ರಾಜ್ಯ ಸರ್ಕಾರದ ಬೊಕ್ಕಸವನ್ನು ಬರಿದಾಗಿಸುವುದೇ ಬೆಂಗಳೂರು ಲಾಕ್‍ಡೌನ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.18- ಈಗಾಗಲೇ ಲಾಕ್ಡೌನ್ ರಾಜ್ಯದ ಬೊಕ್ಕಸವನ್ನು ಬರಿದಾಗಿಸಿದೆ. ಇದೀಗ ಬೆಂಗಳೂರಿನಲ್ಲಿ ಲಾಕ್‍ಡೌನ್ ರಾಜ್ಯದ ಖಜಾನೆಯನ್ನೇ ಬುಡಮೇಲು ಮಾಡಿಸುವ ಆತಂಕ ಎದುರಾಗಿದೆ.

ಬೆಂಗಳೂರು ಲಾಕ್‍ಡೌನ್ ವಿಸ್ತರಿಸಿದರೆ ಆರ್ಥಿಕತೆಯನ್ನು ನಿರ್ವಹಿಸಲೂ ಸಾಧ್ಯವಾಗದಷ್ಟು ಹೀನಾಯ ಸ್ಥಿತಿಗೆ ತಲುಪಲಿದ್ದೇವೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಬೆಂಗಳೂರಲ್ಲಿ ಒಂದು ವಾರದ ಲಾಕ್ಡೌನ್ ಹೇರಿದೆ. ಇತ್ತ ಲಾಕ್ಡೌನ್ ವಿಸ್ತರಣೆ ಮಾಡುವಂತೆ ಅಧಿಕಾರಿಗಳು, ತಜ್ಞರು ಒತ್ತಾಯಿಸುತ್ತಿದ್ದಾರೆ.

ಆದರೆ, ಸಿಎಂ ಲಾಕ್‍ಡೌನ್ ವಿಸ್ತರಣೆ ಮಾಡುವ ಬಗ್ಗೆ ಒಲವು ಹೊಂದಿಲ್ಲ. ಲಾಕ್ಡೌನ್ ಪರಿಹಾರ ಅಲ್ಲ, ಅದರ ಬದಲು ಮೂಲಸೌಕರ್ಯ ಹೆಚ್ಚಿಸುವ ಅಗತ್ಯ ಇದೆ ಎಂಬುದು ಸಿಎಂ ನಿಲುವಾಗಿದೆ.

# ಲಾಕ್‍ಡೌನ್ ವಿಸ್ತರಣೆಗೆ ಆರ್ಥಿಕ ಇಲಾಖೆ ವಿರೋಧ:
ಲಾಕ್‍ಡೌನ್ ವಿಸ್ತರಣೆಗೆ ಆರ್ಥಿಕ ಇಲಾಖೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಒಂದು ವೇಳೆ ಲಾಕ್‍ಡೌನ್ ವಿಸ್ತರಿಸಿದರೆ ಆದಾಯ ಸಂಗ್ರಹ ಭಾಗಶಃ ಬರಿದಾಗಲಿದೆ.

ಈಗಷ್ಟೇ ಚೇತರಿಕೆ ಕಾಣುತ್ತಿದ್ದ ತೆರಿಗೆ ಸಂಗ್ರಹ, ಲಾಕ್ಡೌನ್ ವಿಸ್ತರಿಸಿದರೆ ಮರುಚೇತರಿಕೆ ಕಾಣಬೇಕಾದರೆ ಮತ್ತೆ ಕೆಲ ತಿಂಗಳುಗಳೇ ಬೇಕಾಗಬಹುದು ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ವಾರದ ಲಾಕಡೌನ್‍ನಿಂದಾಗಿ ಈಗಾಗಲೇ ದೊಡ್ಡ ನಷ್ಟ ಸಂಭವಿಸಿದ್ದು, ಮತ್ತೆ ವಿಸ್ತರಣೆ ಮಾಡಿದರೆ ಬೊಕ್ಕಸ ತುಂಬಿಸುವುದು ಅಕ್ಷರಶಃ ಅಸಾಧ್ಯವಾಗಲಿದೆ ಎಂಬ ವಾಸ್ತವತೆಯನ್ನು ಸಿಎಂ ಮುಂದೆ ಆರ್ಥಿಕ ಇಲಾಖೆ ಅಧಿಕಾರಿಗಳು ಇಟ್ಟಿದ್ದಾರೆ.

ಒಂದು ವೇಳೆ ಲಾಕ್ಡೌನ್ ವಿಸ್ತರಿಸಿದರೆ ಸರ್ಕಾರಿ ನೌಕರರಿಗೆ ವೇತನ ನೀಡುವುದು ಕಷ್ಟಕರವಾಗಲಿದೆ. ಈಗಾಗಲೇ ಹೊಸ ಯೋಜನೆಗಳನ್ನು ತಡೆ ಹಿಡಿಯಲಾಗಿದೆ. ಲಾಕ್ಡೌನ್ ಮುಂದುವರಿಸಿದರೆ ಹೊಸ ಯೋಜನೆಯಷ್ಟೇ ಅಲ್ಲ, ಮೂಲಸೌಕರ್ಯಗಳಿಗೂ ಹಣ ಹೊಂದಿಸುವುದು ಕಷ್ಟಕರವಾಗಲಿದೆ ಎಂಬುದನ್ನು ಸ್ಪಷ್ಟವಾಗಿ ಸಿಎಂಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದಾಯ ಬಹುತೇಕ ಬರಿದಾಗುವುದರಿಂದ ಹಣ ಹೊಂದಿಸಲು ಸರ್ಕಾರಿ ನೌಕರರ ವೇತನ ಕಡಿತ ಅನಿವಾರ್ಯವಾಗಲಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದರ ಜೊತೆಗೆ ಜನಪ್ರತಿನಿಧಿಗಳಿಗೆ ನೀಡಲಾಗುವ ಸೌಲಭ್ಯ, ಭತ್ಯೆಗಳನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ ಎಂದಿದ್ದಾರೆ.

ಅಷ್ಟೇ ಅಲ್ಲದೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹಣವನ್ನೂ ಕಡಿತ ಮಾಡಿ ಅಗತ್ಯ ಮೂಲಸೌಕರ್ಯ ಉದ್ದೇಶಕ್ಕೆ ಬಳಸಬೇಕಾಗುತ್ತದೆ. ಇತ್ತ ವಿತ್ತೀಯ ಕೊರತೆ ಹೆಚ್ಚಾಗಲಿದ್ದು, ಶೇ 5-6 ತಲುಪುವ ಸಾಧ್ಯತೆ ಅಧಿಕವಾಗಿದೆ. ಇದು ಬೊಕ್ಕಸದ ಮೇಲೆ ಭಾರೀ ಹೊರೆ ಮಾಡಲಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin