ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕನ್ನಡ ಚಿತ್ರರಂಗದ ಹಾಸ್ಯನಟ ಬುಲೆಟ್ ಪ್ರಕಾಶ್ ಬದುಕಿನ ಪಯಣಕ್ಕೆ ಕೊನೆ ಹಾಡಿದ್ದಾರೆ. ಕಳೆದ ಎರಡು ದಶಕಗಳಿಂದ ಕನ್ನಡದ ಮೇರು ಹಾಸ್ಯನಟರಾಗಿದ್ದ ಪ್ರಕಾಶ್ ಸೋಮವಾರ ನಿಧನರಾಗಿದ್ದಾರೆ. 44 ವರ್ಷದ ನಟ ಪ್ರಕಾಶ್​ ತಾಯಿ, ಪತ್ನಿ, ಮಗಳು ಹಾಗೂ ಮಗನನ್ನು ಅಗಲಿದ್ದಾರೆ.  ಕಿಡ್ನಿ ಮತ್ತು ಲಿವರ್‍ ಸಮಸ್ಯೆಯಿಂದ ಬಳಲುತ್ತಿದ್ದ ಸ್ಥೂಲಕಾಯದ ಬುಲೆಟ್ ಪ್ರಕಾಶ್ ಕಳೆದ ಮೂರು ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.

ಬುಲೆಟ್ ಪ್ರಕಾಶ್ ಆರೋಗ್ಯ ಮದ್ಯಾಹ್ನದ ವೇಳೆಗೆ ಗಂಭೀರವಾಗಿತ್ತು, ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಸಿಕಿತ್ಸೆಗೆ ಸ್ಪಂದಿಸದ ಪ್ರಕಾಶ್ ಮೃತಪಟ್ಟಿದ್ದಾರೆ. ಅವರಿಗೆ ಡಯಾಲಿಸಿಸ್‌ ಮಾಡಲಾಗುತ್ತಿತ್ತು. ಆದರೆ, ಆರೋಗ್ಯ ತೀರಾ ಹದಗೆಟ್ಟ ಹಿನ್ನೆಲೆಯಲ್ಲಿ ವಾರದ ಹಿಂದೆ ಫೋರ್ಟಿಸ್‌ಗೆ ದಾಖಲು ಮಾಡಲಾಗಿತ್ತು. ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ತಜ್ಞ ವೈದ್ಯರ ತಂಡ ಚಿಕಿತ್ಸೆಯನ್ನ ನೀಡುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಲೆಟ್‌ ಪ್ರಕಾಶ್‌ ವಿಧಿವಶರಾಗಿದ್ದಾರೆ.

ಬುಲೆಟ್‌ ಪ್ರಕಾಶ್‌ ತಮ್ಮ ಹಾಸ್ಯ ನಟನೆಯಿಂದ ಕನ್ನಡಿಗರ ಮನೆ ಮಾತಾಗಿದ್ರು. 325ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಸಾಕಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದರು. ಬುಲೆಟ್‌ ಪ್ರಕಾಶ್‌ ಸ್ಕ್ರೀನ್‌ ಬಂದ ಅಂದ ಜನ ಹುಚ್ಚೆದ್ದು ನಗುತಿದ್ದರು. ಕನ್ನಡದ ಸ್ಟಾರ್‌ ನಟರ ಜೊತೆ ಸ್ಕ್ರೀನ್‌ ಶೇರ್ ಮಾಡಿಕೊಂಡ ಹಿರಿಮೆ ಬುಲೆಟ್‌ ಪ್ರಕಾಶ್‌ರದ್ದು. ಪುನೀತ್‌ ರಾಜ್‌ಕುಮಾರ್‌ ಜೊತೆ ಜಾಕಿ, ದರ್ಶನ್‌ ಜೊತೆ ಜಗ್ಗುದಾದ, ಕಲಾಸಿಪಾಳ್ಯ ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ನಟಿಸಿ ಕನ್ನಡ ಸಿನಿಪ್ರಿಯರ ಮನಗೆದ್ದಿದ್ದರು.

ಕೆಲವು ವರ್ಷಗಳ ಹಿಂದೆ ತೂಕ ಇಳಿಸಿಕೊಂಡಿದ್ದ ಬುಲೆಟ್ ಪ್ರಕಾಶ್ ಅಂದಿನಿಂದಲೂ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದರು. ಅದಾದ ಬಳಿಕ ಅವರ ಚಿತ್ರಗಳೂ ವಿರಳವಾಗಿದ್ದವು.  ಕಳೆದೊಂದು ತಿಂಗಳಿನಿಂದ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಒಂದು ತಿಂಗಳ ಹಿಂದೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಆಸ್ಕರ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಏ.4 ರಂದು ಕನ್ನಿಂಗ್‍ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕಿಡ್ನಿ ವೈಫಲ್ಯದ ಜೊತೆಗೆ ಕಾಲಿಗೆ ಗ್ಯಾಂಗ್ರಿನ್ ಕೂಡ ಆಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಕಾರಣ ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

ಎರಡು ವರ್ಷಗಳ ಹಿಂದೆ ತೂಕ ಇಳಿಸಿಕೊಳ್ಳಲು ಬುಲೆಟ್ ಪ್ರಕಾಶ್ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಶಸ್ತ್ರ ಚಿಕಿತ್ಸೆಯೇ ಅವರ ಜೀವಕ್ಕೆ ಮುಳ್ಳಾಯಿತೇ ಎಂಬ ಪ್ರಶ್ನೆ ಎದ್ದಿತ್ತು. ಅಲ್ಲದೆ ಶಸ್ತ್ರ ಚಿಕಿತ್ಸೆಯ ನಂತರ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿತ್ತು. ಹೀಗಾಗಿ ಹಾಸ್ಯನಟ ಮಾನಸಿಕವಾಗಿ ಬಹಳ ನೊಂದಿದ್ದ ವಿಚಾರ ಆಪ್ತ ಮೂಲಗಳಿಂದ ತಿಳಿದು ಬಂದಿತ್ತು.

ತಮ್ಮ ರಾಯಲ್ ಎನ್‍ಫೀಲ್ಡ್ ಬೈಕಿನಿಂದಾಗಿ ‘ಬುಲೆಟ್’ ಹೆಸರು ಬಂದಿತ್ತು. 2015ರಲ್ಲಿ ಬಿಜೆಪಿ ಪಕ್ಷವನ್ನು ಬುಲೆಟ್ ಪ್ರಕಾಶ್ ಸೇರಿದ್ದರು. ಕಳೆದ ಐದು ದಿನಗಳಿಂದ ಕನ್ನಿಂಗ್ ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ವೈದ್ಯ ಡಾ. ತೇಜಸ್ವಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. “ಗ್ಯಾಸ್ಟಿಕ್ ಸಮಸ್ಯೆಯ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೆ ಅವರಿಗೆ ಲಿವರ್ ಹಾಗೂ ಕಿಡ್ನಿ ಸಮಸ್ಯೆ ಕಾಣಿಸಿದ್ದು ವೆಂಟಿಲೇಟರ್ ಮೂಲಕ ಉಸಿರಾಟ ನಡೆಸಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿದೆ.

1976ರಲ್ಲಿ ಏ.2ರಂದು ಬೆಂಗಳೂರಿನ ಬಡ ಕುಟುಂಬದಲ್ಲಿ ಪ್ರಕಾಶ್​ ಅವರ ಜನನವಾಗಿತ್ತು. ಕಾಟನ್​ಪೇಟೆಯ ಗಲ್ಲಿಗಳಲ್ಲಿ ಆಡುತ್ತಾ ಬೆಳೆದ ಪ್ರಕಾಶ್​ 325ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.  ಈ ಹಿಂದೆ ದೇಹದ ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. 35 ಕೆ.ಜಿ. ತೂಕ ಸಹ ಇಳಿಸಿಕೊಂಡಿದ್ದರು.
ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ನಂತರ ಬುಲೆಟ್​ ಪ್ರಕಾಶ್​ ಅವರಿಗೆ ಸಿನಿಮಾಗಳಲ್ಲಿ ಅವಕಾಶ ತೀರಾ ಕಡಿಮೆಯಾಗಿತ್ತು. ಇದರಿಂದಾಗಿ ಪ್ರಕಾಶ್​ ಆರ್ಥಿಕವಾಗಿಯೂ ಸಂಕಷ್ಟದಲ್ಲಿದ್ದರು.

ಅನಾರೋಗ್ಯದ ಕಾರಣದಿಂದಾಗಿ ಫೋರ್ಟಿಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶಾಲಾ ದಿನಗಲ್ಲೇ ನೃತ್ಯ, ಮಿಮಿಕ್ರಿ ಹಾಗೂ ಏಕಪಾತ್ರಾಭಿನಯದಲ್ಲಿ ಎತ್ತಿದ ಕೈ…. ಆದರೆ ಓದಿನ ವಿಷಯಕ್ಕೆ ಬಂದರೆ ಮಾತ್ರ ಕೇಳುವಂತಿರಲಿಲ್ಲ.  ಆಗಲೇ ಜಗ್ಗೇಶ್​ ಅವರ ಮಿಮಿಕ್ರಿ ಮಾಡುತ್ತಿದ್ದ ಬುಲೆಟ್​ ಪ್ರಕಾಶ್​ 1991ರಲ್ಲೇ ರವಿಚಂದ್ರನ್​ ಅವರ ‘ಶಾಂತಿ ಕ್ರಾಂತಿ’ ಸಿನಿಮಾದ ‘ಹುಟ್ಟೋದ್ಯಾಕೆ ಸಾಯೋದ್ಯಾಕೆ…’ ಹಾಡಿನಲ್ಲಿ ನಟಿಸಿದ್ದರು.

ಇದು ಪ್ರಕಾಶ್​ ಬಾಲ ನಟನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದು. ಇದಾದ ನಂತರ ಮತ್ತೆ 1995ರಲ್ಲಿ ‘ಪುಟ್ಮಲ್ಲಿ’ ಸಿನಿಮಾದ ಮೂಲಕ ಮತ್ತೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು​. ಸಾಯಿಕುಮಾರ್ ಹಾಗೂ ಮಾಲಾಶ್ರೀ ನಟನೆಯ ಸಿನಿಮಾದಲ್ಲಿ ಬಣ್ಣ ಹಚ್ಚಲಿಲ್ಲವಾದರೂ ಈ ಚಿತ್ರತಂಡದೊಂದಿಗೆ ಕೆಲಸ ಮಾಡಿದ್ದರು ಪ್ರಕಾಶ್​.

ಅದಕ್ಕೂ ಮೊದಲು ಅವರು ಎನ್​ಜಿಎಫ್​ನಲ್ಲಿ 26 ರುಪಾಯಿ ಸಂಬಳಕ್ಕೆ ಕೆಲಸಕ್ಕೆ ಸೇರಿದ್ದರು. ಅದೂ ಸಹ ಜಲ್ಲಿ ಎತ್ತುವ ಕೆಲಸ. ಇದು ಅವರ ಜೀವನದಲ್ಲಿ ಮಾಡಿದ ಕಷ್ಟದ ಕೆಲಸ ಎಂದು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. 1999ರಲ್ಲಿ ತೆರೆಕಂಡ ನಿರ್ಮಾಪಕ ರಾಮು ಅವರ ‘ಎಕೆ 47’ ಸಿನಿಮಾದ ಮೂಲಕ ಫುಲ್​ ಟೈಮ್​ ನಟನಾಗಿ ಪ್ರಕಾಶ್​ ಪ್ರವೇಶವಾಗಿತ್ತು.

ಓಂ ಪ್ರಕಾಶ್​ ರಾವ್ ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಅವರ ಎದುರು ಪ್ರಕಾಶ್​ ನಟಿಸಿದ್ದರು. ಈ ಚಿತ್ರದಲ್ಲಿ ಶಿವಣ್ಣನನ್ನು ಕೆಟ್ಟದಾಗಿ ಬೈಯ್ಯುವ ದೃಶ್ಯದಲ್ಲಿ ನಟಿಸಿದ್ದಕ್ಕೆ ಶಿವಣ್ಣನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾ​ದ್ದರು. ಆದರೆ ‘ಯುವರಾಜ’ ಸಿನಿಮಾದ ನಂತರ ಶಿವಣ್ಣನ ಅಭಿಮಾನಿಗಳೇ ಪ್ರಕಾಶ್ ಅವರನ್ನು ಕೊಂಡಾಡುವಂತಾಯಿತು. ನಂತರ ‘ಪ್ರೀತ್ಸು ತಪ್ಪೇನಿಲ್ಲ’, ‘ಕಲಾಸಿಪಾಳ್ಯ’, ‘ಜಾಕಿ’, ‘ರಾಟೆ’, ‘ಏಕಾಂಗಿ’, ‘ಐರಾವತಾ’, ‘ಪುಂಗಿದಾಸ’, ‘ಅಹಂ ಪ್ರೇಮಾಸ್ಮಿ’, ‘ಸಾಹೇಬ’ ಹೀಗೆ 325ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಂಜಿಸಿದರು.

ನಟ ದರ್ಶನ್​ ಜೊತೆ ಸಹ ಪ್ರಕಾಶ್​ ಒಡನಾಡ ತುಂಬಾ ಚೆನ್ನಾಗಿತ್ತು. ಡಿಬಾಸ್​ ಜೊತೆ ‘ಭಗವಾನ್​’, ‘ದ್ರುವ’, ‘ಬಾಸ್​’, ‘ಶೌರ್ಯ’, ‘ಐರಾವತಾ’, ‘ಕಲಾಸಿಪಾಳ್ಯ’, ‘ದತ್ತ’, ‘ನಿನಗೋಸ್ಕ’ರಸೇರಿದಂತೆ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಇವರಿಬ್ಬರ ನಡುವೆ ಕಾರಣಾಂತರಗಳಿಂದಾಗಿ ಸ್ನೇಹ ಮುರಿದು ಬಿತ್ತು ಅನ್ನೋ ಮಾತುಗಳು ಸ್ಯಾಂಡಲ್​ವುಡ್​ನಲ್ಲಿ ಹರಿದಾಡಿತ್ತು. ನಂತರ ದರ್ಶನ್​ ಚಿತ್ರಗಳಲ್ಲ ಬುಲೆಟ್​ ಕಾಣಿಸಿಕೊಳ್ಳುವುದು ಕಡಿಮೆಯಾಗಿತ್ತು

ಸುದೀಪ್​ ಜೊತೆ ಸಹ ‘ಪಾರ್ಥ’, ‘ಹುಚ್ಚ’, ‘ಬಚ್ಚನ್’​, ‘ಮಸ್ತ್​ ಮಜಾ ಮಾಡಿ’, ‘ನಲ್ಲ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ರವಿಚಂದ್ರನ್​ ಅವರೊಂದಿಗೆ 9 ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು ಪ್ರಕಾಶ್​. ದಪ್ಪಗಿದ್ದ ಕಾರಣಕ್ಕೆ ಆರೋಗ್ಯದಲ್ಲಿ ಏರುಪೇರಾಗತೊಡಗಿದ್ದ ಕಾರಣದಿಂದ ಪ್ರಕಾಶ್​ ದೇಹದ ತೂಕ ಇಳಿಸಿಕೊಳ್ಳುವ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು.

ಇದಾದ ನಂತರ ಅಂದರೆ 2016ರಿಂದ ಬುಲೆಟ್ ಪ್ರಕಾಶ್​ಗೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾಯಿತು. ಅದಕ್ಕೂ ಕಾರಣ ಇದೆ.  ಶಸ್ತ್ರ ಚಿಕಿತ್ಸೆ ನಂತರ ಪ್ರಕಾಶ್​ಗೆ ಅಭಿನಯಿಸೋಕೆ ಕಷ್ಟವಾಗುತ್ತಿದೆ.  ಡೈಲಾಗ್​ ನೆನಪಿಟ್ಟುಕೊಳ್ಳಲಾಗುತ್ತಿಲ್ಲ.. ಹೀಗೆಲ್ಲ ಕೆಲವರು ಅವರ ವಿರುದ್ಧ ಅಪಪ್ರಚಾರ ಮಾಡಿದ ಕಾರಣಕ್ಕೆ ಸಾಕಷ್ಟು ಅವಕಾಶಗಳು ಬುಲೆಟ್​ ಅವರ ಕೈ ತಪ್ಪಿತ್ತು ಎಂದು ಅವರೇ ಸಂದರ್ಶನವೊಂದರಲ್ಲಿ ಕಣ್ಣೀರಿಟ್ಟಿದ್ದರು.

2016 ರಿಂದ ಕನ್ನಡ ಚಿತ್ರರಂಗದಲ್ಲಿರುವವರೇ ನನ್ನನ್ನು ತುಳಿದರು. ಇದರಿಂದಾಗಿ ನಾನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ಆದರೂ ಇದಕ್ಕಿಂತ ಕಷ್ಟಗಳನ್ನು ನೋಡಿರುವ ನಾನು ಮತ್ತೆ ಎದ್ದು ಬರುತ್ತೇನೆ ಎಂದು ಆತ್ಮವಿಶ್ವಾಸದಿಂದ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದರು. ತಮ್ಮ ಮಗ ರಕ್ಷಕ್​ ಸೇನನ್ನು ಬಣ್ಣದ ಲೋಕಕ್ಕೆ ಪರಿಚಯಿಸುವ ಪ್ರಯತ್ನದಲ್ಲಿದ್ದ ಪ್ರಕಾಶ್​ ಬಹಳ ಹಿಂದೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದರು. ಆದರೆ ಕಾರಣಾಂತರಗಳಿಂದ ಅದು ಅರ್ಧಕ್ಕೆ ನಿಂತಿತ್ತು.

Facebook Comments

Sri Raghav

Admin