ದಾಕ್ಷಾಯಿಣಿ ಸೇವೆಗೆ ಸಂದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.10- ಅರಿವಿಗೆ ಮೂಲ ಗುರು. ಭಗವಂತನೆಡೆಗೆ ದಾರಿ ತೋರುವವನು ಗುರು. ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಅವರ ಭವ್ಯ ಭವಿಷ್ಯವನ್ನು ಕಾಣುವಲ್ಲಿ ತಮ್ಮ ಜೀವನವನ್ನು ಸಾರ್ಥಕಗೊಳಿಸಿ ಕೊಳ್ಳುವ ಶಿಕ್ಷಕರ ವೃತ್ತಿ ಪವಿತ್ರ. ಬಹುತೇಕ ಎಲ್ಲ ಶಿಕ್ಷಕರು ತಮ್ಮ ವೃತ್ತಿ ಬದ್ದತೆಯಿಂದ ಕಾರ್ಯ ನಿರ್ವಹಿಸುತ್ತಾರೆ. ಎಲ್ಲರೂ ತಮಗೆ ವಹಿಸಿದ ಕರ್ತವ್ಯವನ್ನು ಪಾಠ-ಪ್ರವಚನಗಳನ್ನು ಮಾಡುತ್ತಾರೆ.

ಕೆಲವೇ ಕೆಲವು ಶಿಕ್ಷಕರು ಶಾಲೆಯಲ್ಲಿ ಮನೆಯೆಂದು ತಿಳಿದು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ತಿಳಿದು ಹೃದಯದಿಂದ ಪಾಠ ಮಾಡಿ ತನು-ಮನ-ಧನ ಅರ್ಪಿಸಿ ಮಕ್ಕಳಿಗೆ ಶಿಕ್ಷಣವನ್ನು ದಾರೆ ಎರೆಯುತ್ತಾರೆ. ಅಂಥವರ ಸಾಲಿಗೆ ನಿಲ್ಲುವವರು ಪ್ರಸ್ತುತ ರಾಜ್ಯ ಪ್ರಶಸ್ತಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಎಂ.ಕೋಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಎನ್.ದಾಕ್ಷಾಯಿಣಿ ಅವರು.  ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪಡೆದ 31 ಶಿಕ್ಷಕರಲ್ಲಿ ಎಂ.ದಾಕ್ಷಾಯಿಣಿ ಕೂಡ ಒಬ್ಬರು.

ಎಂ.ದಾಕ್ಷಾಯಿಣಿಯವರು ಮೂಲತಃ ಹಾಸನ ಜಿಲ್ಲೆಯ ಬೇಲೂರಿನವರು. ಬಿ.ಆರ್.ನಾಗೇಶ್ ಮತ್ತು ಬಿ.ಆರ್.ಲೀಲಾವತಿ ಅವರ ಪುತ್ರಿ. ಬಾಲ್ಯದಿಂದಲೂ ಶಿಕ್ಷಕಿಯಾಗಬೇಕೆಂಬ ಹಂಬಲ ಇದ್ದ ಇವರು 1989ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನೇಮಕವಾದರು. ಅಲ್ಲಿಂದ ಇಲ್ಲಿಯವರೆಗೆ ಸತತ 32 ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸುತ್ತಾ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಬಂದಿದ್ದಾರೆ.

2002ರಲ್ಲಿ ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ, 2006ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2014ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, 2014ರಲ್ಲಿ ಕನ್ನಡ ಸಿರಿ ಪ್ರಶಸ್ತಿ, 2015ರಲ್ಲಿ ಗುರು ದೇವೋಭವ ಪ್ರಶಸ್ತಿ, ನವೋದಯ ವಿದ್ಯಾಲಯದಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ, 2017ರಲ್ಲಿ ಆದರ್ಶ ಶಿಕ್ಷಕಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಎಂ.ದಾಕ್ಷಾಯಿಣಿ ಅವರು ಶಾಲೆಯಲ್ಲಿ ಪಾಠ ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಶಾಲೆಯನ್ನು ಅಭಿವೃದ್ಧಿಗೊಳಿಸುವುದು, ಶಾಲಾ ಆವರಣವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು, ಮಕ್ಕಳನ್ನು ಸಮುದಾಯದ ಜೊತೆ ಬೆರೆಸುವುದು, ಮಕ್ಕಳಿಗೆ ಬದುಕಿನ ಶಿಕ್ಷಣ ಕೊಡಿಸುವುದನ್ನು ತಮ್ಮ ಆದ್ಯತೆಯನ್ನಾಗಿ ಮಾಡಿಕೊಂಡು ಮನೆ ಮಾತಾಗಿದ್ದಾರೆ.

ತಾವು ಕರ್ತವ್ಯ ನಿರ್ವಹಿಸುವ ಶಾಲೆಯನ್ನೂ ಕೂಡ ವಿವಿಧ ದಾನಿಗಳಿಂದ ಹಣ ಸಂಗ್ರಹಿಸಿ ಅಭಿವೃದ್ಧಿಪಡಿಸಿದ್ದಾರೆ. ಕಂಪ್ಯೂಟರ್, ಟಿವಿ, ಯುಪಿಎಸ್, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಬೇಕಾದ ಪರಿಕರಗಳು, ಸ್ಮಾರ್ಟ್ ಕ್ಲಾಸ್‍ಗೆ ಅಗತ್ಯವಾದ ಉಪಕರಣಗಳನ್ನು ಪಡೆದು ಶಾಲೆಯನ್ನೂ ಆಧುನೀಕರಣಗೊಳಿಸಿ ಶಾಲೆಗೂ ಪ್ರಶಸ್ತಿ ಲಭಿಸುವಂತೆ ಮಾಡಿದ್ದಾರೆ.

ಸಾವಯವ ಗೊಬ್ಬರಗಳ ತಯಾರಿಕೆ, ಮನೆಗಳಲ್ಲಿ ಇಂಗುಗುಂಡಿ ನಿರ್ಮಿಸಿ ಅಂತರ್ಜಲ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತಿರುವುದು ಪೋಷಕರಿಗೆ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸುತ್ತಿರುವುದು, ಪೋಷಕರ ಮನವೊಲಿಸಿ ಉಳಿತಾಯ ಖಾತೆ ತೆರೆಸಿರುವುದು ಈ ಎಲ್ಲಾ ಕೆಲಸಗಳ ಶಿಕ್ಷಕರ ಕಾರ್ಯವನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡಿದೆ.

ಪಾಠಗಳನ್ನು ಮಾಡುವ ಜೊತೆಗೆ ಪಾಠೋಪಕರಣ ತಯಾರಿಕೆಯಲ್ಲಿ ದಾಕ್ಷಿಯಿಣಿ ಅವರು ಎತ್ತಿದ ಕೈ. ಸ್ಥಳದಲ್ಲಿ ಪಾಠೋಪಕರಣ ತಯಾರಿಕೆಯಲ್ಲಿ ಸತತ ಮೂರು ಬಾರಿ ಜಿಲ್ಲಾ ಹಂತಕ್ಕೆ ಆಯ್ಕೆಯಾಗಿದ್ದಾರೆ.  ಆಕರ್ಷಕ ನಲಿ-ಕಲಿ ಕೊಠಡಿಯ ಕಲಿಕಾ ಸಾಮಾಗ್ರಿ ತಯಾರಿಕೆ, ಪಾಠಗಳಿಗೆ ಪೂರಕವಾದ ಕಲಿಕಾ ಸಾಮಾಗ್ರಿ ತಯಾರಿಕೆಯಲ್ಲೂ ಸಹ ಹಿರಿಯ ಅಧಿಕಾರಿಗಳಿಂದ ಸೈ ಎನಿಸಿಕೊಂಡಿದ್ದಾರೆ.

ತರಗತಿಯ ಹಸ್ತಪ್ರತಿ, ಶಾಲಾ ಕಿರುಹೊತ್ತಿಗೆ, ಮಾಡಿ ಕಲಿ, ವಿಜ್ಞಾನಗಳ ಪ್ರಯೋಗ, ಆರೋಗ್ಯ ಭಾಗ್ಯ ಸಂಬಂಧಿಸಿದ ಸರಳ ಚಿಕಿತ್ಸೆ ಸಂಗ್ರಹ, ಮಕ್ಕಳಿಂದ ವಿವಿಧ ಆಲ್ಬಂ ತಯಾರಿಕೆ ಮುಂತಾದವುಗಳ ಮೂಲಕ ವೃತ್ತಿಪರತೆಯನ್ನು ಹೆಚ್ಚಿಸಿದ್ದಾರೆ.  ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಬಗ್ಗೆ ಈ ಸಂಜೆಯೊಂದಿಗೆ ಮಾತನಾಡಿ ಸಂತಸ ವ್ಯಕ್ತಪಡಿಸಿದ ದಾಕ್ಷಾಯಿಣಿ ಅವರು, ನನ್ನ ಪತಿ ಪಿ.ಎಲ್.ರಾಮಸ್ವಾಮಿ ಮತ್ತು ಕುಟುಂಬದವರ ಪ್ರೇರಣೆ ನನ್ನ ಶಿಕ್ಷಕ ಕರ್ತವ್ಯಕ್ಕೆ ಸ್ಪೂರ್ತಿ. ವೃತ್ತಿ ಬಾಂಧವರು, ಶಿಕ್ಷಕ ಸಮುದಾಯದವರ ಸಹಕಾರ ಹಾಗೂ ಇಲಾಖೆಯ ಮಾರ್ಗದರ್ಶನ ನನ್ನನ್ನು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯವರೆಗೆ ಕೊಂಡೊಯ್ದಿದೆ.

ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನನಗೆ ಸಂಭ್ರಮದ ಜೊತೆಗೆ ಹೊಸ ಜವಾಬ್ದಾರಿಯನ್ನು ನೀಡಿದೆ. ಮತ್ತಷ್ಟು ಚಿಂತನೆ, ಆಲೋಚನೆಗಳ ಮೂಲಕ ಶಿಕ್ಷಣ ನೀಡಿ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕರ್ತವ್ಯಪರಳಾಗುತ್ತೇನೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Facebook Comments