ನಿದ್ದೆಗೆಟ್ಟು ಬೆಂಗಳೂರು ಕಾದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.1- ಸಾಂಕ್ರಾಮಿಕ ಕೊರೊನಾ ಸೋಂಕಿನ ಆತಂಕದ ನಡುವೆಯೂ ನಡೆದ ಹೊಸ ವರ್ಷಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿ 24 ಗಂಟೆಗಳ ಕಾಲ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡಿದ ಪೊಲೀಸರ ಕಾರ್ಯಕ್ಷಮತೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರತಿ ವರ್ಷ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅಪಘಾತಗಳು, ಕೊಲೆ ಸಾಮಾನ್ಯವಾಗಿತ್ತು.

ಈ ಹಿಂದೆ ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷಾಚರಣೆಯ ವೇಳೆ ಹೆಣ್ಣುಮಕ್ಕಳಿಗೆ ಪುಂಡರು ಕಿರಿಕುಳ ನೀಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿ ಬೆಂಗಳೂರಿನಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ ಎಂಬ ಕೂಗೆದ್ದಿತ್ತು. ಈ ಬಾರಿ ಭದ್ರತೆಯ ಜೊತೆಗೆ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಪೊಲೀಸರಿಗೆ ಭಾರೀ ಸವಾಲಾಗಿತ್ತು. ಅದಕ್ಕಾಗಿ ಪೊಲೀಸರು ಭದ್ರತೆಯ ಭಾರೀ ತಾಲೀಮನ್ನು ನಡೆಸಿದ್ದರು.

ನಗರ ಪೊಲೀಸ್ ಆಯಕ್ತ ಕಮಲ್ ಪಂತ್ ಅವರು ತಮ್ಮ ಸಹೋದ್ಯೋಗಿಗಳನ್ನು ಕಾಲಕಾಲಕ್ಕೆ ಎಚ್ಚರಿಸುವ ಜೊತೆ ನಿನ್ನೆ ಮಧ್ಯಾಹ್ನ 12 ಗಂಟೆಯಿಂದಲೇ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಹೊಸ ವರ್ಷಾಚರಣೆಯ ಕೇಂದ್ರ ಭಾಗ ಎಂದು ಪರಿಗಣಿಸಲಾಗಿರುವ ಎಂಜಿ ರಸ್ತೆ ಹಾಗೂ ಸುತ್ತಮುತ್ತಾ ಸಂಚಾರ ಮತ್ತು ವಾಹನ ನಿಲುಗಡೆಯನ್ನು ನಿಷೇಧಿಸಿದ್ದರು. ಪ್ರತಿವರ್ಷದಂತೆ ನಗರದಾದ್ಯಂತ ಎಲ್ಲಾ ಮೇಲು ಸೇತುವೆಗಳ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಿದ್ದರು.

ಪ್ರಮುಖವಾಗಿ ಹೋಟೆಲ್, ಪಬ್, ರೆಸ್ಟೋರೆಂಟ್, ಡ್ಯಾನ್ಸ್ ಬಾರ್‍ಗಳಲ್ಲಿ ಹೊಸ ವರ್ಷಾ ಚರಣೆಗೆ ನಿರ್ದಿಷ್ಠವಾದ ಮಾರ್ಗಸೂಚಿಗಳನ್ನು ನೀಡಲಾಯಿತು. ಹೊಸ ವರ್ಷಾಚರಣೆ ನೆಪದಲ್ಲಿ ಜನ ಜಂಗುಳಿ ಸೇರಿದರೆ ಕೊರೊನಾ ಹರಡುವ ಆತಂಕವಿತ್ತು. ಹಾಗಾಗಿ ಒಂದು ದಿನದ ಆಚರಣೆಗೆ ಮಹಾಮಾರಿ ಕೊರೊನಾ ಮೈ ಮೇಲೆ ಎಳೆದುಕೊಳ್ಳಬಾರದೆಂಬ ಎಚ್ಚರಿಕೆ ಜನರಲ್ಲೂ ಇತ್ತು. ಅದಕ್ಕೆ ಅನುಗುಣವಾಗಿ ಪೊಲೀಸರು ಸರ್ಕಾರದ ಮಾರ್ಗದರ್ಶನದ ಮೇರೆ ವ್ಯಾಪಕ ಬಿಗಿ ನಿಯಮಗಳನ್ನು ಜಾರಿಗೆ ತಂದಿದ್ದರು.

ಪ್ರತಿಯೊಂದು ಹೊಟೇಲ್‍ಗೂ ಪೊಲೀಸರು ಭೇಟಿ ನೀಡಿ, ಮಾರ್ಗಸೂಚಿಗಳ ಬಗ್ಗೆ ಅರಿವು ಮೂಡಿಸಿದ್ದರಲ್ಲದೆ ನಿಯಮ ಮೀರಿದರೆ ಬಿಗಿ ಕ್ರಮ ಜರುಗಿಸುತ್ತೇವೆ. ಮಫ್ತಿಯಲ್ಲಿ ಪೊಲೀಸ್ ಸಿಬ್ಬಂದಿ ನಿಮ್ಮ ಹೊಟೇಲ್ ಬಳಿ ಕಾವಲಿಗೆ ಇರುತ್ತಾರೆ ಎಂಬ ಎಚ್ಚರಿಕೆ ನೀಡಲಾಗಿತ್ತು. ಪೊಲೀಸರು ಮರೆಯಲ್ಲಿ ಅಡಗಿ ನಿಂತು ಕುಡಿದು ವಾಹನ ಚಲಾಯಿಸುವವರನ್ನು ಹಿಡಿದು ದಂಡ ವಿಧಿಸುವುದು ರೂಢಿಯಲ್ಲಿರುವ ಪದ್ಧತಿಯನ್ನು ಬಿಟ್ಟು, ನಿನ್ನೆ ಬೆಂಗಳೂರಿನಾದ್ಯಂತ ಎಲ್ಲೆಡೆ ಪೊಲೀಸರು ರಸ್ತೆಯಲ್ಲಿ ಮುಚ್ಚುಮರೆಯಿಲ್ಲದೆ ನಿಂತು ಜಾಗೃತಿ ಮೂಡಿಸಿದರು.

ನಿಯಮ ಮೀರಿ ವರ್ತಿಸುವವರಿಗೆ ಮತ್ತು ಕುಡಿದು ವಾಹನ ಚಲಾಯಿಸುವವರಿಗೆ ಇದು ಎಚ್ಚರಿಕೆಯ ಗಂಟೆಯಾಗಿತ್ತು. ಇನ್ನು ರಾತ್ರಿಯಿಡಿ ನಗರದಾದ್ಯಂತ ಕಾನ್ಸ್ ಟೆಬಲ್‍ನಿಂದ ಕಮಿಷನರ್ ಸೇರಿದಂತೆ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಗಸ್ತು ತಿರುಗಿದ್ದರು. ಮಧ್ಯ ರಾತ್ರಿ 2 ಗಂಟೆಯಾದರೂ ಪೊಲೀಸರು ಕರ್ತವ್ಯ ನಿರ್ವಹಿಸಿದ್ದರು. ಹೀಗಾಗಿ ಎಲ್ಲಿಯೂ ಸಣ್ಣ ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ.

ಪೊಲೀಸರ ಕಟ್ಟೆಚ್ಚರದಿಂದಾಗಿ ಹೊಸ ವರ್ಷಾಚರಣೆ ಸದ್ದುಗದ್ದಲ ಇಲ್ಲದೆ ಶಾಂತಿಯುತ ವಾಗಿ ನಡೆದಿದೆ. ಗಲಾಟೆ, ಗದ್ದಲಗಳಿಲ್ಲದೆ ನೆಮ್ಮದಿಯ ಆಚರಣೆಯಾಗಿದೆ. ಪಟಾಕಿ ಸಿಡಿತ, ನೆರೆ ಹೊರೆಯ ನೆಮ್ಮದಿ ಹಾಳು ಮಾಡುವ ಡಿಜೆ ಸದ್ದು ಕ್ಷೀಣಿಸಿದೆ. ಕೊರೊನಾ ಹರಡುವ ಆತಂಕವೂ ನಿವಾರಣೆಯಾಗಿದೆ. ಹಗಲು ರಾತ್ರಿ ಎನ್ನದೆ ವಿಶ್ರಾಂತಿ ಮರೆತು ನಗರದ ನೆಮ್ಮದಿಗಾಗಿ ದುಡಿದ ಪೊಲೀಸರ ಶ್ರಮ ಭಾರೀ ಮೆಚ್ಚುಗೆಗೆ ಕಾರಣವಾಗಿದೆ.

Facebook Comments