ಅಧಿವೇಶನದಲ್ಲಿ ಅತಿವೃಷ್ಟಿ-ಬೆಳೆ ಹಾನಿ ಚರ್ಚೆಗೆ ಜೆಡಿಎಸ್ ತೀರ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಡಿ.16-ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಉಂಟಾಗಿರುವ ಅತಿವೃಷ್ಟಿ, ಬೆಳೆ ಹಾನಿ ಹಾಗೂ ಉತ್ತರ ಕರ್ನಾಟಕದ ನೀರಾವರಿ ವಿಚಾರಗಳ ಬಗ್ಗೆ ಆದ್ಯತೆ ಮೇರೆಗೆ ಚರ್ಚೆ ನಡೆಸಲು ನಿನ್ನೆ ರಾತ್ರಿ ನಡೆದ ಜೆಡಿಎಸ್ ಶಾಸಕಾಂಗ ಸಭೆ ತೀರ್ಮಾನಿಸಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡಪ್ಪ ಕಾಶ್ಯಂಪುರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಹಲವು ಶಾಸಕರು ಭಾಗವಹಿಸಿದ್ದರು.

ಈ ವಾರ ಈ ಎರಡು ವಿಚಾರಗಳಿಗೆ ಹೆಚ್ಚು ಆದ್ಯತೆ ನೀಡುವ ಜೊತೆಗೆ ರಾಜ್ಯದ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ವಿಚಾರದ ಬಗ್ಗೆ ಸದನದಲ್ಲಿ ದನಿ ಎತ್ತಲು ತೀರ್ಮಾನಿಸಲಾಯಿತು. ಸರ್ಕಾರ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಿದರೆ ವಿರೋಧಿಸಲು ಉದ್ದೇಶಿಸಲಾಗಿದೆ.

ಮಳೆ ಹಾನಿಯಿಂದ ಉಂಟಾದ ಬೆಳೆಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ. ಹಾಳಾಗಿರುವ ರಸ್ತೆಗಳ ದುರಸ್ತಿಯಾಗಿಲ್ಲ, ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡಿಲ್ಲ, ಕೋವಿಡ್‍ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಸಮರ್ಪಕವಾಗಿ ಪರಿಹಾರ ನೀಡದಿರುವುದು ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ.

ಮುಂದಿನ ವಾರ ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿವೇಶನಕ್ಕೆ ಆಗಮಿಸಲಿದ್ದು, ಆ ಸಂದರ್ಭದಲ್ಲಿ ಮತ್ತೊಮ್ಮೆ ಸಭೆ ಸೇರಿ ಇತರೆ ವಿಚಾರಗಳ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಯಿತು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಡೆದ ಮೇಲ್ಮನೆ ಚುನಾವಣೆ ಫಲಿತಾಂಶದ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ ಆರು ಕ್ಷೇತ್ರಗಳಲ್ಲಿ ಸ್ರ್ಪಧಿಸಿ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿ ನಾಲ್ಕು ಕ್ಷೇತ್ರಗಳಲ್ಲಿ ಸೋತಿರುವ ಬಗ್ಗೆ ಗಂಭೀರ ಚರ್ಚೆಯಾಗಬೇಕಿದೆ.

ಕಳೆದ ಬಾರಿ ಗೆದ್ದಿದ್ದ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಪಕ್ಷ ಸೋತಿರುವ ಬಗ್ಗೆಯೂ ಅವಲೋಕನ ಮಾಡಬೇಕಿದೆ ಎಂದು ಸಭೆಯಲ್ಲಿ ಅಭಿಪ್ರಾಯ ಪಡಲಾಯಿತು ಎಂದು ತಿಳಿದುಬಂದಿದೆ.  ಈಗಾಗಲೇ ಅತಿವೃಷ್ಟಿ, ಬೆಳೆ ಹಾನಿ ಕುರಿತ ಚರ್ಚೆಯಲ್ಲಿ ಬಂಡೆಪ್ಪ ಕಾಶ್ಯಂಪುರ್ ಸೇರಿದಂತೆ ಜೆಡಿಎಸ್‍ನ ಹಲವು ಶಾಸಕರು ಸದನದಲ್ಲಿ ವಿಷಯ ಪ್ರಸ್ತಾಪಿಸಿ ಸೂಕ್ತ ಪರಿಹಾರಕ್ಕೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

Facebook Comments