ಪ್ಲಾಸ್ಟಿಕ್ ಉತ್ಪನ್ನ ಮಾರಾಟ ಮಾಡಿದರೆ ಅಂಗಡಿಗಳ ಪರವಾನಗಿ ರದ್ದು..!

ಈ ಸುದ್ದಿಯನ್ನು ಶೇರ್ ಮಾಡಿ

BBMP--01

ಬೆಂಗಳೂರು, ಜು.7-ನಗರದ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ಹಾಡುವ ಉದ್ದೇಶದಿಂದ ಇನ್ನು ಮುಂದೆ ಪ್ಲಾಸ್ಟಿಕ್ ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಮೇಯರ್ ಸಂಪತ್‍ರಾಜ್ ತಿಳಿಸಿದರು. ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಂದು ಕರೆಯಲಾಗಿದ್ದ ವಿಶೇಷ ಪಾಲಿಕೆ ಸಭೆಯಲ್ಲಿ ಅವರು ಈ ಆದೇಶ ಹೊರಡಿಸಿದರು. ಪ್ಲಾಸ್ಟಿಕ್ ಬಳಕೆ ತಡೆಗಟ್ಟಲು ಒಂದು ವಾರ ಗಡುವು ನೀಡಲಾಗುವುದು. ನಂತರ ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿಗಳು ಹಾಗೂ ಪ್ಲಾಸ್ಟಿಕ್ ಉತ್ಪನ್ನ ನೀಡುವ ಮಳಿಗೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರ್ಯಾಂಕಿಂಗ್ ರಾಜಕೀಯ:
ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಮಾತನಾಡಿ, ಸ್ವಚ್ಛ ನಗರ ರ್ಯಾಂಕಿಂಗ್ ನೀಡುವಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡಿದೆ ಎಂದು ಹೇಳಿದರು. ಈ ಮಾತು ಬಿಜೆಪಿ ಸದಸ್ಯರನ್ನು ಕೆರಳಿಸಿತು. ಕೆಲಕಾಲ ಗದ್ದಲ ಸೃಷ್ಟಿ ಮಾಡಿದರು. ಹಿಂದೆ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇದ್ದಾಗ ಕಸದ ಸಮಸ್ಯೆ ತಾಂಡವವಾಡುತ್ತಿತ್ತು. ಮಂಡೂರು ಘಟಕದಲ್ಲಿ ಬೆಂಕಿ ಬಿದ್ದಿತ್ತು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಆಗ ಕೇಂದ್ರ ಸರ್ಕಾರ ನಗರಕ್ಕೆ ಉತ್ತಮ ರ್ಯಾಂಕಿಂಗ್ ನೀಡಿತ್ತು. ಈಗ ಸಮ್ಮಿಶ್ರ ಆಡಳಿತ ನಡೆಯುತ್ತಿದೆ. ಕಸದ ಸಮಸ್ಯೆ ಬಹುತೇಕ ಕಡಿಮೆಯಾಗಿದೆ. ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ, ವಿಜ್ಞಾನಿ ಸಿ.ಎನ್.ಆರ್.ರಾವ್, ನಟರಾದ ಶಿವರಾಜ್‍ಕುಮಾರ್, ರಮೇಶ್ ಅರವಿಂದ್ ಅಂತಹವರನ್ನು ರಾಯಭಾರಿಗಳನ್ನಾಗಿ ಮಾಡಿ ಬೆಂಗಳೂರನ್ನು ಸ್ವಚ್ಛ ನಗರಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಬ್ಯಾನರ್ ಮತ್ತು ಫೋಟೋಗಳಲ್ಲಿ ಪ್ರಧಾನಿ ಬದಲಿಗೆ ಸಿಎಂ ಫೋಟೋ ಹಾಕಿದ್ದಕ್ಕೆ ರ್ಯಾಂಕಿಂಗ್ ಕಡಿಮೆಯಾಗಿದೆ, ಕೇಂದ್ರ ಸರ್ಕಾರ ದುರುದ್ದೇಶದಿಂದ ಈ ಕೆಲಸ ಮಾಡಿದೆ. ಮುಂಬೈ-ದೆಹಲಿಗಿಂತ ನಮ್ಮ ಬೆಂಗಳೂರು ಕಳಪೆಯಾಗಿದೆಯಾ? ಅಲ್ಲಿಗೆಲ್ಲ ಉತ್ತಮ ರ್ಯಾಂಕಿಂಗ್ ಕೊಡಲಾಗಿದೆ ಎಂದು ಶಿವರಾಜ್ ಹೇಳಿದ ತಕ್ಷಣ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಉಮೇಶ್‍ಶೆಟ್ಟಿ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದರು.

ಕಸ ವಿಲೇವಾರಿ ಬಗ್ಗೆ ಮಾತನಾಡಿ ಎಂದರೆ, ಏನೇನೋ ಹೇಳಿಕೆ ನೀಡಬೇಡಿ. ಸಣ್ಣಪುಟ್ಟ ವಿಷಯಕ್ಕೆ ರಾಜಕೀಯ ಮಾಡಬೇಡಿ ಎಂದು ಕಾಲೆಳೆದರು. ಮಾತು ಮುಂದುವರೆಸಿದ ಶಿವರಾಜ್, ನಗರವನ್ನು ಸ್ವಚ್ಛವಾಗಿಡಲು ಸಾಕಷ್ಟು ಕೆಲಸ ಮಾಡಲಾಗಿದೆ. ಕ್ಲೀನ್‍ಥಾನ್ ಎಂಬ ಕಾನ್ಸೆಪ್ಟ್‍ನಲ್ಲಿ ನಗರ ಶುಚಿಯಾಗಿಡುವ ಕೆಲಸ ಚಾಲ್ತಿಯಲ್ಲಿದೆ. ಸ್ಮಾರ್ಟ್‍ಬಿನ್ ಅಳವಡಿಸಲಾಗಿದೆ. ಚಿಂದಿ ಆಯುವ ಜನರಿಗೂ ಗುರುತಿನ ಚೀಟಿ ನೀಡಿ ಅವರನ್ನು ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕಾಂಫೋಸ್ಟ್ ಘಟಕಗಳ ಸುರಕ್ಷತೆಗೆ ಮಾರ್ಪಲ್ ನೇಮಕ ಮಾಡಿದ್ದೇವೆ. ಕಸದಿಂದ ವಿದ್ಯುತ್ ತಯಾರಿಸಲು ನೆದರ್‍ಲ್ಯಾಂಡ್ ಕಂಪೆನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಮಧ್ಯಪ್ರವೇಶಿಸಿ, ನಿನ್ನೆ ಪಾಲಿಕೆ ಸಭೆಯಲ್ಲಿ ಸದಸ್ಯೆ ರೂಪಾ ತಲೆ ತಿರುಗಿ ಬಿದ್ದುದನ್ನು ಪ್ರಸ್ತಾಪಿಸಿ ಸರಿಯಾದ ಸಮಯಕ್ಕೆ ಸಭೆ ಆರಂಭಿಸಿ ಊಟದ ಸಮಯಕ್ಕೆ ಸದಸ್ಯರನ್ನು ಬಿಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಮೇಯರ್ ಇನ್ನು ಮುಂದೆ 2 ಗಂಟೆಗೆ ಸರಿಯಾಗಿ ಬ್ರೇಕ್ ನೀಡುವಂತೆ ಕೌನ್ಸಿಲ್ ಕಾರ್ಯದರ್ಶಿಗೆ ಆದೇಶಿಸಿದರು.

ಇದೇ ವೇಳೆ ಶಾಸಕಿ ಸೌಮ್ಯರೆಡ್ಡಿ ಕಸದ ವಿಷಯ ಪ್ರಸ್ತಾಪಿಸಿ, ನಗರದಲ್ಲಿ ಶೇ.60ರಷ್ಟಿದ್ದ ಕಸದ ನಿರ್ವಹಣೆ ಶೇ.50ಕ್ಕಿಳಿದಿದೆ. ಬ್ಲಾಕ್‍ಸ್ಪಾಟ್‍ಗಳ ಸಂಖ್ಯೆ ಹೆಚ್ಚಾಗಿದೆ. ಪ್ರಾಣಿಜನ್ಯ ಘನ ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಘಟಕಗಳ ಅಗತ್ಯವಿದೆ ಎಂದು ಹೇಳಿದರು. ಪ್ಲಾಸ್ಟಿಕ್ ನಿಷೇಧ ಸರಿಯಾಗಿ ಆಗಿಲ್ಲ. ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮವಹಿಸಿ ದಂಡ ವಿಧಿಸಿ ಎಂದು ಹೇಳಿದರು. ಹೊಟೇಲ್ ತ್ಯಾಜ್ಯ, ಪ್ಲಾಸ್ಟಿಕ್ ಬಳಕೆ ವಿರುದ್ಧವೂ ಕ್ರಮಕೈಗೊಳ್ಳಬೇಕು. ಕಸದ ಕಡೆ ಹೆಚ್ಚು ಗಮನ ಕೊಡಲು ಒಂದು ವಿಶೇಷ ತಂಡ ರಚಿಸಿ ಎಂದು ಅವರು ಮನವಿ ಮಾಡಿದರು.

Facebook Comments

Sri Raghav

Admin