ಎನ್‍ಜಿಟಿ ಕ್ಷಮೆ ಕೋರಿದ ರಾಜ್ಯ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.2-ಜನರಲ್ಲಿ ಭಾರೀ ಆತಂಕ ಸೃಷ್ಟಿಸಿದ್ದ ಬೆಂಗಳೂರಿನ ಬೆಳ್ಳಂದೂರು, ವರ್ತೂರು ಮತ್ತು ಅಗರ ಕೆರೆಗಳ ಹಾನಿಕಾರಕ ಮಾಲಿನ್ಯ ಮತ್ತು ನೊರೆ, ಬೆಂಕಿ ಪ್ರಕರಣದ ಸಂಬಂದ ನೀಡಲಾದ ಆದೇಶ ಪಾಲಿಸದ ಕಾರಣ ರಾಜ್ಯ ಸರ್ಕಾರ ಇಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‍ಜಿಟಿ) ಮುಂದೆ ಕ್ಷಮೆ ಯಾಚಿಸಿದೆ.

ರಾಜ್ಯ ಸರ್ಕಾರದ ಪರವಾಗಿ ಎನ್‍ಜಿಟಿ ಮುಂದೆ ಹಾಜರಾದ ವಕೀಲರು ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ಅವರ ಕ್ಷಮೆಯಾಚಿಸಿದರು. ಈ ಪ್ರಕರಣದ ಸಂಬಂಧ ನ್ಯಾಯಾಧೀಕರಣ ನೀಡಿರುವ ಆದೇಶಗಳನ್ನು ರಾಜ್ಯ ಸರ್ಕಾರ ಪಾಲಿಸುತ್ತದೆ ಎಂದು ಅವರು ಪ್ರಮಾಣಪತ್ರ ಸಲ್ಲಿಸಿದರು.  ಈ ಕೆರೆಗಳ ಮಾಲಿನ್ಯ ತಡೆಗಟ್ಟಲು ವಿಫಲವಾದ ಮತ್ತು ಆದೇಶ ಉಲ್ಲಂಘಿಸಿದ್ದಕ್ಕಾಗಿ ಎನ್‍ಜಿಟಿ ಈಗಾಗಲೇ ರಾಜ್ಯ ಸರ್ಕಾರಕ್ಕೆ 100 ಕೋಟಿ ರೂ.ಗಳ ದಂಡ ವಿಧಿಸಿದೆ.

ಆದರೆ ದಂಡ ವಿಧಿಸಿದ ಎನ್‍ಜಿಟಿ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿ ರಾಜ್ಯ ಸುಪ್ರೀಂಕೋರ್ಟ್‍ಗೆ ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ ಕಳೆದು ತಿಂಗಳು ಸರ್ಕಾರಕ್ಕೆ ಛೀಮಾರಿ ಹಾಕಿ. 100 ಕೋಟಿ ರೂ.ಗಳ ದಂಡ ಪಾವತಿಸಬೇಕೆಂಬ ನ್ಯಾಯಮಂಡಳಿ ತೀರ್ಪನ್ನು ಎತ್ತಿ ಹಿಡಿದಿತ್ತು.

ನಿರ್ಲಕ್ಷ್ಯದಿಂದ ಹಾನಿಕಾರಕ ಪರಿಸರ ಮಾಲಿನ್ಯಕ್ಕೆ ಎನ್‍ಜಿಟಿ ದಂಡ ವಿಧಿಸಿರುವುದು ಸೂಕ್ತವಾಗಿದೆ. ಆದರೆ ಜುಲ್ಮಾನೆ ಪಾವತಿಸುವ ಬದಲಿಗೆ ಎನ್‍ಜಿಟಿ ಅಧಿಕಾರ ವ್ಯಾಪ್ತಿಯನ್ನೇ ಪ್ರಶ್ನಿಸುವುದು ಎಷ್ಟು ಸರಿ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇದರಿಂದ 100 ಕೋಟಿ ರೂ.ಗಳ ದಂಡ ಪಾವತಿಸುವುದು ರಾಜ್ಯಕ್ಕೆ ಅನಿವಾರ್ಯವಾಗಿದೆ.

Facebook Comments