ಪರಾರಿಯಾಗಲೆತ್ನಿಸಿದ ಆ್ಯಸಿಡ್ ನಾಗನಿಗೆ ಪೊಲೀಸರಿಂದ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ14- ತಮಿಳುನಾಡಿನಿಂದ ನಗರಕ್ಕೆ ಕರೆತರುತ್ತಿದ್ದಾಗ ದಾರಿಮಧ್ಯೆ ಬಹಿರ್ದೆಸೆಗೆ ಹೋಗುವ ನೆಪದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆ್ಯಸಿಡ್ ದಾಳಿ ಆರೋಪಿ ನಾಗೇಶನ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯುವಲ್ಲಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿ ನಾಗೇಶನ ಬಲಗಾಲಿಗೆ ಗುಂಡು ತಗುಲಿದ್ದು, ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 18 ದಿನಗಳ ಹಿಂದೆ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ ತಮಿಳುನಾಡಿನ ತಿರುವಣಮಲೈನ ರಮಣ ಆಶ್ರಮದಲ್ಲಿರುವ ಬಗ್ಗೆ ಮಾಹಿತಿ ಕಲೆ ಹಾಕಿ, ಕಾಮಾಕ್ಷಿಪಾಳ್ಯ ಠಾಣೆ ಇನ್‍ಸ್ಪೆಕ್ಟರ್ ಪ್ರಶಾಂತ್ ಹಾಗೂ ತಂಡ ಅಲ್ಲಿಗೆ ತೆರಳಿ ಆತನನ್ನು ವಶಕ್ಕೆ ತೆಗೆದುಕೊಂಡು ಜೀಪ್‍ನಲ್ಲಿ ನಗರಕ್ಕೆ ಕರೆತರಲಾಗುತ್ತಿತ್ತು.

ಇಂದು ಬೆಳಗಿನ ಜಾವ 1.30ರ ಸುಮಾರಿನಲ್ಲಿ ನೈಸ್‍ರಸ್ತೆಯಲ್ಲಿ ಬರುತ್ತಿದ್ದಾಗ ಆರೋಪಿ ನಾಗೇಶ ತಾನು ಬರ್ಹಿದೆಸೆಗೆ ಹೋಗಬೇಕು, ಜೀಪು ನಿಲ್ಲಿಸುವಂತೆ ಒತ್ತಾಯಿಸಿದ್ದಾನೆ. ಆಗ ಪೊಲೀಸರು ಜೀಪು ನಿಲ್ಲಿಸಿಲ್ಲ. ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಹ್ಯಾಂಗಿಂಗ್ ಬ್ರಿಡ್ಜ್ ಬಳಿ ಬರುತ್ತಿದ್ದಂತೆ ಮತ್ತೆ ಜೀಪು ನಿಲ್ಲಿಸುವಂತೆ ಕೇಳಿದ್ದಾನೆ.

ಆ ಸಂದರ್ಭದಲ್ಲಿ ಪೊಲೀಸರು ಜೀಪು ನಿಲ್ಲಿಸುತ್ತಿದ್ದಂತೆ ಬಹಿರ್ದೆಸೆಗೆ ಹೋಗುವ ನೆಪದಲ್ಲಿ ಇಳಿದು ತಪ್ಪಿಸಿಕೊಳ್ಳಲು ಓಡುತ್ತಿದ್ದಾಗ ತಕ್ಷಣ ಹೆಡ್ ಕಾನ್‍ಸ್ಟೆಬಲ್ ಮಹದೇವಯ್ಯ ಅವರು ಹಿಡಿದುಕೊಳ್ಳಲು ಮುಂದಾಗುತ್ತಿದ್ದಂತೆ ಅವರನ್ನು ತಳ್ಳಿ ಪರಾರಿಯಾಗಲು ಯತ್ನಿಸಿದ್ದಾನೆ. ಮಹದೇವಯ್ಯ ಅವರು ಹಿಡಿಯಲು ಹೋದಾಗ ಅವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ತಕ್ಷಣ ಇನ್‍ಸ್ಪೆಕ್ಟರ್ ಪ್ರಶಾಂತ್ ಅವರು ನಿಲ್ಲುವಂತೆ ಎಚ್ಚರಿಕೆ ನೀಡಿದರೂ ಸಹ ಪೊಲೀಸ್ ಜೀಪ್‍ನ ಮೇಲೆ ಕಲ್ಲು ಎಸೆದಿದ್ದಾನೆ.

ಆ ಸಂದರ್ಭದಲ್ಲಿ ಇನ್‍ಸ್ಪೆಕ್ಟರ್ ಅವರು ತಮ್ಮ ಸರ್ವೀಸ್ ಪಿಸ್ತೂಲಿನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ಇನ್‍ಸ್ಪೆಕ್ಟರ್ ಮಾತಿಗೆ ಕಿವಿಗೊಡದೆ ಹಲ್ಲೆ ನಡೆಸಿದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿ ನಾಗೇಶನ ಬಲಗಾಲಿಗೆ ತಗುಲಿ ಕುಸಿದುಬಿದ್ದದ್ದಾನೆ.

ತಕ್ಷಣ ಪೊಲೀಸರು ಆತನನ್ನು ಸುತ್ತುವರಿದು, ವಶಕ್ಕೆ ಪಡೆದು ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿ ನಾಗೇಶನಿಂದ ಹಲ್ಲೆಗೊಳಗಾಗಿರುವ ಕಾಮಾಕ್ಷಿಪಾಳ್ಯ ಠಾಣೆ ಹೆಡ್‍ಕಾನ್‍ಸ್ಟೆಬಲ್ ಮಾಹದೇವಯ್ಯ ಅವರನ್ನು ಸಹ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

# ಭಕ್ತನ ವೇಷ ಧರಿಸಿದ್ದ:

ದೈವಭಕ್ತನಾಗಿದ್ದ ಆರೋಪಿ ನಾಗೇಶ ಭಕ್ತನ ವೇಷತೊಟ್ಟು ತಮಿಳುನಾಡಿನ ತಿರುವಣ್ಣಾಮಲೈನ ರಮಣ ಆಶ್ರಮ ಸೇರಿ ತಲೆಮರೆಸಿಕೊಂಡಿದ್ದ. ನಗರ ಪೊಲೀಸರು ರಾಜ್ಯ ಹಾಗೂ ಹೊರರಾಜ್ಯಗಳಲೆಲ್ಲಾ ಆತನ ಭಾವಚಿತ್ರ ಸಹಿತ ಕರಪತ್ರಗಳನ್ನು ಹಂಚಿ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಖಾವಿ ವೇಷ ಧರಿಸಿ ಆಶ್ರಮದಲ್ಲಿದ್ದ ನಾಗೇಶನ ಬಗ್ಗೆ ಅಲ್ಲಿನ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಿಜಯನಗರ ಉಪವಿಭಾಗದ ಒಂದು ತಂಡ ಆಶ್ರಮಕ್ಕೆ ಹೋಗಿ ಆತನ ಚಲನವಲನಗಳನ್ನು ಗಮನಿಸಿ ಆತ ಆರೋಪಿ ನಾಗೇಶ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಬಲೆಗೆ ಬೀಳಿಸಿಕೊಂಡಿದ್ದಾರೆ.

# 10 ತಂಡ:
ಏಪ್ರಿಲ್ 28ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಸುಂಕದಕಟ್ಟೆ ಬಳಿಯ ಮುತೂಟ್ ಫೈನಾನ್ಸ್ ಬಳಿ ಯುವತಿ ಮೇಲೆ ಆ್ಯಸಿಡ್ ಸುರಿದು ಆರೋಪಿ ನಾಗೇಶ ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡಿದ್ದನು. ಅಂದಿನಿಂದ ಆತನ ಬಂಧನಕ್ಕೆ ಪೊಲೀಸರು ಹರಸಾಹಸಪಟ್ಟರು. ಆತನ ಬಂಧನಕ್ಕೆ 10 ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರೂ ಸುಳಿವು ಸಿಕ್ಕಿರಲಿಲ್ಲ.

ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಸೇರಿದಂತೆ ಉತ್ತರಭಾರತದ ಬಹುತೇಕ ರಾಜ್ಯಗಳಲ್ಲಿ ಆರೋಪಿ ನಾಗೇಶನಿಗಾಗಿ ತಂಡಗಳು ಜಾಲಾಡಿದರೂ ಪತ್ತೆಯಾಗಿರಲಿಲ್ಲ.ಮೊಬೈಲ್ ಬಳಸದೆ, ಯಾರ ಸಂಪರ್ಕವೂ ಮಾಡದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಣ್ತಪ್ಪಿಸಿಕೊಂಡು ಅವಿತುಕೊಂಡಿದ್ದನು.

ಆತ ಎಷ್ಟೇ ಬುದ್ದಿವಂತಿಕೆಯಿಂದ ಇಷ್ಟು ದಿನ ತಲೆಮರೆಸಿಕೊಂಡು ಓಡಾಡಿಕೊಂಡಿದ್ದರೂ ಸಹ ಪೊಲೀಸರು ತಮ್ಮ ಕರ್ತವ್ಯನಿಷ್ಠೆ ಮೆರೆದು ಹಗಲು-ರಾತ್ರಿಯನ್ನದೆ ಶ್ರಮವಹಿಸಿ ಘಟನೆ ನಡೆದ ಮೂರು ವಾರದೊಳಗೆ ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments