ಬೆಂಗಳೂರು ಏರ್‌ಪೋರ್ಟ್‌ನಲ್ಲಿ 1ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ಸೀಜ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.9-ವಿದೇಶದಿಂದ ಅಕ್ರಮವಾಗಿ ನಗರಕ್ಕೆ ತರಲಾಗುತ್ತಿದ್ದ ಒಂದು ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮಾದಕದ್ರವ್ಯಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ.  ಬೆಲ್ಜಿಯಂನಿಂದ ಮಸಾಜ್ ಮಾಡುವ ಯಂತ್ರಗಳಲ್ಲಿ ಡ್ರಗ್ಸ್‍ಗಳನ್ನಿಟ್ಟು ಅಕ್ರಮವಾಗಿ ನಗರಕ್ಕೆ ತರಲಾಗುತ್ತಿತ್ತು.

ಡ್ರಗ್ಸ್ ಜಾಲದ ಮೇಲೆ ಹದ್ದಿನ ಕಣ್ಣಿಟ್ಟಿರುವ ಕಸ್ಟಮ್ಸ್ ಅಧಿಕಾರಿಗಳು ವಿದೇಶದಿಂದ ಆಗಮಿಸುವ ಪ್ರತಿಯೊಂದು ವಸ್ತುಗಳನ್ನು ಸೂಕ್ಷ್ಮ ತಪಾಸಣೆಗೊಳಪಡಿಸುತ್ತಿದ್ದಾಗ ಮಸಾಜ್ ಯಂತ್ರದಲ್ಲಿಟ್ಟಿದ್ದ ಭಾರೀ ಪ್ರಮಾಣದ ಮಾದಕದ್ರವ್ಯ ಪತ್ತೆಯಾಗಿದೆ.

ಎಂಡಿಎಂಎಲ್ ಮಾತ್ರೆಗಳು, ಎಕ್ಸಾಟಿಯಾ ಸೇರಿದಂತೆ ಬೆಲೆ ಬಾಳುವ ಮಾದಕ ವಸ್ತುಗಳನ್ನು ಮಸಾಜ್ ಯಂತ್ರದಲ್ಲಿಟ್ಟು ತರಲಾಗುತ್ತಿತ್ತು. ಕಸ್ಟಮ್ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವಾರವಷ್ಟೇ ಬೆಂಗಳೂರಿಗೆ ಬರುತ್ತಿದ್ದ ಕೋಟ್ಯಂತರ ರೂ. ಬೆಲೆ ಬಾಳುವ ಮಾದಕ ವಸ್ತುಗಳನ್ನು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿತ್ತು.  ಒಂದೆಡೆ ಸ್ಯಾಂಡಲ್‍ವುಡ್‍ನಲ್ಲಿ ನಟನಟಿಯರು ಮಾದಕವಸ್ತು ಜಾಲದಲ್ಲಿ ಬಂಧನಕ್ಕೊಳಪಟ್ಟಿರುವ ಬೆನ್ನಲ್ಲೇ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳ ಈ ಕಾರ್ಯಾಚರಣೆ ಭಾರೀ ಮಹತ್ವ ಪಡೆದುಕೊಂಡಿದೆ.

ಇತ್ತೀಚೆಗೆ ಬೆಂಗಳೂರಿನಿಂದ ಹೊರಹೋಗುವ ಮತ್ತು ಒಳಬರುವ ಪ್ರತಿಯೊಂದು ವಸ್ತುಗಳ ಮೇಲೆ ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ.  ವಿದೇಶ ಸೇರಿದಂತೆ ಮುಂಬೈ, ಚೆನ್ನೈ, ಹೈದರಾಬಾದ್, ಪಣಜಿ ಮತ್ತಿತರ ಭಾಗಗಳಿಂದ ರಾಜ್ಯಕ್ಕೆ ಭಾರೀ ಪ್ರಮಾಣದ ಮಾದಕ ವಸ್ತುಗಳು ರಹಸ್ಯವಾಗಿ ಬರುತ್ತಿವೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.

ಮತ್ತೆ ಕೊರಿಯರ್, ಪೋಸ್ಟಲ್ ಬಂದರು, ಚೆಕ್‍ಪೋಸ್ಟ್ ಸೇರಿದಂತೆ ಎಲ್ಲೆಡೆ ಪೊಲೀಸರು ಕೂಡ ಕಾರ್ಯಾಚರಣೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.

Facebook Comments