ಆಡಳಿತ ವರದಿ ಮಂಡನೆಗೆ ಬಿಬಿಎಂಪಿ ಉಪಮೇಯರ್ ಭದ್ರೇಗೌಡ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17- ಪಾಲಿಕೆಯ 36 ಇಲಾಖೆಗಳಲ್ಲಿ ಅಧಿಕಾರಿಗಳು ನಡೆಸಿರುವ ಲೋಪದೋಷ ನಾಳೆ  ಬಯಲಾಗಲಿದೆ. ಉಪಮೇಯರ್ ಭದ್ರೇಗೌಡ ಅವರು ನಾಳೆ 2012-13, 2013 -14, 2014-15ನೆ ಸಾಲಿನ ಆಡಳಿತ ವರದಿ ಮಂಡನೆ ಮಾಡಲಿದ್ದಾರೆ. ಆಡಳಿತ ವರದಿ ಮಂಡನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 2012-13ರ ವರದಿಯ ನಾಲ್ಕು ವಾಲ್ಯುಮ್, 2013-14ರ ನಾಲ್ಕು, 2014-15ರ ನಾಲ್ಕು, ಒಟ್ಟು 12 ವಾಲ್ಯುಮ್ ಸೇರಿ 200ಕ್ಕೂ ಹೆಚ್ಚು ಪುಸ್ತಕಗಳು ಮುದ್ರಣಗೊಂಡಿದ್ದು, ಪಾಲಿಕೆಯಲ್ಲಿ ಭದ್ರವಾಗಿಡಲಾಗಿದೆ.

ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಅವರು 2011-12ನೆ ಸಾಲಿನ ಆಡಳಿತ ವರದಿ ಮಂಡನೆ ಮಾಡಿದ್ದು ಬಿಟ್ಟರೆ ಇದುವರೆಗೆ ಯಾವೊಬ್ಬ ಉಪಮೇಯರ್ ಕೂಡ ಮಂಡನೆ ಮಾಡಲು ಮುಂದಾಗಿರಲಿಲ್ಲ.  ಆದರೆ, ರಮೀಳಾ ಉಮಾಶಂಕರ್ ಅವರು ತಮ್ಮ ಅವಧಿಯಲ್ಲಿ ಆಡಳಿತ ವರದಿ ಮಂಡನೆ ಮಾಡುವುದಾಗಿ ಶಪಥ ಮಾಡಿದ್ದರು. ದುರದೃಷ್ಟವಶಾತ್ ಆ ಸ್ಥಾನದ ಚೇರ್‍ನಲ್ಲಿ ಕುಳಿತುಕೊಳ್ಳುವ ಮುನ್ನವೇ ಅವರು ವಿಧಿವಶರಾದರು.

ನಂತರ ಭದ್ರೇಗೌಡ ಅವರು ಉಪಮೇಯರ್ ಆದರು. ರಮೀಳಾ ಉಮಾಶಂಕರ್ ಅವರ ಕನಸನ್ನು ನನಸು ಮಾಡುವುದಾಗಿ ಪಣ ತೊಟ್ಟಿರುವ ಅವರು, 2012 ರಿಂದ 2015ರ ವರೆಗಿನ ಸಂಪೂರ್ಣ ವರದಿಯನ್ನು ನಾಳೆ ಮಂಡನೆ ಮಾಡಲಿದ್ದಾರೆ.  ಎಲ್ಲ ಅಡೆತಡೆ ಮೀರಿ ನಾಳೆ ಅವರು ಆಡಳಿತ ವರದಿ ಮಂಡಿಸಲಿದ್ದು, ಈ ಅವಧಿಯಲ್ಲಿ ಅಧಿಕಾರಿಗಳು ನಡೆಸಿರುವ ಲೋಪದೋಷಗಳು ಬಯಲಾಗಲಿವೆ.

ಮಾರಾಟಕ್ಕೆ ಲಭ್ಯ: ಕೆಎಂಸಿ ಕಾಯ್ದೆ ಪ್ರಕಾರ ಆಡಳಿತ ವರದಿ ಮಂಡನೆಯಾದ ನಂತರ ಅದು ಸಾರ್ವಜನಿಕರಿಗೆ ಸಿಗಬೇಕು. ರಿಯಾ ಯಿತಿ ದರದಲ್ಲಿ ಈ ಪುಸ್ತಕಗಳನ್ನು ಪಾಲಿಕೆಯ ಮಾರಾಟ ಮಾಡಬೇಕಿದೆ. ಹಾಗಾಗಿ ನಾನು ಮಂಡಿಸುವ ಆಡಳಿತ ವರದಿ ಪಾಲಿಕೆಯಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ ಎಂದು ಭದ್ರೇಗೌಡರು ತಿಳಿಸಿದ್ದಾರೆ.

Facebook Comments