ಬಿಬಿಎಂಪಿ-ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ಸಾವು-ಬದುಕಿನ ನಡುವೆ ಮತ್ತೊಬ್ಬ ಬಾಲಕನ ಹೋರಾಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ16- ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತ್ತೊಬ್ಬ ಬಾಲಕನಿಗೆ ವಿದ್ಯುತ್ ತಗುಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.

ವಿದ್ಯುತ್ ಸ್ಪರ್ಶದಿಂದ ಲಿಖಿತ್(14) ಬಾಲಕ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬೆಸ್ಕಾಂ ಅಧಿಕಾರಿಗಳು ಹೈಟೆನ್ಷನ್ ವೈರ್‍ನ್ನು ಮತ್ತಿಕೆರೆಯ ನೇತಾಜಿ ಸರ್ಕಲ್ ಬಳಿ ಎಸೆದಿದ್ದರು. ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಲಿಖಿತ್‍ಗೆ ಹೈಟೆನ್ಷನ್ ವೈರ್ ತಗಲಿ ಆತನ ದೇಹ ಶೇ.40ರಷ್ಟು ಸುಟ್ಟುಹೋಗಿದೆ.

ತಕ್ಷಣ ಲಿಖಿತ್‍ನನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು,ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಖಿತ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಮಹಾಲಕ್ಷ್ಮಿ ಬಡಾವಣೆಯಲ್ಲಿ ರಸ್ತೆಯಲ್ಲಿ ಆಟವಾಡುತ್ತಿದ್ದು ಬಾಲಕನಿಗೆ ವಿದ್ಯುತ್ ಕಂಬದಿಂದ ಇಳಿಬಿದ್ದಿದ್ದ ವೈರ್ ತಗುಲಿ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಘಟನೆಗೂ ಮುನ್ನ ವಿದ್ಯುತ್ ಅವಘಡಕ್ಕೆ ಬಾಲಕನೊಬ್ಬ ಬಲಿಯಾಗಿದ್ದ. ಇದಾದ ನಂತರ ಒಬ್ಬ ಬಾಲಕನಿಗೆ ವಿದ್ಯುತ್ ಸ್ಪರ್ಶಿಸಿ ಗಾಯಗೊಂಡಿದ್ದರೂ ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Facebook Comments

Sri Raghav

Admin