ಆ್ಯಸಿಡ್ ದಾಳಿ ನಂತರ ಆತ್ಮಹತ್ಯೆಗೆ ನಿರ್ಧರಿಸಿದ್ದ ನಾಗೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 14- ಆ್ಯಸಿಡ್ ದಾಳಿ ನಡೆಸಿದ ನಂತರ ಆರೋಪಿ ನಾಗೇಶ್ ತನ್ನ ಅಣ್ಣನಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಬಳಿಕ ತನ್ನ ಬೈಕ್‍ನಲ್ಲಿ ನ್ಯಾಯಾಲಯದ ಬಳಿ ಹೋಗಿ ವಕೀಲರೊಬ್ಬರನ್ನು ಸಂಪರ್ಕಿಸಿ ನಡೆದ ಘಟನೆ ಬಗ್ಗೆ ವಿವರಿಸಿದಾಗ ವಕೀಲರು ಪೊಲೀಸರಿಗೆ ಶರಣಾಗುವಂತೆ ಸೂಚಿಸಿದ್ದಾರೆ.

ವಕೀಲರ ಮಾತನ್ನು ಅಲ್ಲಗಳೆದ ಆರೋಪಿ ಬೈಕನ್ನು ಅಲ್ಲೇ ಬಿಟ್ಟು ಬಸ್‍ನಲ್ಲಿ ಹೊಸಕೋಟೆಗೆ ಹೋಗಿದ್ದಾನೆ. ಅಲ್ಲಿಯ ಕೆರೆಯೊಂದರ ಬಳಿ ತೆರಳಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಬಳಿಕ ಆರೋಪಿ ನಾಗೇಶ್ ಮನಸ್ಸು ಬದಲಿಸಿಕೊಂಡು ತಿರುಪತಿಗೆ ಹೋಗಲು ನಿರ್ಧರಿಸಿ ತನ್ನ ಬಳಿ ಮೊಬೈಲ್ ಇದ್ದರೆ ಸಿಕ್ಕಿಬೀಳುತ್ತೇನೆಂದು ತಿಳಿದು ಆ ಮೊಬೈಲ್‍ಅನ್ನು ಕೆರೆಗೆ ಬಿಸಾಡಿದ್ದಾನೆ.

ನಂತರ ತಿರುಪತಿಗೆ ಹೋದರೆ ಸಿಕ್ಕಿಹಾಕಿಕೊಳ್ಳಬಹುದೆಂದು ತಿಳಿದು ತಮಿಳುನಾಡಿಗೆ ಹೋಗಲು ನಿರ್ಧಾರ ಬದಲಿಸಿದ್ದಾನೆ. ಅದರಂತೆ ಹೊಸಕೋಟೆಯಿಂದ ಮಾಲೂರು ಮುಖಾಂತರ ತಮಿಳುನಾಡಿನ ತಿರುವಣ್ಣಾಮಲೈಗೆ ಹೋಗಿದ್ದಾನೆ.

ಅಲ್ಲಿನ ರಮಣ ಆಶ್ರಮದ ಬಗ್ಗೆ ತಿಳಿದುಕೊಂಡು ಖಾವಿ ವಸ್ತ್ರ ಖರೀದಿಸಿ ಸನ್ಯಾಸಿಯಂತೆ ವೇಷ ಧರಿಸಿ ಅಲ್ಲಿನವರೊಂದಿಗೆ ಸೇರಿಕೊಂಡು ಧ್ಯಾನ, ಇನ್ನಿತರ ಪೂಜಾ ಕಾರ್ಯದಲ್ಲಿ ತೊಡಗಿಕೊಂಡಿದ್ದನು.

Facebook Comments