2024ಕ್ಕೆ ಬೆಂಗಳೂರು ಮೆಟ್ರೊ 2ನೇ ಹಂತ ಪೂರ್ಣ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.30-ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ಕೈಗೆತ್ತಿಕೊಂಡಿರುವ ಬೆಂಗಳೂರು ಮೆಟ್ರೊ ಹಂತ-2ನ್ನು 2024ಕ್ಕೆ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಶಿವಾಜಿನಗರದ ಅಬ್ದುಲ್‍ಭಾರಿ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಮೆಟ್ರೊ 2ನೇ ಹಂತದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಶಿವಾಜಿನಗರ ಮೆಟ್ರೊ ರೈಲ್ವೆ ನಿಲ್ದಾಣದ ನಡುವೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

2024ರ ಅಂತ್ಯಕ್ಕೆ ಬೆಂಗಳೂರು ಮೆಟ್ರೊ 2ನೇ ಹಂತ ಪೂರ್ಣಗೊಳಿಸುವ ಗುರಿಯೊಂದಿಗೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ ಹಣಕಾಸಿನ ನೆರವನ್ನು ಸಹ ನೀಡಲಾಗಿದೆ. ಈ ಕಾಮಗಾರಿ ಪೂರ್ಣಗೊಂಡರೆ ನಗರದ ಸಂಚಾರ ದಟ್ಟಣೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಬೆಂಗಳೂರು ಮೆಟ್ರೋ 2ನೇ ಹಂತದಲ್ಲಿ ಈಗಾಗಲೇ ಸಿಲ್ಕ್ ಜಂಕ್ಷನ್ ವೃತ್ತದಿಂದ ಕೆಂಪೇಗೌಡ ಅಂತಾರಾಷ್ಟ್ರೀಯವ ವಿಮಾನ ನಿಲ್ದಾಣ, ರಿಚ್-4ನಲ್ಲಿ ಎಲೇಚನಹಳ್ಳಿಯಿಂದ ಅಂಜನಪುರ , ರಿಚ್-2ನಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿ, ರಿಚ್-3ನಲ್ಲಿ ನಾಗಸಂದ್ರದಿಂದ ಬಿಐಇಸಿ ಹಾಗೂ ರಿಚ್-4ನಲ್ಲಿ ಬೊಮ್ಮನಹಳ್ಳಿಯಿಂದ ವೈಟ್‍ಫೀಲ್ಡ್‍ವರೆಗೆ ಮಾರ್ಗಗಳನ್ನು ವಿಸ್ತರಣೆ ಮಾಡಲಾಗಿದೆ ಎಂದರು.

2020ರಲ್ಲಿ ರಿಚ್-5 ಮೂಲಕ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರಕ್ಕೆ ಹಾಗೂ 2024ಕ್ಕೆ ರಿಚ್-6ನಲ್ಲಿ ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಯೋಜನೆಯನ್ನು ವಿಸ್ತರಣೆ ಮಾಡುವ ಗುರಿ ಇಟ್ಟುಕೊಂಡಿರುವುದಾಗಿ ಸಿಎಂ ತಿಳಿಸಿದರು.

ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಒಟ್ಟು 9,934.58 ಕೋಟಿ ವೆಚ್ಚವಾಗಲಿದೆ. ಈಗಾಗಲೇ ವಿಸ್ತೃತ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿದ್ದು, ಕೇಂದ್ರದ ಅನುಮತಿಯನ್ನು ಎದುರು ನೋಡುತ್ತಿರುವುದಾಗಿ ವಿವರಿಸಿದರು.

ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಜಾಗತಿಕವಾಗಿ ಬೆಳೆಯುತ್ತಿರುವ ಈ ನಗರಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಇನ್ನಷ್ಟು ಹೆಚ್ಚಳ ಮಾಡಲು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂದರು.

ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ 30 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು 1500 ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸಿದ್ದೇವೆ. ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ 28.10 ಕಿ.ಮೀ ರಸ್ತೆಗಳನ್ನು ಪುನಶ್ಚೇತನ ಮಾಡಲಿದ್ದೇವೆ. ನಗರದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಸಿಎಂ ಪುನರುಚ್ಚರಿಸಿದರು.

ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ಶಿವಾಜಿನಗರಕ್ಕೆ ಸಂಪರ್ಕ ಕಲ್ಪಿಸುವ ಈ ಸುರಂಗ ಮಾರ್ಗವು ಒಟ್ಟು 7.5 ಕಿ.ಮೀ ಎಲಿವೇಟರ್ ಕಾರಿಡಾರ್‍ನ್ನು ಹೊಂದಿದೆ. ಇದರಲ್ಲಿ 12 ನೆಲದಡಿಯ ನಿಲ್ದಾಣಗಳು, 10.37 ಕಿ.ಮೀ ಅವಳಿ ಸುರಂಗ ಹೊಂದಿದೆ.

ಒಟ್ಟು ಆರ್‍ಟಿ-1, ಆರ್‍ಟಿ-2, ಆರ್‍ಟಿ-3, ಆರ್‍ಟಿ-4ರಂತೆ ಒಟ್ಟು ನಾಲ್ಕು ಪ್ಯಾಕೇಜ್‍ಗಳಾಗಿ ವಿಂಗಡಿಸಲಾಗಿದೆ. ಸುರಂಗ ಮಾರ್ಗವನ್ನು ಪೂರ್ಣಗೊಳಿಸಲು ಲಾರ್ಸೆನ್ ಮತ್ತು ಟೌಬ್ರೊ ಲಿಮಿಟೆಡ್‍ಗೆ ವಹಿಸಲಾಗಿದೆ.
ಸುರಂಗ ಕೊರೆಯುವ ಯಂತ್ರಕ್ಕೆ ಊರ್ಜ ಮತ್ತು ವಿಂದ್ಯಾ ಎಂದು ನಾಮಕರಣ ಮಾಡಲಾಗಿದೆ.

ನಮ್ಮ ನಿರೀಕ್ಷೆಗೆ ತಕ್ಕಂತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನು ಸಿಎಂ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ಆರ್.ಅಶೋಕ್, ಭೈರತಿ ಬಸವರಾಜ್, ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin