ಬಾಲಕನನ್ನು ಅಪಹರಿಸಿ 2 ಕೋಟಿಗೆ ಬೇಡಿಕೆಯಿಟ್ಟದ್ದ ಅಪಹರಣಕಾರರು ಅಂದರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.29- ಬಟ್ಟೆ ವ್ಯಾಪಾರಿಯ 11 ವರ್ಷದ ಬಾಲಕನನ್ನು ಅಪಹರಿಸಿ 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಐದು ಮಂದಿ ಅಪಹರಣಕಾರರನ್ನು ಬಂಸುವಲ್ಲಿ ಪೂರ್ವ ವಿಭಾಗದ ಪೊಲೀಸರು ಯಶಸ್ವಿಯಾಗಿ ದ್ದಾರೆ. ಅಪಹರಣಕಾರರ ಪೈಕಿ ಪ್ರಮುಖ ಆರೋಪಿ ಮಹಮ್ಮದ್ ಝೈನ್ ಎಂಬಾತ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆರೋಪಿಗಳು ಬಾಲಕನನ್ನು ಅಪಹರಿಸಿದ 16 ಗಂಟೆಗಳಲ್ಲೇ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿಸಿ ಪೋಷಕರ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತಿನಗರ ನಿವಾಸಿ, ಬಟ್ಟೆ ವ್ಯಾಪಾರಿಯ 11 ವರ್ಷದ ಪುತ್ರ ಆಗಸ್ಟ್ 27ರಂದು ಮನೆ ಮುಂದೆ ಆಟವಾಡುತ್ತಿದ್ದಾಗ ಅಪಹರಣಕಾರರು ಅಪಹರಿಸಿ ಪರಾರಿಯಾಗಿದ್ದರು.

ಹೊರಗೆ ಹೋಗಿದ್ದ ದಂಪತಿ ಮನೆಗೆ ಬಂದು ನೋಡಿದಾಗ 11 ವರ್ಷದ ಮಗ ಮನೆಯಲ್ಲಿರಲಿಲ್ಲ. ತಕ್ಷಣ ಎಲ್ಲ ಕಡೆ ಹುಡುಕಿ ಸಿಗದಿದ್ದಾಗ ಭಾರತಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೂರ್ವ ವಿಭಾಗದ ಪೊಲೀಸರು ಡಿಸಿಪಿ ಶರಣಪ್ಪ ಅವರ ಮಾರ್ಗದರ್ಶನದಲ್ಲಿ ಪುಲಕೇಶಿನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ತಬಾರಕ್ ಫಾತಿಮಾ ಅವರ ನೇತೃತ್ವದಲ್ಲಿ ಪುಲಕೇಶಿನಗರ ಇನ್ಸ್‍ಪೆಕ್ಟರ್ ಸಿರಾಜುದ್ದೀನ್, ಭಾರತಿನಗರ ಠಾಣೆ ಇನ್ಸ್‍ಪೆಕ್ಟರ್ ಆನಂದ್‍ನಾಯಕ್, ಹಲಸೂರು ಠಾಣೆ ಇನ್ಸ್‍ಪೆಕ್ಟರ್ ಶಿವಪ್ರಸಾದ್ ಮತ್ತು ರಾಮಮೂರ್ತಿನಗರ ಠಾಣೆ ಇನ್ಸ್‍ಪೆಕ್ಟರ್ ಸತೀಶ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ಅಪಹರಣಕ್ಕೊಳಗಾದ ಮಗು ಮತ್ತು ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿತ್ತು.

ಒಂದು ತಂಡವು ಸಿಸಿಟಿವಿ ಪರಿಶೀಲಿಸಿ ಕಾಲ್ ಡೀಟೇಲ್ಸ್ ಕಲೆ ಹಾಕಿದರೆ, ಮತ್ತೊಂದು ತಂಡವು ಆರೋಪಿಗಳ ಪೂರ್ವಾಪರಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ತಾಂತ್ರಿಕ ಮತ್ತು ಗ್ರೌಂಡ್ ವರ್ಕ್ ಮೂಲಕ ವಿವರ ಪಡೆದಿದ್ದರೆ, ಇನ್ನೊಂದು ತಂಡ ಕೃತ್ಯ ನಡೆದ ಸ್ಥಳದಲ್ಲಿ ಮಾಹಿತಿ ಕಲೆ ಹಾಕಿತ್ತು.

ಆರೋಪಿಗಳು ಮಗುವನ್ನು ಅಪಹರಿಸಿದ ನಂತರ ಅಂದು ಮಧ್ಯರಾತ್ರಿ 1 ಗಂಟೆ ಸುಮಾರಿನಲ್ಲಿ ಬಾಲಕನ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗುವನ್ನು ಅಪಹರಿಸಿದ್ದು, 2 ಕೋಟಿ ಹಣ ಕೊಟ್ಟರೆ ಬಿಡುವುದಾಗಿ ಹಾಗೂ ಈ ವಿಚಾರವನ್ನು ಪೊಲೀಸರಿಗೆ, ಇನ್ನಿತರರಿಗೆ ತಿಳಿಸಿದರೆ ಮಗು ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು.

ಬಟ್ಟೆ ವ್ಯಾಪಾರಿ ಅಂಗಡಿಗೆ ಶಿವಾಜಿನಗರದ ನಿವಾಸಿಯಾದ, ಆರೋಪಿ ಮಹಮ್ಮದ್ ಝೈನ್ ಆಗಾಗ್ಗೆ ಹೋಗುತ್ತಿದ್ದ. ಇವರ ವ್ಯವಹಾರವನ್ನು ತಿಳಿದುಕೊಂಡು ಸ್ನೇಹಿತ ಆಸಿಂನೊಂದಿಗೆ ಸೇರಿ ಹೇಗಾದರೂ ಮಾಡಿ ವ್ಯಾಪಾರಿಯಿಂದ ಹಣ ಪಡೆಯಬೇಕೆಂದು ನಿರ್ಧರಿಸಿ ವ್ಯಾಪಾರಿಯ ಪೂರ್ವಾಪರಗಳ ಮಾಹಿತಿ ಕಲೆ ಹಾಕಿ ಇವರ ಎರಡನೆ ಮಗು 11 ವರ್ಷದ ಬಾಲಕನನ್ನು ಅಪಹರಿಸಿದರೆ ಹಣ ಸಿಗಬಹುದೆಂಬ ದುರುದ್ದೇಶದಿಂದ ಸ್ನೇಹಿತರೊಂದಿಗೆ ಸಂಚು ಹೂಡಿದ್ದನು.

ಈ ಬಾಲಕ ಗಾಳಿಪಟ ಬಿಡುವುದರಲ್ಲಿ ಆಸಕ್ತಿ ಹೊಂದಿದ್ದು, ಅದೇ ಆಸೆ ತೋರಿಸಿ ಮಗುವನ್ನು ಅಪಹರಿಸಲು ನಿರ್ಧರಿಸಿ ಆ.27ರಂದು ಮನೆಯಲ್ಲಿ ಪೋಷಕರು ಇಲ್ಲದಿರುವುದನ್ನು ಗಮನಿಸಿ ಬಾಲಕನಿಗೆ ಗಾಳಿಪಟ ಕೊಡಿಸುವುದಾಗಿ ಆಸೆ ತೋರಿಸಿ ಆರೋಪಿಯು ಕಾರಿನಲ್ಲಿ ಸ್ನೇಹಿತರೊಂದಿಗೆ ಕರೆದುಕೊಂಡು ಹೋಗಿದ್ದನು.

ಮಾರ್ಗಮಧ್ಯೆ ಬಾಲಕ ಕಿರುಚಿಕೊಳ್ಳಬಹುದೆಂಬ ಭಯದಲ್ಲಿ ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಹಾಕಿ ಅದನ್ನು ಕುಡಿಸಿ ತುಮಕೂರಿಗೆ ಕರೆದುಕೊಂಡು ಹೋಗಿ ವಿವಿಧೆಡೆ ಸುತ್ತಾಡಿದ್ದಾರೆ.

ಈ ಸಂದರ್ಭದಲ್ಲಿ ಬಾಲಕನ ಪೋಷಕರಿಗೆ ಹಲವಾರು ಬಾರಿ ಕರೆ ಮಾಡಿ 2 ಕೋಟಿ ಹಣ ನೀಡುವಂತೆ, ಇಲ್ಲವಾದರೆ ಮಗುವನ್ನು ಸಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ಈ ಎಲ್ಲ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದರು. ಮಗುವನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಆಸಿಂ ಮತ್ತಿತರರು ಬಾಡಿಗೆ ಸಿಮ್ ಬಳಸಿ ಮೊಬೈಲ್ ಕರೆ ಮಾಡುತ್ತಿದ್ದರು.

ಬಿಳಿ ಬಣ್ಣದ ಶಿಫ್ಟ್ ಕಾರಿನಲ್ಲಿ ಕೂರಿಸಿಕೊಂಡು ತುಮಕೂರಿನ ಸುತ್ತಮುತ್ತ ಸುತ್ತುತ್ತಿರುವುದು ಪೊಲೀಸರಿಗೆ ಲಭ್ಯವಾಗಿದೆ. ಪೊಲೀಸರ ತಂಡವು ಬಾಲಕನ ಪೋಷಕರ ರೀತಿಯಲ್ಲಿ ಆರೋಪಿಗಳಿಗೆ ಹಣ ಕೊಡುವ ನೆಪದಲ್ಲಿ ತುಮಕೂರಿಗೆ ಹೋಗಿದೆ.

ಪೋಷಕರ ಸಹಾಯದೊಂದಿಗೆ ಮಗುವನ್ನು ಹುಡುಕಾಡುವ ಸಮಯದಲ್ಲಿ ಕಾರಿನ ಹಿಂಬದಿ ಮಗು ಕುಳಿತಿರುವುದನ್ನು ಕಂಡು ಕಾರನ್ನು ತಡೆಯಲು ಹೋದಾಗ ಎಚ್ಚೆತ್ತುಕೊಂಡ ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಲು ಯತ್ನಿಸಿದ್ದಾರೆ.

ಪೊಲೀಸ್ ತಂಡವು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಸುಮಾರು 15ಕಿ.ಮೀ. ದೂರ ಬೆನ್ನಟ್ಟಿದಾಗ ಬಾಲಕನೊಂದಿಗೆ ತೆರಳುತ್ತಿದ್ದ ಕಾರು ತುಮಕೂರಿನ ಗೌತಮನಹಳ್ಳಿ ಬಳಿಯ ಗದ್ದೆಯಲ್ಲಿ ಅತಿ ವೇಗದಿಂದಾಗಿ ಕಾರು ಉರುಳಿ ಬಿದ್ದಿದೆ.

ತಕ್ಷಣ ಪೊಲೀಸ್ ತಂಡವು ಆರೋಪಿಗಳ ಬಳಿ ಒತ್ತೆಯಾಳಾಗಿದ್ದ ಬಾಲಕನನ್ನು ಸುರಕ್ಷಿತವಾಗಿ ರಕ್ಷಿಸಿ ಆರೋಪಿಗಳಾದ ಫಾಹೀಂ, ಮುಜಾಮಿಲ್, ಪೈಜಾನ್, ಮಹಮ್ಮದ್ ಷಾಹೀದ್ ಮತ್ತು ಖಲೀಲ್‍ನನ್ನು ಬಂಸಿದ್ದಾರೆ.

ಪ್ರಮುಖ ಆರೋಪಿ ಮಹಮ್ಮದ್ ಝೈನ್ ಹಾಗೂ ಇನ್ನಿತರ ಆರೋಪಿಗಳ ಪತ್ತೆಗೆ ಶೋಧ ಮುಂದುವರಿಸಿದ್ದ ತಂಡಕ್ಕೆ ಆರೋಪಿಗಳು ಇಂದು ಮುಂಜಾನೆ 3.30ರ ಸುಮಾರಿನಲ್ಲಿ ಶಾಂಪುರ ಮುಖ್ಯರಸ್ತೆಯಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ತಕ್ಷಣ ಭಾರತಿನಗರ ಠಾಣೆ ಇನ್ಸ್‍ಪೆಕ್ಟರ್ ಆನಂದ ನಾಯ್ಕ್, ಸಿಬ್ಬಂದಿ ರಾಜು ಉಜ್ಜನಗೌಡರ್ ಮತ್ತಿತರ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ಆರೋಪಿ ಪೊಲೀಸರನ್ನು ಕಂಡು ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ತಕ್ಷಣ ಇನ್ಸ್‍ಪೆಕ್ಟರ್ ಆನಂದ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ.

ಪೊಲೀಸರ ಮಾತನ್ನು ಲೆಕ್ಕಿಸದೆ ಕಾನ್ಸ್‍ಟೆಬಲ್ ರಾಜು ಉಜ್ಜನಗೌಡರ್ ಅವರ ಮೇಲೆ ಹಲ್ಲೆ ಮಾಡಿದಾಗ ಇನ್ಸ್‍ಪೆಕ್ಟರ್ ಹಾರಿಸಿದ ಗುಂಡು ಆರೋಪಿಯ ಬಲಗಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.

ತಕ್ಷಣ ಪೊಲೀಸರು ಈತನನ್ನು ಸುತ್ತುವರಿದು ಬಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೂರ್ವ ವಿಭಾಗದ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಸಂತಸ: ಅಪಹರಣಕಾರರಿಂದ ಮಗನನ್ನು ಸುರಕ್ಷಿತವಾಗಿ ರಕ್ಷಿಸಿರುವುದಕ್ಕೆ ಬಟ್ಟೆ ವ್ಯಾಪಾರಿ ಕುಟುಂಬ ಸಂತಸ ವ್ಯಕ್ತಪಡಿಸಿದೆ.

Facebook Comments

Sri Raghav

Admin