ಎಕ್ಸಿಟ್ ಪೋಲ್‍ನಿಂದ ಬೆಚ್ಚಿ ಬಿತ್ತು ಬೆಟ್ಟಿಂಗ್ ಮಾಫಿಯಾ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಮೇ 22-ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಹೊರ ಬಿದ್ದ ಎಗ್ಸಿಟ್ ಪೊಲ್ ನಿಂದಾಗಿ ಬೆಟ್ಟಿಂಗ್ ಮಾಫಿಯಾ ಬೆಚ್ಚಿ ಬಿದ್ದಿದೆ.ರಾಜ್ಯದ ಹಲವು ಲೋಕಸಭಾ ಕ್ಷೇತ್ರದಲ್ಲಿ ನೆಚ್ಚಿನ ಅಭ್ಯರ್ಥಿಗಳನ್ನು ನಂಬಿ ಲಕ್ಷಗಟ್ಟಲೆ ಹಣ ಸುರಿದಿದ್ದ ಬೆಟ್ಟಿಂಗ್ ದೊರೆಗಳು ಸಿ-ವೋಟರ್, ಟೈಂಸ್ ನೌ, ಇಂಡಿಯ ಟಿವಿ, ಎಬಿಪಿ ಮತ್ತು ಜನ್ ಕಿ ಬಾತ್ ಸೇರಿದಂತೆ ಇತರೆ ಸಮೀಕ್ಷೆ ವರದಿ ಬಳಿಕ ಕಕ್ಕಾಬಿಕ್ಕಿಯಾಗಿದ್ದು ಹಣ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ರಾಜ್ಯದ ಬೆಟ್ಟಿಂಗ್ ಏಜೆಂಟರ ನೆಚ್ಚಿನ ಅಭ್ಯರ್ಥಿಗಳಾದ ಮಂಡ್ಯ ಕ್ಷೇತ್ರದ ನಿಖಿಲ- ಸುಮಲತ, ತುಮಕೂರಿನ ಬಿಜೆಪಿಯ ಬಸವರಾಜ್- ಜೆಡಿಎಸ್ ಅಭ್ಯರ್ಥಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ , ಎಚ್.ಡಿ.ರೇವಣ್ಣ ಅವರ ಮಗ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಹಾಗೂ ಬಿಜೆಪಿ ಅಭ್ಯರ್ಥಿ ಎ.ಮಂಜು ,ಮೈಸೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ವಿಜಯ್ ಶಂಕರ್ ಹಾಗೂ ಬಿಜೆಪಿಯ ಪ್ರತಾಪ್ ಸಿಂಹ ಬೆಟ್ಟಿಂಗ್‍ದಾರರ ಪಟ್ಟಿಯಲ್ಲಿರುವ ಪ್ರಮುಖರು. ಅದರಲ್ಲೂ ಮಂಡ್ಯ ಲೋಕಸಭೆ ಕ್ಷೇತ್ರ ಚುನಾವಣೆ ಘೋಷಣೆ ದಿನದಿಂದಲೂ ರಾಜ್ಯವಷ್ಟೆಯಲ್ಲದೆ ರಾಷ್ಟ್ರಮಟ್ಟದಲ್ಲೂ ಕುತೂಹಲಕ್ಕೆ ಕಾರಣವಾಗಿದೆ.

ಕ್ಷೇತ್ರದ ಜನಮೆಚ್ಚುಗೆಯ ಸಂಸದ ಅಂಬರೀಶ್ ಮರಣದ ಬಳಿಕ ಸ್ಪರ್ಧಿಸಿದ್ದ ಪತ್ನಿ ಸುಮಲತ ಗೆಲುವು ಸುಲಭವಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು ಹಾಗೂ ಜೆಡಿಎಸ್ ಭದ್ರ ಕೋಟೆ ಎಂದು ಬಿಂಬಿತವಾದ ಕ್ಷೇತ್ರದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಶಾಸಕರನ್ನು ಹೊಂದಿರುವ ಜೆಡಿಎಸ್ ಗೆಲುವು ಸಾಧಿಸಲಿದೆ. ಸ್ವತಃ ಸಿಎಂ ಕುಮಾರಸ್ವಾಮಿ ಮಗ ನಿಖಿಲ್ ಪರ ಪ್ರಚಾರ ನಡೆಸಿದ್ದರು. ಇದನ್ನು ಮನಗಂಡು ಬೆಟ್ಟಿಂಗ್‍ದಾರರು ನಿಖಿಲ್ ಪರ ಕೋಟ್ಯಾಂತರ ರೂ. ಸುರಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಹಾಗೂ ರಾಜ್ಯದಲ್ಲಿ ನಿಖಿಲ್ ಗೆಲುವು ಸಾಧಿಸಲಿದ್ದಾರೆ ಎಂದು ಕಟ್ಟಲಾಗಿರುವ ಬೆಟ್ಟಿಂಗ್‍ನಷ್ಟು ಇನ್ಯಾವ ಅಭ್ಯರ್ಥಿಗೂ ಕಟ್ಟಲಾಗಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚೆಗೆ ಹೊರಬಿದ್ದ ಎಗ್ಸಿಟ್ ಪೆಪೊಲ್‍ನಿಂದ ಬೆಟ್ಟಿಂಗ್ ದೊರೆಗಳು ವಿಚಲಿತರಾಗಿದ್ದಾರೆ ಎನ್ನಲಾಗಿದೆ.

ಬೆಟ್ಟಿಂಗ್ ಜಾಲವಲ್ಲದೆ ಗ್ರಾಮಗಳಲ್ಲಿ ತಮ್ಮ ಜಮೀನು, ಮನೆ ,ವಸ್ತುಗಳನ್ನು ಅಡವಿಟ್ಟು ಬೆಟ್ಟಿಂಗ್ ಕಟ್ಟಿದ್ದ ಹಲವು ಮಂದಿ ನಿರಾಸೆಗೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.

ಮೈಸೂರಿನಲ್ಲಿ ವಿಜಯ್ ಶಂಕರ್, ತುಮಕೂರಿನಲ್ಲಿ ಬಸವರಾಜ್, ಹಾಸನದ ಪ್ರಜ್ವಲ್ ಅವರ ಹೆಸರು ಬೆಟ್ಟಿಂಗ್ ವಲಯದಲ್ಲಿ ಫೆವರೇಟ್ ಆಗಿದೆ. ಹಾಸನದಲ್ಲಿ ಪ್ರಜ್ವಲ್ ಗೆದ್ದರೂ ಸಹ ಅಫಿಡವಿಟ್ ಗೊಂದಲದ ಕಾರಣ ಲೋಕಸಭಾ ಸದಸ್ಯ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ಕಾನೂನು ವಿಶ್ಲೇಷಣೆಯು ನಡೆದು ಬೆಟ್ಟಿಂಗ್ ದಾರರನ್ನು ನಿದ್ದೆಗೆಡಿಸಿದೆ.

ಒಟ್ಟಾರೆ ಚುನಾವಣೆ ಬಳಿಕ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಕಟ್ಟಿ ನಿರಾಳರಾಗಿದ್ದ ಬೆಟ್ಟಿಂಗ್ ಏಜೆಂಟರು ಎಗ್ಸಿಟ್ ಪೆಪೊಲ್ ನಂತರ ಸಪ್ಪೆಮೋರೆ ಹಾಕಿಕೊಂಡು ಫಲಿತಾಂಶ ಪೂರ್ವ ಸಮೀಕ್ಷೆಗೆ ಹಿಡಿಶಾಪ ಹಾಕುತ್ತಿದ್ದಾರೆ.

– ಸಂತೋಷ್ ಸಿ ಬಿ. ಹಾಸನ

Facebook Comments