ಉತ್ತಮ ಸಂಸದೀಯ ಪಟು ಗುರುತಿಸಲು ಸಮಿತಿ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ರಾಜ್ಯ ವಿಧಾನಸಭೆಯ ಸದಸ್ಯರೊಬ್ಬರಿಗೆ ಪ್ರತಿ ವರ್ಷ ಅತ್ಯುತ್ತಮ ಸಂಸದೀಯ ಪಟು ಅಥವಾ ಅತ್ಯುತ್ತಮ ಶಾಸಕ ಎಂಬ ಪ್ರಶಸ್ತಿ ನೀಡಲು ವಿಧಾನಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚನೆ ಮಾಡಲಾಗಿದೆ.  ಸಮಿತಿಯಲ್ಲಿ ಉಪಸಭಾಧ್ಯಕ್ಷರು, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು, ಸಭಾಧ್ಯಕ್ಷರು ನಾಮ ನಿರ್ದೇಶನ ಮಾಡುವ ಒಬ್ಬರು ಸದಸ್ಯರಾಗಿ ರುತ್ತಾರೆ.

ಸಮಿತಿಯ ಶಿಫಾರಸ್ಸಿನ ಮೇಲೆ ಪ್ರಶಸ್ತಿಗೆ ಆಯ್ಕೆಯಾದ ಶಾಸಕರ ಒಪ್ಪಿಗೆಯನ್ನು ಪಡೆಯಬೇಕು. ಒಬ್ಬ ಶಾಸಕರಿಗೆ ಜೀವಮಾನದಲ್ಲಿ ಒಮ್ಮೆ ಮಾತ್ರ ಪ್ರಶಸ್ತಿ ನೀಡಲಾಗುತ್ತದೆ. ಆದರೆ ಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಸಂಸದೀಯ ಪದಾಧಿಕಾರಿಗಳು, ಸಚಿವರು, ಸಂಸದೀಯ ಕಾರ್ಯದರ್ಶಿಗಳನ್ನು ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಪರಿಗಣಿಸುವುದಿಲ್ಲ.

ಪ್ರಶಸ್ತಿ ಸಭಾಧ್ಯಕ್ಷರ ಸಹಿಯುಳ್ಳ ವಿಧಾನಸೌಧದ ಕಟ್ಟಡದ ಮುದ್ರೆಯುಳ್ಳ ಬೆಳ್ಳಿ ಪದಕವನ್ನು ಒಳಗೊಂಡಿರುತ್ತದೆ ಎಂದು ವಿಧಾನಸಭೆ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.  ವಿಧಾನಸಭಾ ಸದಸ್ಯರು ಸಾರ್ವ ಜನಿಕ ಜೀವನದಲ್ಲಿ ಶಾಸಕರಾಗಿ ಮತಕ್ಷೇತ್ರಕ್ಕೆ ನೀಡಿರುವ ಕೊಡುಗೆ, ಕ್ಷೇತ್ರದಲ್ಲಿ ಗಳಿಸಿರುವ ಅನುಭವ, ಸದನದ ಚರ್ಚೆಗಳಲ್ಲಿ ತೋರಿಸುವ ಕೌಶಲ್ಯ, ಸಾರ್ವಜನಿಕ ಹಿತಾಸಕ್ತಿಗಳ ಬಗ್ಗೆ ಇರುವ ಆಸಕ್ತಿ, ಸದನದಲ್ಲಿ ಪ್ರಸ್ತಾಪಿಸುವ ವಿಷಯ ಮತ್ತು ಅದರ ಗಂಭೀರತೆ, ಸದನದಲ್ಲಿ ವಿಷಯಗಳನ್ನು ಪ್ರಸ್ತುತಪಡಿಸುವ ವಿಧಾನ, ಸದನಗಳ ಸಂಪ್ರದಾಯದ ಬಗ್ಗೆ ಅರಿವು ಮೊದಲಾದ ಅಂಶ ಗಳನ್ನು ಪ್ರಶಸ್ತಿ ಆಯ್ಕೆಗೆ ಪರಿಗಣಿ ಸಲು ಮಾರ್ಗಸೂಚಿಯಲ್ಲಿ ಉಲ್ಲೇಖಿ ಸಲಾಗಿದೆ.

ಶಾಸಕರು ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಹೊಂದಿರಬೇಕು. ಸದನದ ಒಳ-ಹೊರಗೆ ವಿಧಾನಸಭೆಯ ಕಾರ್ಯ ವಿಧಾನ ಹಾಗೂ ನಡವಳಿಕೆ ನಿಯಮಗಳ ಅರಿವು ಮತ್ತು ಪಾಲನೆ, ಸಭಾಧ್ಯಕ್ಷರು ನೀಡುವ ಸೂಚನೆಗಳನ್ನು ಅನುಸರಿಸುವ ಮತ್ತು ಗ್ರಹಿಸುವ ಸಾಮಥ್ರ್ಯ, ವಿಧಾನಮಂಡಲ ಮತ್ತು ವಿಧಾನಸಭೆಯ ಸಮಿತಿಗಳಲ್ಲಿ ಭಾಗವಹಿಸುವಿಕೆ, ಸದನದ ಒಳಗೆ ಮತ್ತು ಹೊರಗಿನ ನಡವಳಿಕೆ, ಸದನದಲ್ಲಿ ಹಾಜರಾತಿ, ಇತರೆ ಸದಸ್ಯರೊಂದಿಗಿನ ಸೌಹಾರ್ದಯುತ ಸಂಬಂಧ, ಸದನದಲ್ಲಿ ಕೇಳಲಾದ ಪ್ರಶ್ನೆಗಳ ಗುಣಮಟ್ಟ, ಪ್ರಸ್ತುತಪಡಿಸುವ ವಿಧಾನ, ಸದನದಲ್ಲಿ ಉಂಟಾಗುವ ಪ್ರತಿರೋಧ ಪರಿಸ್ಥಿತಿಗಳ ಕಾರ್ಯ ನಿರ್ವಹಣೆ ಸಂದರ್ಭದಲ್ಲಿ ತೋರುವ ಸಹಕಾರ ಮೊದಲಾದ ಅಂಶಗಳನ್ನು ಪ್ರಶಸ್ತಿ ಆಯ್ಕೆಗೆ ಪರಿಗಣಿಸಲಾಗಿದೆ.

ಕಳೆದ 1995ರಿಂದ ಅಸಾಧಾರಣ ಸಂಸದೀಯ ಪಟು ಪ್ರಶಸ್ತಿಯನ್ನು ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗೆ ನೀಡಲಾಗುತ್ತಿದೆ. ಅಲ್ಲದೆ ಅಸ್ಸಾಂ, ರಾಜಸ್ಥಾನ, ಜಾರ್ಖಂಡ್, ಗುಜರಾತ್ ಮೊದಲಾದ ರಾಜ್ಯಗಳಲ್ಲೂ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Facebook Comments