50 ವರ್ಷ ದಾಟಿದವರಿಗೆ, ವಿಕಲಾಂಗರಿಗೆ ಅಧಿವೇಶನದಿಂದ ವಿನಾಯ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.4- ಸಿಬ್ಬಂದಿಗೆ ಎರಡು ಡೋಸ್ ಕಡ್ಡಾಯ ಲಸಿಕೆ, 50 ವರ್ಷ ದಾಟಿದ ಸಿಬ್ಬಂದಿ ಹಾಗೂ ದಿವ್ಯಾಂಗರು, ಅಸ್ತಮಾ, ಇತರ ಖಾಯಿಲೆ ಹೊಂದಿರುವವರಿಗೆ ಬೆಳಗಾವಿ ಅಧಿವೇಶನದಿಂದ ವಿನಾಯಿತಿ ನೀಡಲು ಯೋಜಿಸಲಾಗಿದೆ. ಕರ್ನಾಟಕದಲ್ಲಿ ಓಮಿಕ್ರಾನ್ ರೂಪಾಂತರಿ ಪತ್ತೆಯಾದ ಬಳಿಕ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಶಾಸಕರು ಹಾಗೂ ಅಧಿಕಾರಿ ವರ್ಗದಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಓಮಿಕ್ರಾನ್‍ನ ಈ ಸಂದರ್ಭದಲ್ಲಿ ಬೆಳಗಾವಿ ಅಧಿವೇಶನ ಅಪಾಯಕಾರಿ ಎಂಬ ಭೀತಿ ಎಲ್ಲರನ್ನೂ ಕಾಡುತ್ತಿದೆ. ಆದರೂ ಕಳೆದ ಎರಡು ವರ್ಷಗಳಿಂದ ಬೆಳಗಾವಿ ಅಧಿವೇಶನ ನಡೆಯದೇ ಇರುವುದರಿಂದ ಮತ್ತೆ ಈ ಬಾರಿ ಅಧಿವೇಶನ ರದ್ದು ಮಾಡಿದರೆ, ಉತ್ತರ ಕರ್ನಾಟಕ ಜನರಿಗೆ ತಪ್ಪು ಸಂದೇಶ ನೀಡಿದಂತೆ ಆಗುತ್ತದೆ ಎಂಬ ಅನಿವಾರ್ಯತೆಗೆ ಕಟ್ಟುಬಿದ್ದು ಸರ್ಕಾರ ಸದ್ಯ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ನಿಲುವು ತಳೆದಿದೆ.

ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮದೊಂದಿಗೆ ಬೆಳಗಾವಿ ಅಧಿವೇಶನ ನಡೆಸಲು ಸರ್ಕಾರ ಮುಂದಾಗಿದೆ. ಅದರಂತೆ ಬೆಳಗಾವಿಗೆ ಎರಡು ಡೋಸ್ ಲಸಿಕೆ ಪಡೆದ ಸಿಬ್ಬಂದಿಯನ್ನು ಮಾತ್ರ ಕರೆದೊಯ್ಯಲು ಚಿಂತಿಸಲಾಗಿದೆ. ಕಡಿಮೆ ಸಿಬ್ಬಂದಿಯೊಂದಿಗೆ ಅಧಿವೇಶನ ನಡೆಸುವ ಚಿಂತನೆ ಇದೆ. ಕಲಾಪ ವೀಕ್ಷಣೆಗಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ಬರುತ್ತಿದ್ದರು. ಆದರೆ, ಈ ಬಾರಿ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ. ಸಾರ್ವಜನಿಕರಿಗೆ ಕಲಾಪ ವೀಕ್ಷಿಸಲು ಅನುವು ಮಾಡಿಕೊಡದಿರಲು ನಿರ್ಧರಿಸಲಾಗಿದೆ.

# ಅಧಿವೇಶನಕ್ಕೆ ಸಚಿವರ ಹಿಂದೇಟು:
ಇತ್ತ ಕೆಲ ಹಿರಿಯ ಸಚಿವರೂ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಮಿಕ್ರೋನ್ ವೇಳೆ ಅಧಿವೇಶನ ನಡೆಸುವುದು ಅಸಮಂಜಸ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಾನೂನು ಸಚಿವ ಮಾಧುಸ್ವಾಮಿಗೆ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲೇ ನಡೆಸುವ ಅಭಿಪ್ರಾಯ ಹೊಂದಿದ್ದಾರೆ.

ಸ್ವತಃ ಸಿಎಂ ಕೂಡ ಬೆಳಗಾವಿ ಅಧಿವೇಶನ ಬಗ್ಗೆ ಹೆಚ್ಚಿನ ಒಲವು ಹೊಂದಿಲ್ಲ ಎನ್ನಲಾಗಿದೆ. ಆದರೆ ಉತ್ತರ ಕರ್ನಾಟಕದ ಜನರ ಭಾವನೆಗೆ ಕಟ್ಟು ಬಿದ್ದು, ಅಧಿವೇಶನವನ್ನು ಅಲ್ಲೇ ನಡೆಸಲು ಸಿಎಂ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲ ಸಚಿವರು ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಅಪಸ್ವರ ಎತ್ತಿದ್ದಾರೆ.

ಬೆಳಗಾವಿ ಅಧಿವೇಶನ ವೇಳೆ ಸೋಂಕು ಪತ್ತೆಯಾದರೆ, ನಿಯಂತ್ರಣ ಕಷ್ಟಸಾಧ್ಯವಾಗಲಿದೆ. ಹೀಗಾಗಿ ಈ ಬಾರಿ ಅಧಿವೇಶನವನ್ನು ಬೆಂಗಳೂರಲ್ಲೇ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಎರಡು ಓಮಿಕ್ರಾನ್ ಪ್ರಕರಣಗಳು ಪತ್ತೆಯಾದ ಬಳಿಕ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಈ ನಡುವೆ ಚಳಿಗಾಲ ಅಧಿವೇಶನ ಕುರಿತ ಊಹಾಪೋಹಗಳಿಗೆ ರಾಜ್ಯ ಸರ್ಕಾರ ತೆರೆ ಎಳೆದಿದೆ.

ಓಮಿಕ್ರಾನ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಈ ಬಾರಿಯ ಚಳಿಗಾಲ ಅಧಿವೇಶನ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದ್ದು, ಬೆಳಗಾವಿ ಸುರಕ್ಷಿತವಾಗಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನವನ್ನು ನಿಗದಿಪಡಿಸಿದ ವೇಳಾಪಟ್ಟಿಯಂತೆಯೇ ಡಿಸೆಂಬರ್ 13ರಿಂದ 24ರವರೆಗೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ.

ಒಂದು ವೇಳೆ ಓಮಿಕ್ರಾನ್ ಪ್ರಕರಣ ಹೆಚ್ಚಾದರೆ ಬೆಳಗಾವಿ ಅಧಿವೇಶನ ನಡೆಸುವ ಬಗ್ಗೆ ಮರುಪರಿಶೀಲನೆ ನಡೆಸುವ ಚಿಂತನೆಯೂ ಇದೆ.

Facebook Comments