ವದಲ್ಲಿ ಧ್ವಜಸ್ತಂಭವನ್ನು ಪಾಲಿಕೆ ಎದುರು ನೆಡುವ ಯತ್ನ ನಡೆಯಿತು. ಇಪ್ಪತ್ತಕ್ಕೂ ಹೆಚ್ಚು ಕಾರ್ಯಕರ್ತರು ಧ್ವಜಸ್ತಂಭ ಹೊತ್ತು ಓಡುತ್ತ ಬಂದು ನೆಡಲು ಪ್ರಯತ್ನಿಸಿದರು.

ಈ ವೇಳೆ ಎಚ್ಚೆತ್ತ ಪೊಲೀಸರು ಅನುಮತಿ ಇಲ್ಲದೆ ಧ್ವಜಸ್ತಂಭ ನೆಡುವಂತಿಲ್ಲ ಎಂದು ಹೋರಾಟಗಾರರನ್ನು ತಡೆದರು.  ಈ ಸಂದರ್ಭದಲ್ಲಿ ಪೊಲೀಸರು ಮತ್ತು ಹೋರಾಟಗಾರರ ನಡುವೆ ವಾಕ್ಸಮರ ಹಾಗೂ ತಳ್ಳಾಟ, ನೂಕಾಟಗಳು ನಡೆದವು. ಆ ನಂತರ ನೆಟ್ಟಿದ್ದ ಧ್ವಜಸ್ತಂಭವನ್ನು ಪೊಲೀಸರು ತೆರವುಗೊಳಿಸಿದರು. ಮಹಾನಗರ ಪಾಲಿಕೆ ಮೇಲೆ ಕನ್ನಡಧ್ವಜ ಹಾರಬೇಕೆಂಬ ಕನ್ನಡಿಗರ ಬಹುದಿನದ ಕನಸು ನೆರವೇರಿತ್ತಾದರೂ ನಂತರ ಪೊಲೀಸರಿಂದ ತೆರವುಗೊಂಡಿತು.

ದಿಢೀರ್ ನಡೆದ ಈ ಘಟನೆಯಿಂದ ಮಹಾನಗರ ಪಾಲಿಕೆ ಎದುರು ಆತಂಕದ ವಾತಾವರಣ ಉಂಟಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ನಗರದಲ್ಲಿ ಅಶಾಂತಿ ಉಂಟಾಗದಿರಲೆಂದುಪೊಲೀಸರು ನೆಟ್ಟಿದ್ದ ಧ್ವಜ ಸ್ತಂಭ ಸಹಿತ ತೆರವು ಮಾಡಿದರು. ನಂತರ ಹೋರಾಟಗಾರರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಯಿತು. ಪೊಲೀಸರ ಈ ಕ್ರಮವನ್ನು ಖಂಡಿಸಿ ಹೋರಾಟಗಾರರು ಧ್ವಜಸ್ತಂಭಕ್ಕೆ ಅಣುಕು ನೇಣು ಹಾಕಿಕೊಂಡು ಪ್ರತಿಭಟನೆ ನಡೆಸಿದರು.

ಹೋರಾಟಗಾರ್ತಿ ಕಸ್ತೂರಿಗೆ ಸನ್ಮಾನ:
ಬೆಳಗಾವಿ ಪಾಲಿಕೆ ಕಚೇರಿ ಎದುರು ಕನ್ನಡ ಧ್ವಜಸ್ತಂಭ ಸ್ಥಾಪನೆಯಾಗುವವರೆಗೂ ಚಪ್ಪಲಿ ಹಾಕಲ್ಲ ಎಂದು ಪ್ರತಿಜ್ಞೆ ಮಾಡಿ ಕಳೆದ 16 ವರ್ಷಗಳಿಂದ ಬರಿಗಾಲಲ್ಲೇ ನಡೆಯುತ್ತಿದ್ದ ಹೋರಾಟಗಾರ್ತಿ ಕಸ್ತೂರಿಯವರಿಗೆ ಚಪ್ಪಲಿ ತೊಡಿಸುವ ಮೂಲಕ ಹೋರಾಟಗಾರರು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.

Facebook Comments