ವಿದ್ಯುತ್ ತಂತಿ ತಗುಲಿ ಆಸ್ಪತ್ರೆ ಸೇರಿದ್ದ ಬಾಲಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 20- ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಹೈಟೆನ್ಷನ್ ವೈರ್ ತಗುಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಸಾವನ್ನಪ್ಪಿದ್ದಾನೆ.

ಮೃತಪಟ್ಟ ಬಾಲಕನನ್ನು ನಿಖಿಲ್ ಎಂದು ಗುರುತಿಸಲಾಗಿದೆ. ನಾಲ್ಕು ದಿನಗಳ ಹಿಂದೆ ಮತ್ತಿಕೆರೆ ವಾರ್ಡ್ ನೇತಾಜಿ ಸರ್ಕಲ್ ಸಮೀಪ ಕ್ರಿಕೆಟ್ ಆಡುತ್ತಿದ್ದಾಗ ಮನೆ ಮೇಲೆ ಬಿದ್ದ ಬಾಲ್‍ನ್ನು ಎತ್ತಿಕೊಳ್ಳಲು ಹೋದಾಗ ನಿಖಿಲ್‍ಗೆ ಹೈಟೆನ್ಷನ್ ವೈರ್ ತಗುಲಿ ಶೇ.40ರಷ್ಟು ಸುಟ್ಟ ಗಾಯಗಳಾಗಿತ್ತು.

ತಕ್ಷಣ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ ಆತ ಮೃತಪಟ್ಟಿದ್ದಾನೆ ಎಂದು ನಿಖಿಲ್ ಕುಟುಂಬ ಮೂಲಗಳು ತಿಳಿಸಿವೆ.  ಹೈಟೆನ್ಷನ್ ತಂತಿ ಸಾಗುವ ಮಾರ್ಗದ ಮಧ್ಯೆ ಬಿಬಿಎಂಪಿಯವರು ಅಕ್ರಮವಾಗಿ ಮನೆ ಕಟ್ಟಿಕೊಳ್ಳಲು ಅನುಮತಿ ನೀಡಿದ್ದೇ ಇಷ್ಟೆಲ್ಲ ಅನಾಹುತಕ್ಕೆ ಕಾರಣ ಎನ್ನಲಾಗಿದೆ.

ನಿಖಿಲ್ ಪ್ರಕರಣಕ್ಕೂ ಮುನ್ನ ನಂದಿನಿಲೇಔಟ್‍ನ ರಸ್ತೆಯಲ್ಲಿ ಆಟವಾಡುತ್ತಿದ್ದ ಮತ್ತೊಬ್ಬ ಬಾಲಕನಿಗೂ ವಿದ್ಯುತ್ ತಗುಲಿ ಆತ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.  ಇಷ್ಟೆಲ್ಲ ಆದರೂ ಸಂಬಂಧಪಟ್ಟ ಬೆಸ್ಕಾಂ ಮತ್ತು ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

Facebook Comments

Sri Raghav

Admin