ಇಂದು ಸಂಜೆ ಸಿಎಂ ಟಾಸ್ಕ್ ಫೋರ್ಸ್ ಮೀಟಿಂಗ್, ಮತ್ತೆ ಲಾಕ್‍ಡೌನ್ ಮುಂದುವರೆಯುತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.20- ಕೊರೊನಾ ವಿರುದ್ಧ ಹೋರಾಡಲು ಸರ್ಕಾರ ಘೋಷಿಸಿದ್ದ ಒಂದು ವಾರದ ಲಾಕ್‍ಡೌನ್ ಬುಧವಾರ ಮುಂಜಾನೆ ಅಂತ್ಯವಾಗಲಿದ್ದು, ಸಂಜೆ ಮುಖ್ಯಮಂತ್ರಿ ಬಿ.ಎಸ್. ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್ ಕಾರ್ಯಪಡೆಯ ಮಹತ್ವದ ಸಭೆ ನಡೆಯಲಿದೆ.

ಸಭೆಯಲ್ಲಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಬುಧವಾರ ಮುಂಜಾನೆ 5 ಗಂಟೆಗೆ ಒಂದು ವಾರಗಳ ಕಾಲದ ಲಾಕ್‍ಡೌನ್ ಅವಧಿ ಮುಕ್ತಾಯಗೊಳ್ಳಲಿದ್ದು, ಮತ್ತೆ ಲಾಕ್‍ಡೌನ್ ಜಾರಿಗೊಳಿಸದಿರುವ ನಿರ್ಧಾರಕ್ಕೆ ಸರ್ಕಾರ ಬಂದಿದೆ.

ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾಗಿರುವ ಪರ್ಯಾಯ ಕ್ರಮಗಳ ಕುರಿತಾಗಿ ಕಾರ್ಯಪಡೆ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಲಾಕ್‍ಡೌನ್ ಇಲ್ಲದೆ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಆದರೆ ಸಿಎಂ ಯಡಿಯೂರಪ್ಪ ಲಾಕ್‍ಡೌನ್ ಮುಂದುವರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಆರೋಗ್ಯ ತಜ್ಞರು ಮತ್ತು ಸಚಿವ ಸಂಪುಟದ ಇಬ್ಬರು ಪ್ರಮುಖ ಮಂತ್ರಿಗಳು ಲಾಕ್‍ಡೌನ್ ವಿಸ್ತರಸುವಂತೆ ಸಲಹೆ ನೀಡಿದ್ದಾರೆ. ಕೊರೋನಾ ಸರಣಿ ಬ್ರೇಕ್ ಮಾಡಲು ಕನಿಷ್ಠ 14 ದಿನ ಲಾಕ್‍ಡೌನ್ ಮಾಡುವಂತೆ ಸಲಹೆ ನೀಡಿದ್ದಾರೆ.

ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಯ ಕೊರತೆ ಎದುರಾಗಿದೆ. ಖಾಸಗಿ ಆಸ್ಪತ್ರೆ ಶೇ.50ರಷ್ಟು ಹಾಸಿಗೆಗಳನ್ನು ನೀಡುವ ಭರವಸೆ ನೀಡಿದರೂ ಅದು ಜಾರಿಗೆ ಬಂದಿಲ್ಲ.

ಅಲ್ಲದೆ, ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕು ಲಕ್ಷಣ ಇಲ್ಲದವರನ್ನು ದಾಖಲಿಸಿಕೊಂಡು ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ.ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಡೆಯಲಿರುವ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.

ಹೀಗಾಗಿ ಇಂದು ನಡೆಯುವ ಸಭೆಯಲ್ಲಿ ಲಾಕ್‍ಡೌನ್ ನಿಯಂತ್ರಣಕ್ಕೆ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ. ವಿಶೇಷವೆಂದರೆ, ಬೆಂಗಳೂರಿನ ಎಂಟು ಬಿಬಿಎಂಪಿ ವಲಯಗಳ ಉಸ್ತುವಾರಿ ಸಚಿವರು ಬುಧವಾರದಿಂದ ಲಾಕ್‍ಡೌನ್‍ಅನ್ನು ಸಂಪೂರ್ಣವಾಗಿ ತೆಗೆದುಹಾಕುವುದಾಗಿ ತಿಳಿಸಿದ್ದಾರೆ.

ಯಾವುದೇ ಲಾಕ್‍ಡೌನ್ ಇರುವುದಿಲ್ಲ, ಲಾಕ್‍ಡೌನ್ ಮುಂದುವರಿಸಿದರೇ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸಿಎಂ ಯಡಿಯೂರಪ್ಪ ಅವರ ನಿರ್ಧಾರವೂ ಕೂಡ ಇದೇ ಆಗಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಆದರೆ ಸಚಿವರಾದ ಶ್ರೀರಾಮುಲು ಮತ್ತು ಕೆ.ಸುಧಾಕರ್ ಮತ್ತೊಂದು ವಾರ ಲಾಕ್‍ಡೌನ್ ವಿಸ್ತರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪ್ರಸ್ತಾವನೆಗೆ ಆರೋಗ್ಯ ಇಲಾಖೆ ಕೂಡ ಲಾಕ್‍ಡೌನ್ ವಿಸ್ತರಿಸುವಂತೆ ತಿಳಿಸಿದೆ.

ಸರಪಳಿಯನ್ನು ಮುರಿಯಲು 14 ದಿನಗಳವರೆಗೆ ಲಾಕ್‍ಡೌನ್ ಜಾರಿಗೆ ತರಬೇಕು ಎಂದು ಸಿಎಂಗೆ ತಿಳಿಸಲಾಯಿತು. ಮನೆ-ಮನೆಗೆ ಸಮೀಕ್ಷೆ ನಡೆಸಲು ಇದು ವಾರ್ಡ್ ಸಮಿತಿಗಳಿಗೆ ಸಮಯ ನೀಡುತ್ತದೆ. ಒಂದು ವಾರದ ಲಾಕ್‍ಡೌನ್‍ನಿಂದ ಯಾವುದೇ ಫಲಿತಾಂಶ ದೊರೆಯುವುದಿಲ್ಲ ಎಂದು ಕೆಲವರು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

Facebook Comments

Sri Raghav

Admin