ಬೆಂಗಳೂರಲ್ಲಿ ಲೆಕ್ಕಕ್ಕಿಲ್ಲ ಲಾಕ್ಡೌನ್, ಜನರ ಬಿಂದಾಸ್ ಓಡಾಟ..!
ಬೆಂಗಳೂರು,ಜು.15- ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಇಂದಿನಿಂದ 8 ದಿನಗಳ ಕಾಲ ಲಾಕ್ಡೌನ್ ಮೂಲಕ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದರೂ ತಮಗೂ ಅದಕ್ಕೂ ಸಂಬಂಧವಿಲ್ಲವೇನೋ ಎಂದು ಜನ ತಮ್ಮ ಪಾಡಿಗೆ ತಾವು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ.
ಸೋಂಕು ವ್ಯಾಪಿಸಬಾರದು ಎಂದು ಎಲ್ಲವನ್ನೂ ನಿರ್ಬಂಧಗೊಳಿಸಿ ಜನ ಮನೆಯಲ್ಲಿರಬೇಕೆಂದು ಹೇಳಿದ್ದರೂ ಕೂಡ ಅದಕ್ಕೆ ಕ್ಯಾರೆ ಎನ್ನದೇ ಜನ ತಮ್ಮ ವಾಹನಗಳಲ್ಲಿ ಓಡಾಡುತ್ತಿರುವುದು ಇಂದು ಕಂಡು ಬಂತು. ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸುತ್ತಿದ್ದರು.
ನಿನ್ನೆ ರಾತ್ರಿಯಿಂದಲೇ ಎಲ್ಲಾ ಪ್ರಮುಖ ರಸ್ತೆ, ಮೇಲ್ಸೇತುವೆಗಳನ್ನು ಬ್ಲಾಕ್ ಮಾಡಿದ್ದರೂ ಕೂಡ ಸಾರ್ವಜನಿಕರ ಓಡಾಟ ಇಂದು ಹೆಚ್ಚಾಗಿಯೇ ಇತ್ತು. ಆಟೋ, ಟ್ಯಾಕ್ಸಿ, ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗಿಳಿಯಲಿಲ್ಲವಾದರೂ ಕಾರು, ದ್ವಿಚಕ್ರ ವಾಹನಗಳ ಮೂಲಕ ಇಂದು ಜನ ಓಡಾಡುತ್ತಿದ್ದರಿಂದ ಹಲವೆಡೆ ಟ್ರಾಫಿಕ್ಮ್ ಜಾ ಉಂಟಾಯಿತು.
ಬೆಂಗಳೂರಿನ ಆನಂದ್ ರಾವ್ ವೃತ್ತ, ಕೆ.ಆರ್.ಸರ್ಕಲ್, ಹೆಬ್ಬಾಳ ವೃತ್ತ, ಯಶವಂತಪುರ ಮುಂತಾದೆಡೆ ಮಧ್ಯಾಹ್ನದವರೆಗೆ ಜನರ ಓಡಾಟ, ವಾಹನಗಳ ಸಂಚಾರ ಸಾಮಾನ್ಯವಾಗಿತ್ತು. ಪೊಲೀಸರು ಲಾಕ್ಡೌನ್ ನಿಯಮ ಮೀರುತ್ತಿರುವ ಜನರಿಗೆ ಮನವರಿಕೆ ಮಾಡಿ ಮನೆಗೆ ಕಳುಹಿಸಲು ಹರಸಾಹಸ ಪಡುತ್ತಿದ್ದರು.
ನಿರ್ಮಾಣ ವಲಯ, ಕೈಗಾರಿಕಾ ವಲಯವನ್ನು ಸರ್ಕಾರ ನಿರ್ಬಂಧಿಸಿಲ್ಲ. ಹಾಗಾಗಿ ಕೆಲಸಕ್ಕೆ ಹೋಗುವವರು ಎಂಬ ನೆಪದಲ್ಲಿ ಓಡಾಡುವವರು, ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಿದ್ದೇವೆ ಎಂಬ ನೆಪದಲ್ಲಿ ಸಂಚರಿಸುವವರ ಓಡಾಟ ಹೆಚ್ಚಾಗಿ ಕಂಡು ಬಂತು.
ಮೊದಲ ದಿನವಾದ್ದರಿಂದ ಪೊಲೀಸರು ಅಷ್ಟು ಕಟ್ಟುನಿಟ್ಟಿನ ಕ್ರಮ ಜರುಗಿಸಿದಂತಿರಲಿಲ್ಲ. ಎಲ್ಲರಿಗೂ ತಿಳಿ ಹೇಳಿ ಕಳುಹಿಸುತ್ತಿದ್ದರು. ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶವಿದ್ದುದರಿಂದ ಅವರಿಗೆ ಮನವರಿಕೆ ಮಾಡಿ ಕಳುಹಿಸುತ್ತಿದ್ದರು.
ಮಧ್ಯಾಹ್ನದ ನಂತರ ಲಾಕ್ಡೌನ್ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ಕೂಡ ನೀಡುತ್ತಿದ್ದರು. ಕೊರೋನಾ ಸೋಂಕು ಮತ್ತು ಸಾವಿನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಜನ ಸ್ವಯಂ ಜಾಗೃತಿವಹಿಸಬೇಕು.
ಅನಗತ್ಯ ಓಡಾಟವನ್ನು ನಿಲ್ಲಿಸಬೇಕು. ಎಷ್ಟು ಹೇಳಿದರೂ ಕೇಳುವುದಿಲ್ಲ. ಇದೇ ರೀತಿ ಹೊರ ಬಂದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಅವಶ್ಯಕ ವಸ್ತುಗಳನ್ನು ಕೊಳ್ಳಲು ಅವಕಾಶ ನೀಡಿದ್ದರೂ ಕೂಡ ಅನಗತ್ಯವಾಗಿ ಜನ ಓಡಾಟ ಮಾಡುತ್ತಾರೆ. ಇದನ್ನು ನಿಯಂತ್ರಿಸಲು ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ.
ರಾಜಧಾನಿ ಬೆಂಗಳೂರು,ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಧಾರವಾಡ, ಬೆಳಗಾವಿ ಸೇರಿದಂತೆ 12 ಜಿಲ್ಲೆಗಳಲ್ಲಿ ಲಾಕ್ಡೌನ್ ಜಾರಿಯಾದ ಪರಿಣಾಮ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದ್ದರೂ ಜನರ ಓಡಾಟ ನಿಂತಿರಲಿಲ್ಲ. ಜನರಲ್ಲಿ ಕೊರೋನಾ ಆತಂಕದ ಜೊತೆಗೆ ಈ ಹಿಂದೆ ಲಾಕ್ಡೌನ್ ಸಂದರ್ಭದಲ್ಲಿ ವಾಹನಗಳು ಸೀಜ್ ಆಗಿ, ಪ್ರಕರಣಗಳು ದಾಖಲಾಗಿತ್ತು.
ಈ ಬಾರಿ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆಯ ನಡುವೆಯೂ ಜನರು ವಾಹನಗಳಲ್ಲಿ ಓಡಾಡುತ್ತಿದ್ದರು.
ಬಸ್ಗಳು ಬಂದ್ ಆಗಿದ್ದರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಮೌಲ್ಯಮಾಪನ ನಡೆಯುತ್ತಿದ್ದು ಧಾರವಾಡ, ಹುಬ್ಬಳ್ಳಿ, ಮೈಸೂರು ಮೌಲ್ಯಮಾಪನ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಬೆಳಗ್ಗೆ ಬಸ್ ಇಲ್ಲದ ಪರಿಣಾಮ ಮೌಲ್ಯಮಾಪಕರು ಲಾಕ್ಡೌನ್ನಿಂದ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಬೆಳ್ಳಂಬೆಳಗ್ಗೆ ಅಂಗಡಿ ಮುಂಗಟ್ಟುಗಳು, ಹೋಟೆಲ್ಗಳು ಬಂದ್ ಆದ ಪರಿಣಾಮ ಸಾರ್ವಜನಿಕರಿಗೆ ತೊಂದರೆಯಾಯಿತು. ಬೆಂಗಳೂರಿನಲ್ಲಿ ಬಹುತೇಕ ಹೋಟೆಲ್ಗಳು ಮುಚ್ಚಿದ್ದರಿಂದ ಬಡ ಹಾಗೂ ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಇಂದಿರಾ ಕ್ಯಾಂಟೀನ್ನಲ್ಲಿ ತಿಂಡಿ ಖರೀದಿಸುತ್ತಿದ್ದುದು ಕಂಡು ಬಂತು.
ಮಂಗಳೂರಿನಲ್ಲಿ ಲಾಕ್ಡೌನ್ ಇದ್ದರೂ ಕೂಡ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಣ್ಣು, ತರಕಾರಿ ಮೀನು ಮಾಂಸ ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು. ಪೊಲೀಸರು ಇಲ್ಲಿಗೆ ಆಗಮಿಸಿ ಜನರಿಗೆ ವಾರ್ನಿಂಗ್ ಮಾಡುತ್ತಿದ್ದುದು ಕಂಡುಬಂತು.
ಬೆಳಗಾವಿಯಲ್ಲೂ ಕೂಡ ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೋನಾ ಸೋಂಕು ನಿವಾರಣೆಯಾದರೆ ಸಾಕು ಎಂದು ತೀರ್ಮಾನಕ್ಕೆ ಬಂದಿರುವ ಜನ ಮನೆಯಿಂದ ಹೊರಬರುತ್ತಿಲ್ಲ. ಅಗತ್ಯ ವಸ್ತುಗಳನ್ನು ಕೊಂಡು ಮನೆ ಸೇರಿದ್ದಾರೆ.