ತಾಯಿ ಹಾಗೂ ಇಬ್ಬರು ಮಕ್ಕಳ ಆತ್ಮಹತ್ಯೆ, ಬೆಂಗಳೂರಲ್ಲೊಂದು ಹೃದಯ ವಿದ್ರಾವಕ ಘಟನೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.12- ಕೌಟುಂಬಿಕ ಕಲಹದಿಂದ ನೊಂದ ತಾಯಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀನಗರದ ಕಾಳಪ್ಪ ಬಡಾವಣೆ, ಕೇಂಬ್ರಿಡ್ಜ್ ಶಾಲೆ ಸಮೀಪದ ನಿವಾಸಿಯಾದ ರಾಜೇಶ್ವರಿ (40) ಹಾಗೂ ಪುತ್ರಿಯರಾದ ಮಾನಸ (17), ಭೂಮಿಕ (15) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಗಳು.

ಮೂಲತಃ ಮಂಡ್ಯದವರಾದ ರಾಜೇಶ್ವರಿ ಗೃಹಿಣಿಯಾಗಿದ್ದು, ಇವರ ಪತಿ ಸಿದ್ದಯ್ಯ ಕೆಇಬಿಯಲ್ಲಿ ವಾಚ್‍ಮೆನ್ ಕೆಲಸ ಮಾಡುತ್ತಿದ್ದು, ಪುತ್ರಿ ಮಾನಸ ಪ್ರಥಮ ಪಿಯುಸಿ ಹಾಗೂ ಭೂಮಿಕ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದರು.

ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಪದೇ ಪದೇ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಪತಿ ಸಿದ್ದಯ್ಯ ಪತ್ನಿಯೊಂದಿಗೆ ಜಗಳವಾಡಿಕೊಂಡು ಊರಿಗೆ ತೆರಳಿದ್ದರು. ನಿನ್ನೆ ಊರಿನಿಂದ ಪತ್ನಿಗೆ ದೂರವಾಣಿ ಕರೆ ಮಾಡಿದ್ದಾರೆ. ಫೋನ್ ತೆಗೆಯದ ಕಾರಣ ತನ್ನ ಸಂಬಂಧಿಕರಿಗೆ ಕರೆ ಮಾಡಿ ಮನೆಗೆ ಹೋಗಿ ನೋಡುವಂತೆ ತಿಳಿಸಿದ್ದಾರೆ.

ಸಂಬಂಧಿಕರು ಮನೆ ಬಳಿ ಹೋಗಿ ನೋಡಿದಾಗ ಬಾಗಿಲು ಹಾಕಿರುವುದನ್ನು ಗಮನಿಸಿ ಕಿಟಕಿ ಮೂಲಕ ನೋಡಿದಾಗ ಈ ಮೂವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

ಅಕ್ಕಪಕ್ಕದವರಿಗೆ ವಿಷಯ ತಿಳಿದು ಮನೆ ಬಳಿ ಜಮಾಯಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಹನುಮಂತನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin