ಬೆಂಗಳೂರು :  ಗುಂಡು ಹಾರಿಸಿಕೊಂಡು ನಿವೃತ್ತ ಸೇನಾ ಅಧಿಕಾರಿ ಪುತ್ರ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.17- ಆರ್ಮಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ, ನಿವೃತ್ತ ಹವಾಲ್ದಾರ್ ಪುತ್ರ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮುಂಜಾನೆ ಸದಾಶಿವನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಹುಲ್ ಭಂಡಾರಿ (17) ಆತ್ಮಹತ್ಯೆ ಮಾಡಿಕೊಂಡಿ ರುವ ದ್ವಿತೀಯ ಪಿಯುಸಿ ವಿದ್ಯಾರ್ಥಿ.

ಮೂಲತಃ ಉತ್ತರಖಂಡದವರಾದ ಭಗತ್‍ಸಿಂಗ್ ಅವರು ಸೇನೆಯಲ್ಲಿ ಹವಾಲ್ದಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಪ್ರಸ್ತುತ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 20 ವರ್ಷಗಳಿಂದ ಪತ್ನಿ, ಪುತ್ರಿ ಹಾಗೂ ಮಗ ರಾಹುಲ್ ಜೊತೆ ಆರ್.ಟಿ.ನಗರದ ಬೇಕರಿ ಬಳಿ ವಾಸವಾಗಿದ್ದಾರೆ.

ರಾಹುಲ್ ಭಂಡಾರಿ ಆರ್ಮಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು. ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದ ರಾಹುಲ್ ಪ್ರತಿನಿತ್ಯ ಬೆಳಗ್ಗೆ 3 ಗಂಟೆಗೆ ಎದ್ದು ಓದುತ್ತಿದ್ದನು. ನಂತರ ವಾಕಿಂಗ್‍ಗೆ ಹೋಗುತ್ತಿದ್ದನಂತೆ. ರಾತ್ರಿ ಅಕ್ಕ ಹಾಗೂ ಫೋಷಕರೊಂದಿಗೆ ಊಟ ಮಾಡಿ ಮಲಗಿದ ರಾಹುಲ್ ಇಂದು ಮುಂಜಾನೆ 4.25ರ ಸುಮಾರಿಗೆ ಎದ್ದು ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಹೊರಗೆ ಹೋಗಿದ್ದಾನೆ.

ಕೆಲ ಸಮಯದ ಬಳಿಕ ತಾಯಿ ಎದ್ದು ನೋಡಿದಾಗ ರಾಹುಲ್ ಕೊಠಡಿಯಲ್ಲಿ ಇರಲಿಲ್ಲ. ಆತನ ಮೊಬೈಲ್‍ಗೆ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸಿಲ್ಲ. ಗಾಬರಿಯಾಗಿ ಹುಡುಕಾಟ ನಡೆಸಿದ್ದಾರೆ. ಈ ನಡುವೆ ಇಂಡಿಯನ್ ಏರ್‍ಫೆಫೋರ್ಸ್ ಹೆಡ್‍ಕ್ವಾಟ್ರರ್ಸ್‍ನ ಗೋಡೆ ಪಕ್ಕದ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ರಾಹುಲ್ ಪಿಸ್ತೂಲಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಮಾರ್ಗದಲ್ಲಿ ಹೋಗುತ್ತಿದ್ದ ಸಾರ್ವಜನಿಕರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಕಂಡು ಪೊಲೀಸ್ ಕಂಟ್ರೋಲ್ ರೂಮ್‍ಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾಗ ರಾಹುಲ್ ಜೇಬಿನಿಂದ ಮೊಬೈಲ್ ರಿಂಗ್ ಆಗುತ್ತಿತ್ತು. ಪೊಲೀಸರು ಮೊಬೈಲ್ ತೆಗೆದು ಕರೆ ಸ್ವೀಕರಿಸಿದಾಗ ಫೋಷಕರು ಮಾತನಾಡುತ್ತಿರುವುದು ಗೊತ್ತಾಗಿ ಅವರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಆಗಮಿಸಿ ಪರಿಶೀಲನೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಥಳದಲ್ಲೇ ಪಿಸ್ತೂಲು ಪತ್ತೆಯಾಗಿದ್ದು, ಯುವಕನ ತಲೆಯ ಬಲ ಭಾಗದಿಂದ ಸಿಂಗಲ್ ಬುಲೆಟ್ ಹಾದುಹೋಗಿ ಎಡಭಾಗದಿಂದ ಹೊರಬಂದಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡುಬಂದಿದೆ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಅವರು ಹೇಳಿದರು. ರಾಹುಲ್ ಮನೆಯಲ್ಲಿದ್ದ ತಂದೆಯ ಪಿಸ್ತೂಲನ್ನು ಬ್ಯಾಗ್‍ನಲ್ಲಿ ಹಾಕಿಕೊಂಡು ಬಂದು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹಿರಿಯ ಫೋಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

ಸದಾಶಿವನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

# ಫೋಷಕರ ಆಕ್ರಂದನ:
ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ವಿಷಯ ತಿಳಿಯುತ್ತಿದ್ದಂತೆ ಫೋಷಕರು ಸ್ಥಳಕ್ಕೆ ದೌಡಾಯಿಸಿದರು. ಮನಗ ಮೃತದೇಹ ಕಂಡು ಅಪ್ಪ-ಅಮ್ಮ ರೋಧಿಸುತಿದ್ದರು. ರಾಹುಲ್ ಅಕ್ಕ ಒಂದು ರೀತಿ ದಿಗ್ಬ್ರಾಂತರಾಗಿ ಸಹೋದರ ಬೇಕೆಂದು ಅಳುತ್ತಿದ್ದ ದೃಶ್ಯ ನೆರೆದಿದ್ದವರ ಮನ ಕಲಕುವಂತಿತ್ತು.

# ರಾಹುಲ್ ತಾಯಿಯ ಪ್ರತಿಕ್ರಿಯೆ:
ಪ್ರತಿದಿನ ರಾತ್ರಿ ಹಾಗೂ ಮುಂಜಾನೆ ಎದ್ದು ಓದಿಕೊಳ್ಳುತ್ತಿದ್ದನು. ಮಾನಸಿಕ ಒತ್ತಡ ಜಾಸ್ತಿಯಾದಾಗ ಹೊರಗಡೆ ವಾಕಿಂಗ್‍ಗೆ ಹೋಗುತ್ತಿದ್ದ. ಇಂದು ಮುಂಜಾನೆ ಸಹ 4 ಗಂಟೆಗೆ ಹೊರಗೆ ಹೋಗಿದ್ದ. 5 ಗಂಟೆಯಲ್ಲಿ ಮೊಬೈಲ್‍ಗೆ ಕರೆ ಮಾಡಿದರೂ ಫೋನ್ ಸ್ವೀಕರಿಸಿಲ್ಲ ಎಂದು ಪೊಲೀಸರಿಗೆ ರಾಹುಲ್ ತಾಯಿ ದುಃಖತಪ್ತರಾಗಿ ಹೇಳಿಕೆ ನೀಡಿದ್ದಾರೆ.

# ಪ್ರತಿಭಾನ್ವಿತ ವಿದ್ಯಾರ್ಥಿ:
ಮಿಲಿಟರಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈತ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದನು. 10ನೇ ತರಗತಿಯಲ್ಲಿ ಶೇ.90ರಷ್ಟು ಅಂಕ ಪಡೆದಿದ್ದ. ಮನೆಯಲ್ಲಿಯೂ ಸಹ ಓದಬೇಕೆನ್ನುವ ಒತ್ತಡ ಇರಲಿಲ್ಲ. ಉತ್ತಮ ವ್ಯಾಸಂಗ ಮಾಡುತ್ತಿದ್ದ ರಾಹುಲ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ಕಾರಣವೇನೆಂಬುದು ನಿಗೂಢವಾಗಿದೆ. ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಎಫ್‍ಎಸ್‍ಎಲ್ ಅಧಿಕಾರಿಗಳು: ಘಟನಾ ಸ್ಥಳಕ್ಕೆ ಎಫ್‍ಎಸ್‍ಎಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಸ್ಥಳದಲ್ಲಿ ದೊರೆತ ವಸ್ತುಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಬ್ಯಾಗ್ ಪರಿಶೀಲನೆ: ಸ್ಥಳದಲ್ಲಿ ದೊರೆತ ರಾಹುಲ್ ಬ್ಯಾಗ್‍ನ್ನು ಎಫ್‍ಎಸ್‍ಎಲ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅದರಲ್ಲಿ ಚಾಕೋಲೇಟ್ ಮತ್ತು ಪ್ರಶ್ನೆಪತ್ರಿಕೆಗಳು, ಗಣಿತ ನೋಟ್ ಪುಸ್ತಕ ಇರುವುದು ಕಂಡುಬಂದಿದೆ.

ಮೊಬೈಲ್ ಕರೆಗಳ ಪರಿಶೀಲನೆ: ರಾಹುಲ್ ಜೇಬಿನಲ್ಲಿ ದೊರೆತ ಮೊಬೈಲ್‍ನ್ನು ಪೊಲೀಸರು ವಶಕ್ಕೆ ಪಡೆದು ಅದರಲ್ಲಿನ ಕರೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ರಾಹುಲ್ ಆತ್ಮಹತ್ಯೆಗೂ ಮುಂದೆ ಯಾರಿಗಾದರೂ ಮೊಬೈಲ್ ಕರೆ ಮಾಡಿ ಯಾವುದಾದರೂ ವಿಚಾರ ಹಂಚಿಕೊಂಡಿದ್ದಾನೆಯೇ ಎಂಬಿತ್ಯಾದಿಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Facebook Comments