ಬೆಳಗಾವಿ ಉಪಸಮರದ ಅಖಾಡಕ್ಕಿಳಿಯಲಿದ್ದಾರೆ ಲಕ್ಷ್ಮೀಹೆಬ್ಬಾಳ್ಕರ್..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.27- ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ಅವರನ್ನು ಕಣಕ್ಕಿಳಿಸಬೇಕೆಂಬ ಒತ್ತಡಗಳು ಕಾಂಗ್ರೆಸ್‍ನಲ್ಲಿ ವ್ಯಾಪಕವಾಗಿದೆ. ಬೆಳಗಾವಿ ಸೇರಿದಂತೆ ಉಪಚುನಾವಣೆ ನಡೆಯಬಹುದಾದ ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿ ಆಯ್ಕೆಯನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ. ಒಟ್ಟು ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಖೈರುಗೊಳಿಸಿ ಹೈಕಮಾಂಡ್‍ಗೆ ಪಟ್ಟಿ ರವಾನೆ ಮಾಡಲಾಗಿದೆ. ಸಿಂಧಗಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಚರ್ಚೆ ನಡೆಯುತ್ತಿದೆ.

ಉಪ ಚುನಾವಣೆ ನಡೆಯುವ ನಾಲ್ಕು ಕ್ಷೇತ್ರಗಳೂ ಕಾಂಗ್ರೆಸ್‍ಗೆ ಪ್ರತಿಷ್ಠೆಯ ಸವಾಲಾಗಿದೆ. ಹೀಗಾಗಿ ಶತಾಯಗತಾಯ ಗೆಲ್ಲಲೇಬೇಕೆಂದು ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಅವರೇ ಅಭ್ಯರ್ಥಿ ಎಂದು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ.

ಹೈಕಮಾಂಡ್‍ಗೆ ಕಳುಹಿಸಿರುವ ಪಟ್ಟಿಯಲ್ಲಿ ಸತೀಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೋಳಿ, ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಸೇರಿ ಮೂರು ಮಂದಿಯ ಹೆಸರನ್ನು ಉಲ್ಲೇಖಿಸಲಾಗಿದೆ. ಆದರೆ, ದಿಢೀರ್ ಬೆಳವಣಿಗೆಯಲ್ಲಿ ಲಕ್ಷ್ಮೀಹೆಬ್ಬಾಳ್ಕರ್ ಅವರನ್ನೇ ಕಣಕ್ಕಿಳಿಸಬೇಕೆಂಬ ಚರ್ಚೆಗಳು ಆರಂಭಗೊಂಡಿವೆ.
ಕಳೆದ ನಾಲ್ಕು ಚುನಾವಣೆಗಳಿಂದಲೂ ಬೆಳಗಾವಿ ಬಿಜೆಪಿಯ ಭದ್ರಕೋಟೆಯಾಗಿದೆ.

ಸಚಿವ ಜಗದೀಶ್ ಶೆಟ್ಟರ್, ಶ್ರದ್ಧಾಅಂಗಡಿ, ಡಾ.ಗಿರೀಶ್ ಸೋನ್‍ವಾಲ್ಕರ್, ಡಾ.ರವಿಪಾಟೀಲ್, ಕೃಷ್ಣಭಟ್, ಅಮರ್‍ನಾಥ್ ಜಾರಕಿಹೊಳಿ, ರಮೇಶ್‍ಕತ್ತಿ, ಪ್ರಭಾಕರ್ ಕೋರೆ ಸೇರಿದಂತೆ ಅನೇಕರು ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದು, ಇವರಲ್ಲಿ ಯಾರನ್ನೇ ಕಣಕ್ಕಿಳಿಸಿದರೂ ಪ್ರಬಲ ಪೈಪೋಟಿ ಎದುರಾಗಲಿದೆ.

ಅದಕ್ಕೆ ಎದುರೇಟು ನೀಡಬೇಕಾದರೆ ಕಾಂಗ್ರೆಸ್ ಕೂಡ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕಿದೆ. ಸತೀಶ್ ಜಾರಕಿಹೊಳಿ ಲೋಕಸಭೆಗೆ ಸ್ಪರ್ಧೆ ಮಾಡಲು ಒಪ್ಪಿಕೊಂಡಿದ್ದಾರೆ. ಆದರೆ, ತಾವು ಗೆದ್ದು ಸಂಸದರಾದರೆ ಯಮಕನಮರಡಿ ವಿಧಾನಸಭಾ ಕ್ಷೇತ್ರ ತೆರವಾಗಲಿದ್ದು, ಅಲ್ಲಿಗೆ ತಮ್ಮ ಪುತ್ರ ಅಥವಾ ಪುತ್ರಿಗೆ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ನಾಯಕರ ಮುಂದೆ ಬೇಡಿಕೆ ಸಲ್ಲಿಸಿದ್ದಾರೆ.

ಆದರೆ, ಇದಕ್ಕೆ ಹೈಕಮಾಂಡ್ ಇನ್ನೂ ಸಹಮತ ವ್ಯಕ್ತಪಡಿಸಿಲ್ಲ. ಈಗಾಗಲೇ ಪಕ್ಷದಲ್ಲಿ ಕುಟುಂಬ ರಾಜಕಾರಣ ಹೆಚ್ಚಾಗಿದೆ. ಜತೆಗೆ ಬೆಳಗಾವಿ ಜಿಲ್ಲೆ ರಾಜಕಾರಣದಲ್ಲಿ ಜಾರಕಿಹೊಳಿ ಸಹೋದರರ ಹಿಡಿತ ಹೆಚ್ಚಾಗಿದೆ. ಹೀಗಾಗಿ ಮತ್ತೊಂದು ಉಪ ಚುನಾವಣೆ ಎದುರಾದರೆ ಅದಕ್ಕೆ ಪಕ್ಷದ ಕಾರ್ಯಕರ್ತರನ್ನೇ ಕಣಕ್ಕಿಳಿಸಬೇಕು. ಕುಟುಂಬ ರಾಜಕಾರಣಕ್ಕೆ ಮಣೆಹಾಕಬಾರದು ಎಂಬುದು ನಾಯಕರ ಅಭಿಪ್ರಾಯ. ಈ ಗೊಂದಲದಿಂದಾಗಿ ಸತೀಶ್ ಜಾರಕಿಹೊಳಿ ಅವರ ಸ್ಪರ್ಧೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತಾಗಿದೆ.

ಈ ನಡುವೆ ಲಕ್ಷ್ಮೀಹೆಬ್ಬಾಳ್ಕರ್ ರಾಜಕೀಯದಲ್ಲಿ ಮಹತ್ವಾಕಾಂಕ್ಷಿಯಾಗಿರುವ ಅವರು, ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆಯಾಗುವ ಇರಾದೆ ಹೊಂದಿದ್ದಾರೆ. ಹಾಲಿ ಮಹಿಳಾ ಅಧ್ಯಕ್ಷೆಯಾಗಿರುವ ಸುಷ್ಮಿತಾದೇವ್ ಅವರನ್ನು ಬದಲಾವಣೆ ಮಾಡಲು ಕಾಂಗ್ರೆಸ್‍ನ ಹೈಕಮಾಂಡ್ ಚರ್ಚೆ ನಡೆಸುತ್ತಿವೆ. ಲಕ್ಷ್ಮೀಹೆಬ್ಬಾಳ್ಕರ್ ಕಾಂಗ್ರೆಸ್ ರಾಜ್ಯ ಮಹಿಳಾ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ರಾಷ್ಟ್ರೀಯ ನಾಯಕರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಶಾಸಕಿಯಾಗಿರುವುದಕ್ಕಿಂತ ಸಂಸದೆಯಾಗಿ ರಾಷ್ಟ್ರ ರಾಜಕಾರಣ ಪ್ರವೇಶಿಸಿದರೆ ಮಹತ್ವದ ಹುದ್ದೆಗಳನ್ನು ಪಡೆಯಲು ಅವಕಾಶವಿದೆ ಎಂಬ ಲೆಕ್ಕಾಚಾರ ನಡೆದಿದೆ . ಹೀಗಾಗಿ ಲಕ್ಷ್ಮೀಹೆಬ್ಬಾಳ್ಕರ್ ಲೋಕಸಭೆಗೆ ಸ್ಪರ್ಧಿಸುವ ಕುರಿತು ಅರೆಮನಸ್ಸು ಹೊಂದಿದ್ದಾರೆ ಎನ್ನಲಾಗಿದೆ.

ಲಕ್ಷ್ಮೀಹೆಬ್ಬಾಳ್ಕರ್ ಅವರನ್ನು ಸಂಸದೆಯಾಗಿ ಆಯ್ಕೆ ಮಾಡಿ ಕಳುಹಿಸಿದರೆ, ಜಿಲ್ಲಾ ರಾಜಕಾರಣದಲ್ಲಿ ತಮ್ಮ ಹಿಡಿತ ಬಲಗೊಳ್ಳಲಿದೆ ಎಂಬ ಅಭಿಪ್ರಾಯವನ್ನು ಪಕ್ಷಾತೀತವಾಗಿ ಜಾರಕಿಹೊಳಿ ಸಹೋದರರು ಹೊಂದಿದ್ದಾರೆ. ಹೀಗಾಗಿ ಕೊನೆ ಕ್ಷಣದಲ್ಲಿ ಲಕ್ಷ್ಮೀಹೆಬ್ಬಾಳ್ಕರ್ ಅವರನ್ನೇ ಅಭ್ಯರ್ಥಿ ಮಾಡಿದರೆ ಆಶ್ಚರ್ಯ ಪಡುವಂತಿಲ್ಲ ಎನ್ನಲಾಗಿದೆ.

ಬಸವ ಕಲ್ಯಾಣ ಕ್ಷೇತ್ರಕ್ಕೆ ದಿ. ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಅವರನ್ನು, ಮಸ್ಕಿ ಕ್ಷೇತ್ರಕ್ಕೆ ಬಿಜೆಪಿಯಿಂದ ವಲಸೆ ಬಂದಿರುವ ಬಸವನಗೌಡ ತುರವಿಹಾಳ್ ಅವರಿಗೆ ಟಿಕೆಟ್ ನೀಡುವುದು ಖಚಿತವಾಗಿದೆ. ಎಂ.ಸಿ.ಮನಗೋಳಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಸಿಂಧಗಿ ಕ್ಷೇತ್ರಕ್ಕೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಮನಗೋಳಿ ಅವರ ಪುತ್ರ ಅಶೋಕ್ ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಬರುವ ಸಾಧ್ಯತೆ ಇದ್ದು, ಟಿಕೆಟ್ ನೀಡಲು ಷರತ್ತು ವಿಧಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ 72ಸಾವಿರ ಮತಗಳನ್ನು ಪಡೆದಿದ್ದ ಮಲ್ಲಣ್ಣಸಾಲಿ ನಿಂಗಪ್ಪ, ವಿಧಾನಪರಿಷತ್‍ನ ಮಾಜಿ ಸದಸ್ಯ ಎಚ್.ಎಂ.ರೇವಣ್ಣ, ಸ್ಥಳೀಯ ನಾಯಕ ಸುನಾಗಾರ್ ಸೇರಿದಂತೆ ಅನೇಕರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಸಿಂಧಗಿ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಸಂಬಂಧಪಟ್ಟಂತೆ ಕಾಂಗ್ರೆಸ್‍ನಲ್ಲಿ ಸ್ಪಷ್ಟತೆ ಇದೆ.

Facebook Comments