ಅಂತಾರಾಜ್ಯ ಡ್ರಗ್ಸ್ ಪೆಡ್ಲರ್’ಗಳ ಬಂಧನ, 10 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.17- ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಅಂತಾರಾಜ್ಯ ಡ್ರಗ್ಸ್ ಪೆಡ್ಲರ್‍ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ವಾಹನಗಳು ಸೇರಿದಂತೆ 10 ಲಕ್ಷ ರೂ. ಬೆಲೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಲತಃ ಕೇರಳದವರಾದ ಮಣಿಪಾಲ್ ಕೌಂಟಿ ಕ್ಲಬ್ ರೋಡ್ ವಾಸಿ ಶಾಕೀರ್ ವಿ.ವಿ (32) , ನಜೀರ್.ಟಿ.ಸಿ(30), ಮಂಗಮ್ಮನ ಪಾಳ್ಯ ವಾಸಿ ಎಂ.ಮೊಹಮದ್ ಜಿಯಾದ್ (26) ಬಂಧಿತ ಆರೋಪಿಗಳು.ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಪಾಲ್ ಕೌಂಟಿ ಕ್ಲಬ್ ರೋಡ್ ಮನೆಯೊಂದರಲ್ಲಿ ಕೇರಳ ಮೂಲದ ಮೂವರು ಅಂತರಾಜ್ಯ ಡ್ರಗ್ ಪೆಡ್ಲರ್‍ಗಳು ಹ್ಯಾಶಿಶ್, ಗಾಂಜಾ ಎಂಡಿಎಂಎಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಸಜ್ಜಾಗಿದ್ದಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದರು.

ಬಂಧಿತರಿಂದ 1 ಕೆಜಿ 125 ಗ್ರಾಂ ಸೆಮಿ ಸಾಲಿಡ್ ಹ್ಯಾಶಿಶ್ ಆಯಿಲ್, 2 ಕೆ.ಜಿ 200 ಗ್ರಾಂ ತೂಕದ ಗಾಂಜಾ, 12 ಗ್ರಾಂ ಎಂಡಿಎಂಎ, 3 ಮೊಬೈಲ್ ಫೋನ್‍ಗಳು , ಒಂದು ನ್ಯಾನೋ ಕಾರು, ಎರಡು ದ್ವಿಚಕ್ರ ವಾಹನಗಳು, ಒಂದು ತೂಕದ ಯಂತ್ರ ಸೇರಿದಂತೆ ಸುಮಾರು 10 ಲಕ್ಷ ಬೆಲೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಆಗಾಗ ಆಂಧ್ರಪ್ರದೇಶದ ವೈಜಾಕ್‍ಗೆ ಹೋಗಿ ಅಲ್ಲಿ ಡ್ಲಗ್ ಪೆಡ್ಲರ್‍ಗಳನ್ನು ಸಂಪರ್ಕಿಸಿ ಗಾಂಜಾ ಹ್ಯಾಶಿಶ್ ಮತ್ತಿತರ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಬೆಂಗಳೂರಿಗೆ ತಂದು ಕಾಲೇಜು ವಿದ್ಯಾರ್ಥಿಗಳು, ಪರಿಚಯಸ್ಥರು ಮತ್ತಿತರರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದುದು ವಿಚಾರಣೆ ವೇಳೆ ಗೊತ್ತಾಗಿದೆ.

ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಈ ಆರೋಪಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದವರ ಶೋಧ ಕಾರ್ಯ ಮುಂದುವರೆದಿದೆ. ಉಪ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಕುಲದೀಪ್ ಕುಮಾರ್ ಆರ್.ಜೈನ್ ಮಾರ್ಗದರ್ಶನದಲ್ಲಿ ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಡಾ.ಎಚ್.ಎನ್.ವೆಂಕಟೇಶ
ಪ್ರಸನ್ನ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin