ದಂಡ ಪಾವತಿಸಿ ವಾಹನ ಪಡೆದುಕೊಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 1- ಲಾಕ್‍ಡೌನ್ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮಗಳನ್ನು ಉಲ್ಲಂಘಿಸಿ ಕೆಲವು ವಾಹನ ಸವಾರರು ಅನಗತ್ಯವಾಗಿ ಓಡಾಡುತ್ತಿದ್ದುದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ವಶಪಡಿಸಿಕೊಂಡಿರುವ ವಾಹನಗಳನ್ನು ಇಂದಿನಿಂದ ಹಿಂತಿರುಗಿಸಲಾಗುತ್ತಿದ್ದು, ಕೆಲವು ದಾಖಲಾತಿಗಳನ್ನು ಹಾಜರುಪಡಿಸಿ ಪಡೆದುಕೊಳ್ಳುವಂತೆ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಬಿ.ಆರ್.ರವಿಕಾಂತೇಗೌಡ ಅವರು ಸೂಚಿಸಿದ್ದಾರೆ.

ವಶಪಡಿಸಿಕೊಳ್ಳಲಾದ ವಾಹನಗಳನ್ನು ಮಾಲೀಕರಿಗೆ ದಂಡ ಪಾವತಿಸಿಕೊಂಡು ಬಿಡುವಂತೆ ಹೈಕೋರ್ಟ್ ಸೂಚಿಸಿದ್ದು, ದ್ವಿಚಕ್ರ ವಾಹನಗಳಿಗೆ ತಲಾ 500ರೂ. ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ತಲಾ 1000ರೂ. ದಂಡ ಪಾವತಿಸಲು ಆದೇಶಿಸಿದೆ.

ಈ ಹಿನ್ನೆಲೆಯಲ್ಲಿ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿರುವ ವಾಹನಗಳನ್ನು ಬೆಂಗಳೂರು ಒನ್‍ನಲ್ಲಿ ಪಾವತಿಸಿರುವ ದಂಡ ಮೊತ್ತದ ರಸೀದಿ, ವಾಹನದ ಮೂಲ ಆರ್‍ಸಿ (ನೋಂದಣಿ ಪತ್ರ), ವಾಹನ ಚಾಲನಾ ಅನುಜ್ಞಾ ಪತ್ರ (ಡಿಎಲ್) ಆಧಾರ್ ಕಾರ್ಡ್ ಹಾಗೂ ಮತ್ತೆ ನಿಯಮ ಉಲ್ಲಂಗಿಸುವುದಿಲ್ಲವೆಂದು ಬರೆದುಕೊಟ್ಟ ಮುಚ್ಚಳಿಕೆ ಪತ್ರ ಹಾಜರುಪಡಿಸಿ ಪಡೆಯಬಹುದಾಗಿದೆ.

ಅನಗತ್ಯ ಹಾಗೂ ಸಂಚಾರ ನಿಯಮ ಉಲ್ಲಂಘನೆಗಳ ಬಾಕಿ ಇರುವ ಎಲ್ಲ ಮೊತ್ತವನ್ನು ಪಾವತಿಸಿದ ನಂತರವಷ್ಟೇ ವಾಹನವನ್ನು ಮಾಲೀಕರಿಗೆ ಒಪ್ಪಿಸಲಾಗುವುದು ಎಂದು ಅವರು ಸೂಚಿಸಿದ್ದಾರೆ. ಪ್ರತಿ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗೆ ದಂಡ ಪಾವತಿಸಲು ಅನುವಾಗುವಂತೆ ಸಂಚಾರ ವಿಭಾಗದ ಅಧಿಕಾರಿಯವರನ್ನು ಇದಕ್ಕಾಗಿಯೇ ನಿಯೋಜಿಸಲಾಗಿರುತ್ತದೆ.

ಸೂಚನೆ: ವಾಹನ ಮಾಲೀಕರು ಆನ್‍ಲೈನ್ ಮುಖಾಂತರವೂ ಸಹ ಸಂಚಾರ ವಿಭಾಗದ ದಂಡ ಪಾವತಿ ಮಾಡಬಹುದಾಗಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‍ಗಳನ್ನು ಬಳಸಿಯೂ ದಂಡ ಪಾವತಿಸಿ ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳನ್ನು ಮುಕ್ತಾಯಪಡಿಸಿಕೊಳ್ಳಬಹುದಾಗಿದೆ ಎಂದು ಅವರು ಸೂಚಿಸಿದ್ದಾರೆ.

Facebook Comments

Sri Raghav

Admin