ಬೆಂಗಳೂರಿನ ಬಾಪೂಜಿನಗರ ಸೀಲ್‍ಡೌನ್ ತೆರವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 7- ಬಾಪೂಜಿನಗರ ಸೀಲ್‍ಡೌನ್ ತೆರವುಗೊಳಿಸಲಾಗಿದೆ. ಬಾಪೂಜಿನಗರದಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಇಬ್ಬರು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಅವರೊಂದಿಗೆ ಸಂಪರ್ಕವಿರಿಸಿಕೊಂಡಿದ್ದ 14 ಮಂದಿಯ ವರದಿಯಲ್ಲೂ ನೆಗೆಟಿವ್ ಬಂದಿರುವುದರಿಂದ ಬಾಪೂಜಿನಗರದ ಸೀಲ್‍ಡೌನ್ ತೆರವುಗೊಳಿಸಲಾಗಿದೆ.

30 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದ ಹೊಂಗಸಂದ್ರದಲ್ಲಿ 200 ಮಂದಿಯ ಗಂಟಲು ದ್ರವವನ್ನು ಪರಿಶೀಲನೆಗೆ ಕಳುಹಿಸಲಾಗಿದ್ದು, ಈ ಎಲ್ಲ 200 ಮಂದಿಯ ವರದಿ ನೆಗೆಟಿವ್ ಬಂದರೆ ಹೊಂಗಸಂದ್ರದ ಸೀಲ್‍ಡೌನ್ ತೆರವುಗೊಳಿಸುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಪಾಸಿಟಿವ್ ಪತ್ತೆಯಾದ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್‍ಗಳಾಗಿ ಗುರುತಿಸಲಾಗಿದ್ದು, ಕೇಂದ್ರ ಸರ್ಕಾರದ ಆದೇಶದಂತೆ ಪಾಸಿಟಿವ್ ಕೇಸ್ ದಾಖಲಾದ 21 ದಿನಗಳ ನಂತರ ಕಂಟೈನ್ಮೆಂಟ್ ಝೋನ್ ತೆರವುಗೊಳಿಸಲು ಅವಕಾಶವಿದೆ.

ಹೀಗಾಗಿ ಬಾಪೂಜಿನಗರ, ಹೊಸಹಳ್ಳಿ, ಪಾದರಾಯನಪುರ ಮತ್ತಿತರ ಕಂಟೈನ್ಮೆಂಟ್ ಝೋನ್‍ಗಳ ಅವಧಿ ಪೂರ್ಣಗೊಳ್ಳಲು ಕೇವಲ ಎರಡು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಶಿವಾಜಿನಗರದಲ್ಲಿ ಒಂದು ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಚಾಂದಿನಿ ಚೌಕ್ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ. ಅಲ್ಲಿನ ಸಿಸಿ ರೋಡ್, ಎಚ್‍ಕೆಪಿ ರೋಡ್‍ಗಳಲ್ಲಿ ಜನರ ಓಡಾಟ ನಿರ್ಬಂಧಿಸಿ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಭದ್ರತೆ ನೀಡಿದ್ದರೂ ಪೊಲೀಸರ ಮಾತಿಗೆ ಜನ ಕೇರ್ ಮಾಡುತ್ತಿಲ್ಲ. ಹೀಗಾಗಿ ಆ ಪ್ರದೇಶದಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.

Facebook Comments

Sri Raghav

Admin