ಸ್ಮಾರ್ಟ್ ಸಿಟಿ ಕಾಮಗಾರಿ ಶೀಘ್ರ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರ ವಿರುದ್ದ ಕ್ರಿಮಿನಲ್ ಕೇಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.20- ಸ್ಮಾರ್ಟ್ ಯೋಜನೆಯಡಿ ಬೆಂಗಳೂರಿನಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದಿದ್ದರೆ ಅಂತಹ ಗುತ್ತಿಗೆದಾರರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್ ಎಚ್ಚರಿಕೆ ನೀಡಿದ್ದಾರೆ.  ನಗರದ ಬೇರೆ ಬೇರೆ ಇಂದು ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ಭೇಟಿ ಕೊಟ್ಟು ನಂತರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಡಿಫೆನ್ಸ್‍ರಸ್ತೆಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಅವರು ಈವರೆಗೂ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ.ಹೀಗಾಗಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.  ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಲ್ಲಿ ಗುಣಮಟ್ಟದಿಂದ ಕೂಡಿರಬೇಕು. ಒಂದು ವೇಳೆ ಕಳಪೆಯಿಂದ ಕೂಡಿದ್ದರೆ ಅಂತಹ ಗುತ್ತಿಗೆದಾರರ ವಿರುದ್ದವೂ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಲು ಹಿಂದೆಮುಂದೆ ನೋಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.

ಯಾವುದೇ ಕಾರಣಕ್ಕೂ ನಾವು ಕಳಪೆ ಗುಣಮಟ್ಟಕ್ಕೆ ರಾಜೀಯಾಗುವುದಿಲ್ಲ. ಅಂತಹ ಪ್ರಕರಣಗಳು ಕಂಡುಬಂದರೆ ಅಂಥವರನ್ನು ಕಪ್ಪುಪಟ್ಟಿಗೆ ಸೇರಿಸಲು ಹಿಂದೆಮುಂದೆ ನೋಡುವುದಿಲ್ಲ ಎಂದು ಗುಡುಗಿದರು.  ಸ್ಮಾರ್ಟ್ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮೊದಲ ಹಂತದಲ್ಲಿ ಏಳು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮೊದಲ ಹಂತದ ಯೋಜನೆಯಲ್ಲಿ 271 ಕೋಟಿ, 2ನೇ ಹಂತದ ಆರು ಯೋಜನೆಗಳಿಗೆ 210 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಮೊದಲ ಹಂತದ 7 ಕಾಮಗಾರಿಗಳು ಫೆಬ್ರವರಿ ಇಲ್ಲವೇ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, 2ನೇ ಹಂತದ ಯೋಜನೆಗಳಿಗೆ ಶೀಘ್ರದಲ್ಲೇ ಅಧಿಕಾರಿಗಳ ಜೊತೆ ಯಾವಾಗ ಕೈಗೆತ್ತಿಕೊಳ್ಳಬೇಕು ಎಂಬುದನ್ನು ತೀರ್ಮಾನ ಮಾಡಲಾಗವುದು.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಯೋಜನೆಗಳಿಗೆ ಒಟ್ಟು ಒಂದು ಸಾವಿರ ಕೋಟಿ ಅನುದಾನ ಕೊಟ್ಟಿದೆ. ಈಗಾಗಲೇ 243 ಕೋಟಿ ಬಿಡುಗಡೆ ಮಾಡಲಾಗಿದ್ದು, 346 ಕೋಟಿ ಹಣದಲ್ಲಿ ಯಾವ ಕಾಮಗಾರಿಗಳನ್ನು ಎಲ್ಲಿ ಮಾಡಬೇಕೆಂಬುದನ್ನು ಸಿಎಂ ಚರ್ಚಿಸಲಾಗುವುದು ಎಂದರು.

ರಾಜಭವನ ರಸ್ತೆಯಲ್ಲಿ ಕೈಗೊಂಡಿರುವ ಕಾಮಗಾರಿಯನ್ನು ಜನವರಿ ಮೊದಲ ವಾರದಲ್ಲಿ, ರೇಸ್‍ಕೋರ್ಸ್ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಡಿಸೆಂಬರ್ 15ರೊಳಗೆ ಮುಗಿಸಬೇಕೆಂದು ಸೂಚಿಸಿರುವುದಾಗಿ ತಿಳಿಸಿದರು.  ಕಮರ್ಷಿಯಲ್ ಸ್ಟ್ರೀಟ್ ಕಾಮಗಾರಿಯನ್ನು 10ದಿನಗಳೊಳಗೆ ರಾಜರಾಮ್ ರಸ್ತೆ, ಹಲಸೂರು ಮತ್ತಿತರ ಕಡೆ ಕೈಗೊಂಡಿರುವ ಕಾಮಗಾರಿಯನ್ನು ಕಾಲಮಿತಿಯೊಳಗೆ ಮುಗಿಸಬೇಕೆಂದು ಸೂಚನೆ ಕೊಟ್ಟರು.

ಇದಕ್ಕೂ ಮುನ್ನ ಬೆಳಗ್ಗೆ ರೇಸ್‍ಕೋರ್ಸ್, ನೆಹರು ತಾರಾಲಯ, ರಾಜಭವನ ರಸ್ತೆ, ಕಬ್ಬನ್‍ಪಾರ್ಕ್, ರಾಜರಾಮ್‍ಮೋಹನ್ ರಾಯ್ , ಮೆಗ್ರತ್ ರಸ್ತೆ, ಕೆ.ಎಸ್.ರಸ್ತೆ, ವುಡ್‍ಲ್ಯಾಂಡ್ ಹೋಟೆಲ್ ರಸ್ತೆ ಹಾಗೂ ರೆಹನಿಕ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.

Facebook Comments