ಬೆಳಗಾವಿ ಪೊಲೀಸರಿಗೆ ಶಿವಸೇನೆ ಸವಾಲ್, ಗಡಿಯಲ್ಲಿ ಉದ್ವಿಗ್ನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಜ.18- ಗಡಿ ಭಾಗದಲ್ಲಿ ಶಿವಸೇನೆ, ಎಂಇಎಸ್ ನಾಯಕರ ಪುಂಡಾಟಿಕೆ; ಅಟ್ಟಹಾಸ, ಉದ್ಧಟತನ ಮುಂದುವರೆದಿದ್ದು ಶಿವಸೇನೆ ನಾಯಕ ಸಂಜಯ ರಾವುತ್ ಕರ್ನಾಟಕದ ಪೊಲೀಸರಿಗೇ ಸವಾಲೆಸೆದಿದ್ದು ಬೆಳಗಾವಿ ಗಡಿ ಭಾಗದಲ್ಲಿ ಇಂದೂ ಕೂಡ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಶಿವಸೇನೆಯ ನಾಯಕ, ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿ ಇರುವ ಸಂಜಯ ರಾವುತ್ ಇಂದು ಮುಂಜನೆ ಮುಂಬೈನಲ್ಲಿ ಮಾತನಾಡಿ, ಸಂಜೆ ಬೆಳಗಾವಿಗೆ ಆಗಮಿಸುತ್ತಿದ್ದು, ಕರ್ನಾಟಕದ ಪೊಲೀಸರು ಸಾಧ್ಯವಾದರೆ ನನ್ನನ್ನು ತಡೆಯಲಿ ಎಂದು ಸವಾಲು ಹಾಕಿದ್ದಾರೆ.

ಆದರೆ ರಾವುತ್ ಆಗಮನಕ್ಕೆ ಈವರೆಗೂ ಸ್ಥಳೀಯ ಆಡಳಿತ ಅನುಮತಿ ನೀಡಿಲ್ಲ. ಅನುಮತಿ ನೀಡದಿದ್ದರೂ ಬೆಳಗಾವಿ ಪ್ರವೇಶ ಮಾಡಿಯೇ ಸಿದ್ಧ ಎಂದು ಹೇಳಿರುವ ಪರಿಣಾಮ ಗಡಿ ಭಾಗದಲ್ಲಿ ಪೊಲೀಸ್ ಸರ್ಪಗಾವಲು ನಿಯೋಜನೆಗೊಂಡಿದ್ದು ಪರಿಸ್ಥಿತಿ ಬಿಗುವಿನಿಂದ ಕೂಡಿದೆ.

ನಿನ್ನೆಯಷ್ಟೇ ¾ಹುತಾತ್ಮಾ ದಿನ¿ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಮಹಾರಾಷ್ಟ್ರ ಸಚಿವ ರಾಜೇಂದ್ರ ಪಾಟೀಲ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದರು. ರಾವುತ ವಿಚಾರದಲ್ಲಿಯೂ ಇದೇ ಕ್ರಮ ಅನುಸರಿಸಲಾಗುವುದೇ ಎನ್ನುವ ಕುತೂಹಲ ಮೂಡಿದ್ದು, ಎಲ್ಲರ ಚಿತ್ತ ಸರ್ಕಾರದ ನಿಲುವಿನತ್ತ ನೆಟ್ಟಿದೆ.

ನಿನ್ನೆಯ ಘಟನೆ ನಂತರ, ಸಂಜಯ ರಾವುತ ಟ್ವೀಟ್ ಮಾಡಿ, ¾ನಾನೇ ಬೆಳಗಾವಿಗೆ ಬರುತ್ತೇನೆ. ಪೊಲೀಸರು ಏನು ಮಾಡುತ್ತಾರೋ ನೋಡೋಣ ಎನ್ನುವಂತೆ ಸವಾಲು ಹಾಕಿದ್ದು, ಹಾಗೊಂದು ವೇಳೆ ಅವರಿಗೆ ಅವಕಾಶ ಮಾಡಿಕೊಟ್ಟರೆ, ಅವರು ಮತ್ತಷ್ಟು ಪ್ರಚೋದನೆಯ ಹೇಳಿಕೆಗಳನ್ನು ನೀಡಲಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ.

ಆದರೆ, ರಾವುತ ಬೆಳಗಾವಿಗೆ ಹೇಗೆ ಆಗಮಿಸಲಿದ್ದಾರೆ ಎನ್ನುವುದನ್ನು ಗುಟ್ಟಾಗಿ ಇರಿಸಲಾಗಿದೆ. ಕೆಲವು ಮೂಲಗಳ ಪ್ರಕಾರ ಅವರು ಮುಂಬೈನಿಂದ ವಿಮಾನದ ನೇರವಾಗಿ ಬೆಳಗಾವಿಗೆ ಆಗಮಿಸುವರು ಎನ್ನಲಾಗಿದ್ದು, ಇನ್ನೊಂದು ಮೂಲಗಳ ಪ್ರಕಾರ, ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ನಿನ್ನೆಯಿಂದ ಕೊಲ್ಲಾಪುರ ಮತ್ತು ಸಾಂಗಲಿ ಜಿಲ್ಲೆಗಳಲ್ಲಿ ಇದ್ದು, ಅವರನ್ನು ಭೇಟಿ ಮಾಡಿ, ರಸ್ತೆ ಮಾರ್ಗವಾಗಿ ಬೆಳಗಾವಿಗೆ ಆಗಮಿಸುವರು ಎನ್ನಲಾಗುತ್ತಿದೆ.

ಸಂಜಯ ರಾವುತ ರಾಜ್ಯ ಸಭೆಯ ಸದಸ್ಯರಾಗಿದ್ದು, ಶಿವಸೇನೆಯ ಮುಖಪತ್ರ ¾ಸಾಮ್ನಾದ ಸಂಪಾದಕರೂ ಆಗಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಜೆಪಿ ಸಖ್ಯ ಕಡಿದುಕೊಂಡು, ಕಾಂಗ್ರೆಸ್ ಮತ್ತು ಎನ್.ಸಿ.ಪಿ ಜೊತೆ ಕೈಜೋಡಿಸಿ ಸರ್ಕಾರ ರಚಿಸುವಲ್ಲಿ ರಾವುತ ಪ್ರಮುಖ ಪಾತ್ರ ವಹಿಸಿದ್ದಾರೆ. ವಿವಾದಾತ್ಮಕ ಹೇಳಿಕೆಗಳ ಮೂಲಕ ರಾವುತ್ ಸದಾ ಸುದ್ದಿಯಲ್ಲಿರುತ್ತಾರೆ.

Facebook Comments