ವಿಷ ಪೂರಿತ ಬಾವಿ ನೀರು ಸೇವಿಸಿ 8 ಮಕ್ಕಳು ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ, ಡಿ.4- ಬಾವಿಯ ವಿಷದ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ 8 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು , ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲ್ಲೂಕಿನ ಶಿಬಾಜೆ ಗ್ರಾಮದ ಪೆಲರ್ ಸರ್ಕಾರಿ ಶಾಲೆಯ ಬಾವಿ ನೀರು ಸೇವಿಸಿ 8 ಮಕ್ಕಳು ಅಸ್ವಸ್ಥಗೊಂಡಿದ್ದರು. ಯಾರೋ ಕಿಡಿಗೇಡಿಗಳು ಬಾವಿಗೆ ವಿಷ ಹಾಕಿದ್ದಾರೆ ಎಂದು ಶಂಕಿಸಲಾಗಿದೆ.

ವಿಷದ ನೀರು ಸೇವಿಸಿ ಅಸ್ವಸ್ಥಗೊಂಡಿರುವ 4 ಮಕ್ಕಳನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಅಸ್ವಸ್ಥಗೊಂಡಿರುವ ಇತರ ನಾಲ್ಕು ಮಂದಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊನ್ನೆ ಶಾಲೆಗೆ ಬಂದ ಮಕ್ಕಳು ಎಂದಿನಂತೆ ಬಾವಿಯ ನೀರು ಕುಡಿದ ತಕ್ಷಣ ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದರು. ತಕ್ಷಣ ಎಚ್ಚೆತ್ತುಕೊಂಡ ಮುಖ್ಯ ಶಿಕ್ಷಕಿ ಶಾರದಾ ಹಾಗೂ ಸಹ ಶಿಕ್ಷಕರಾದ ನಮಿತಾ ಮತ್ತು ಅರವಿಂದ ಗೋಖಲೆ ಅವರು ಆ್ಯಂಬುಲೆನ್ಸ್ ಕರೆಸಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಹೊಟ್ಟೆನೋವಿಗೆ ಕಾರಣ ಏನೆಂದು ಬಾವಿಯ ಸುತ್ತಮುತ್ತ ಪರಿಶೀಲಿಸಿದಾಗ ರಬ್ಬರ್‍ಗೆ ಹಾಕುವ ಆ್ಯಸಿಡ್ ಖಾಲಿ ಕ್ಯಾನ್ ಪತ್ತೆಯಾಗಿದೆ. ದುಷ್ಕರ್ಮಿಗಳು ಉದ್ದೇಶ ಪೂರ್ವಕವಾಗಿ ಆ್ಯಸಿಡ್ ಅನ್ನು ಕುಡಿಯುವ ನೀರಿಗೆ ಸೇರಿಸಿರುವ ಅನುಮಾನ ವ್ಯಕ್ತವಾಗಿದ್ದು, ಈ ಕುರಿತಂತೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಶಾಸಕರ ಭೇಟಿ: ಶಿಬಾಜೆ ಪೆರ್ಲ ಶಾಲೆಗೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಇತರೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶೇಷ ತಂಡ ರಚಿಸಿ ಕಿಡಿಗೇಡಿಗಳನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ನಿಮಗೆ ಯಾರ ಮೇಲಾದರೂ ಅನುಮಾನವಿದ್ದರೆ ಅವರ ಬಗ್ಗೆ ಮಾಹಿತಿ ನೀಡಿ. ಭವಿಷ್ಯದಲ್ಲಿ ಇಂತಹ ಅನಾಹುತಗಳು ಸಂಭವಿಸದಂತೆ ಶಾಲಾ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದಾಗಿ ಪೂಂಜ ಘೋಷಿಸಿದರು.

Facebook Comments