ಕಾಮಕ್ರಿಮಿಗಳ ಎನ್‍ಕೌಂಟರ್ ಬಗ್ಗೆ ನಗರ ಪೋಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.6- ಹೈದರಾಬಾದ್‍ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ಮಾಡಿದ್ದ ದುಷ್ಕರ್ಮಿಗಳ ಮೇಲೆ ಎನ್‍ಕೌಂಟರ್ ಪ್ರಯೋಗ ಮಾಡಿದ್ದು ಸರಿಯಾದ ನಿರ್ಧಾರವಾಗಿದೆ. ಇಂತಹ ಸಂದರ್ಭದಲ್ಲಿ ಪೊಲೀಸರನ್ನು ಎಲ್ಲರೂ ಬೆಂಬಲಿಸಬೇಕೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಕರೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಜರು ಮಾಡಲು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣ ದೇಶದ ಗಮನ ಸೆಳೆದಿದೆ. ಒಬ್ಬ ಆರೋಪಿ ತಪ್ಪಿಸಿಕೊಂಡಿದ್ದರೂ ಒತ್ತಡ ಹೆಚ್ಚಾಗುತ್ತಿತ್ತು.

ಈಗಾಗಲೇ ಘಟನೆ ಕುರಿತು ಪ್ರತಿ ದಿನದ ಬೆಳವಣಿಗೆಗಳ ಮೇಲೆ ನಿಗಾ ವಹಿಸುವುದಾಗಿ ಅಲ್ಲಿನ ಸರ್ಕಾರ ಹೇಳಿಕೊಂಡಿದ್ದು, ಇದರಿಂದ ಪೊಲೀಸರ ಮೇಲೆ ಒತ್ತಡ ಈಗಾಗಲೇ ಹೆಚ್ಚಿತ್ತು. ಆರೋಪಿಗಳು ತಪ್ಪಿಸಿಕೊಂಡಿದ್ದರೆ ಪರಿಸ್ಥಿತಿ ಬೇರೆ ರೀತಿ ತಿರುಗುತ್ತಿತ್ತು. ಹಾಗಾಗಿ ಅಲ್ಲಿನ ಪೊಲೀಸರು ಗಂಭೀರ ಕ್ರಮ ಕೈಗೊಂಡಿರುವುದ ಸಮರ್ಥನೀಯ, ಸರಿಯಾದ ನಿರ್ಧಾರ ಕೂಡ ಎಂದರು. ಘಟನೆಯಲ್ಲಿ ಒಬ್ಬ ಆರೋಪಿಯಷ್ಟೇ ಭಾಗಿಯಾಗಿಲ್ಲ. ನಾಲ್ಕು ಮಂದಿ ಇದ್ದಾರೆ. ಹಾಗಾಗಿ ಅತ್ಯಾಚಾರ ಮತ್ತು ಕೊಲೆ ವ್ಯವಸ್ಥಿತವಾದ ಅಪರಾಧವಾಗಿದೆ. ಆರೋಪಿಗಳ ವಿಷಯದಲ್ಲಿ ಪೊಲೀಸರ ತೀರ್ಮಾನ ಸೂಕ್ತವಾಗಿದೆ ಎಂದು ಹೇಳಿದರು.

# ಸುರಕ್ಷಾ ಆ್ಯಪ್‍ಗೆ ಹೆಚ್ಚಿದ ಬೇಡಿಕೆ:
ಬೆಂಗಳೂರು ಪೊಲೀಸರು ರೂಪಿಸಿರುವ ಸುರಕ್ಷಾ ಆ್ಯಪ್‍ಗೆ ಬೇಡಿಕೆ ಹೆಚ್ಚಾಗಿದೆ. ಈ ಮೊದಲು 40 ಸಾವಿರ ಮಂದಿ ಡೌನ್‍ಲೋಡ್ ಮಾಡಿಕೊಂಡಿದ್ದರು. ಹೈದರಾಬಾದ್ ಘಟನೆ ನಂತರ 1.90ಲಕ್ಷ ಡೌನಲೋಡ್ ಆಗಿದೆ. ಸ್ಮಾರ್ಟ್‍ ಫೋನ್ ಇಲ್ಲದವರಿಗೆ ಸಹಾಯವಾಣಿ 100ರ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಮಹಿಳೆಯರ ರಕ್ಷಣೆ ಮತ್ತು ಬೆಂಗಳೂರನ್ನು ಸುರಕ್ಷಿತ ತಾಣವಾಗಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಘಟನೆ ನಡೆದ ಸ್ಥಳಕ್ಕೆ ಹೋಗಲು 9 ನಿಮಿಷಗಳ ಕರಿಷ್ಠ ಕಾಲಮಿತಿ ತೆಗೆದುಕೊಳ್ಳಲಾಗುತ್ತಿತ್ತು. ಈಗ ಹೊಸದಾಗಿ ಮತ್ತಷ್ಟು ಕ್ರಮಗಳನ್ನು ಕೈಗೊಂಡಿರುವುದರಿಂದ 7 ನಿಮಿಷಗಳ ಒಳಗಾಗಿಯೇ ಪೊಲೀಸರು ಸ್ಥಳಕ್ಕೆ ಹೋಗುತ್ತಾರೆ. ಇದಕ್ಕಾಗಿ ದುರಸ್ಥಿಯಲ್ಲಿದ ಹೊಯ್ಸಳದ ವಾಹನಗಳನ್ನು ರಾತ್ರೋರಾತ್ರಿ ರಿಪೇರಿ ಮಾಡಿಸಲಾಗಿದೆ. ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

ಗಸ್ತಿನಲ್ಲಿದ್ದ ಸಿಬ್ಬಂದಿಗಳನ್ನು ಹೆಚ್ಚಿಸಲಾಗಿದೆ. ಮಹಿಳೆಯರಿಗೆ ತಿಳುವಳಿಕೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ರಾತ್ರಿ ವೇಳೆಯೂ ಕೆಲಸ ಮಾಡುತ್ತಾರೆ. ಅವರ ಪ್ರಯಾಣ ಸುರಕ್ಷಿತವಾಗಿರಬೇಕು ಎಂಬ ಕಾರಣಕ್ಕಾಗಿ ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಖಾಸಗಿ ಟ್ಯಾಕ್ಸಿ ಸರ್ವೀಸ್‍ಗಳಿಗೆ ಸೂಕ್ತ ಸೂಚನೆ ನೀಡಿದ್ದೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕೂಡ ಈ ನಿಟ್ಟಿನಲ್ಲಿ ಬಹಳಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.

# ಹಲೋ ನೈಬರ್:
ಅಪರಾಧ ಕೃತ್ಯಗಳನ್ನು ಕಡಿಮೆ ಮಾಡಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ. ಹಾಗೆಯೇ ನೆರೆ-ಹೊರೆಯವರು ಪರಸ್ಪರ ಸಂಪರ್ಕದಲ್ಲಿರುವುದು ಕೂಡ ಮುಖ್ಯ, ಬೆಂಗಳೂರಿನ ಬಹಳಷ್ಟು ಅಪಾರ್ಟ್‍ಮೆಂಟ್‍ಗಳಲ್ಲಿ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂಬುದೇ ತಿಳಿಯುವುದಿಲ್ಲ. ಹೀಗಾಗಿ ಪೊಲೀಸರು ಹಲೋ ನೈಬರ್ ಎಂಬ ಹೊಸ ಕಾರ್ಯಕ್ರಮವನ್ನು ರೂಪಿಸಿದ್ದಾರೆ.  ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ನೆರೆ-ಹೊರೆಯವರನ್ನು ಪರಸ್ಪರ ಪರಿಚಯಿಸಲಾಗುತ್ತದೆ. ಸಾರ್ವಜನಿಕರಿಗೆ ಪೊಲೀಸ್ ಠಾಣೆಗಳ ಹೆಸರು, ಗಸ್ತು ಸಿಬ್ಬಂದಿಗಳ ವಿವರಗಳನ್ನು ಒದಗಿಸಲಾಗುತ್ತದೆ ಎಂದರು.

Facebook Comments

Sri Raghav

Admin