ಬೆಂಗಳೂರು ನಗರ ಜಿಲ್ಲೆಯ ಕುಡಿಯುವ ನೀರು-ರಸ್ತೆ ಅಭಿವೃದ್ಧಿಗೆ 90 ಕೋಟಿ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.13- ಕೊರೊನಾ ತಂದೊಡ್ಡಿರುವ ಆರ್ಥಿಕ ಸಂಕಷ್ಟದಲ್ಲಿಯೂ ಜಿಲ್ಲಾಯಲ್ಲಿ ಕುಡಿಯುವ ನೀರು ಪೂರೈಕೆಗೆ 25 ಕೋಟಿ ರೂ. ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ 65 ಕೋಟಿ ರೂ.ಗಳನ್ನು ಮೂರ್ನಾಲ್ಕು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮಹಾದ್ವಾರ ಹಾಗೂ ಸಂಪನ್ಮೂಲ ಕೇಂದ್ರ ಉದ್ಘಾಟಿಸಿದ ನಂತರ ಜಿಲ್ಲಾಯ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯತ್‍ಗೆ ಬಿಡುಗಡೆಯಾಗುರುವ ಒಟ್ಟು ಅನುದಾನದಲ್ಲಿ ಬಹುತೇಕ ಭಾಗ ಕಟ್ಟಡ ನಿರ್ಮಾಣ ಹಾಗೂ ವೇತನಕ್ಕಾಗಿಯೇ ವೆಚ್ಚವಾಗುತ್ತಿದ್ದು ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುದಾನ ಮೀಸಲಿರಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳ ಅನುಷ್ಟಾನಕ್ಕೆ ಆದ್ಯತೆ ನೀಡಬೇಕಾಗಿದೆ. 2215 ಯೋಜನೆಗಳ ಸುಮಾರು ಯೋಜನೆಗಳು ಮುಕ್ತಾಯವಾಗಿಲ್ಲ. ಕುಡಿಯುವ ನೀರಿನ ಯೋಜನೆಗೆ ಬಹುತೇಕ ಅನುದಾನ ಬಿಡುಗಡೆಮಾಡಲಾಗಿದ್ದರೂ, ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವಂತಹ ಸುಮಾರು 736 ಟ್ಯಾಂಕುಗಳ ಪೈಕಿ 69 ಟ್ಯಾಂಕುಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸಭೆಗೆ ಗೈರುಹಾಜರಾದ ಕಾರಣ ಅವರನ್ನು ಇಂದೇ ಅಮಾನತು ಮಾಡಲು ಮುಖ್ಯಮಂತ್ರಿಗಳು ಜಿಪಂ ಸಿಇಒ ಅವರಿಗೆ ಸೂಚಿಸಿದರು. ಕಂದಾಯ ಸಚಿವ ಆರ್. ಅಶೋಕ್ ಸಾಮಾಜಿಕ ಭದ್ರತೆ ಯೋಜನೆಗಳ ಬಗ್ಗೆ ಮಾತನಾಡಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್, ಜಿಪಂ ಅಧ್ಯಕ್ಷ ಜಿ.ಮರಿಸ್ವಾಮಿ, ಸದಸ್ಯ ಮುನಿರಾಜು , ಉಪಾಧ್ಯಕ್ಷೆ ಪಾರ್ವತಿ ಚಂದ್ರಪ್ಪ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್ ಮಂಜುಳಾ, ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಮತ್ತಿತರರಿದ್ದರು.

Facebook Comments