ಶಿವಣ್ಣ- ವಿಕ್ರಂ ಅಪೂರ್ವ ಸಂಗಮ..?

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾಂಡಲ್‍ವುಡ್‍ನ ಬ್ಯುಜಿ ನಟ ಯಾರು ಎಂದು ಕೇಳಿದರೆ ತಕ್ಷಣ ಯಶ್, ಪುನೀತ್, ಉಪೇಂದ್ರ, ದರ್ಶನ್, ಸುದೀಪ್‍ರ ಹೆಸರು ತೇಲಿಬರುತ್ತದೆ. ಆದರೆ ಸೆಂಚುರಿಸ್ಟಾರ್ ಶಿವರಾಜ್‍ಕುಮಾರ್ ಅವರು ಪ್ರತಿ ವರ್ಷ ಮೂರು ಚಿತ್ರಗಳಲ್ಲಿ ನಟಿಸುವ ಮೂಲಕ ತಾವು ಕೂಡ ಬ್ಯುಜಿ ನಟರೇ ಎಂಬುದನ್ನು ತೋರಿಸಿದ್ದಾರೆ. ಕೊರೊನಾದಿಂದಾಗಿ 2020ರಲ್ಲಿ ಯಾವೊಬ್ಬ ಸ್ಟಾರ್ ನಟನ ಚಿತ್ರ ತೆರೆ ಕಾಣದಿದ್ದರೂ ಶಿವಣ್ಣ ನಟನೆಯ ದ್ರೋಣ ಚಿತ್ರವು ತೆರೆ ಕಂಡು ಯಶಸ್ವಿ ಹಾದಿಯಲ್ಲಿ ಸಾಗುತ್ತಿದ್ದಾಗಲೇ ಚಿತ್ರಮಂದಿರಗಳು ಲಾಕ್‍ಡೌನ್ ಆಗಿದ್ದರಿಂದ ಶಿವಣ್ಣನ ಅಭಿಮಾನಿಗಳಲ್ಲಿ ನಿರಾಸೆ ಮೂಡಿತು.

ಆದರೆ 2021ರಲ್ಲಿ ಸ್ಟಾರ್ ನಟರ ಚಿತ್ರಗಳ ದಂಡೇ ಬೆಳ್ಳಿಪರದೆಯ ಮೇಲೆ ರಾರಾಜಿಸುತ್ತದೆ ಎಂದು ಅಂದಾಜಿಸಲಾಗಿದೆ, ಶಿವಣ್ಣ ನಟನೆಯ ಭಜರಂಗಿ 2 ಚಿತ್ರವು ಈ ವರ್ಷದ ಆರಂಭದಲ್ಲೇ ತೆರೆಕಾಣಲು ಸಜ್ಜಾಗಿದ್ದರೆ, ಮಲ್ಟಿ ತಾರಾಗಣವಿರುವ ಶಿವಪ್ಪ ಕೂಡ ಈ ವರ್ಷವೇ ಬೆಳ್ಳಿತೆರೆ ಮೇಲೆ ರಾರಾಜಿಸುವ ಮತ್ತೊಂದು ಚಿತ್ರವಾಗಿದೆ.

ಈ ನಡುವೆ ಶಿವರಾಜ್‍ಕುಮಾರ್ ಅವರು ತಮಿಳುನಾಡಿನ ಸ್ಟಾರ್ ನಟರೊಬ್ಬರ ಚಿತ್ರದಲ್ಲೂ ಮುಖ್ಯ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಅದರೊಂದಿಗೆ ಶಿವರಾಜ್‍ಕುಮಾರ್ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರಂತೆ. ಈಗಾಗಲೇ ಸೆಂಚುರಿಸ್ಟಾರ್ ಶಿವರಾಜ್‍ಕುಮಾರ್ ಹಾಗೂ ಹರ್ಷ ಕಾಂಬಿನೇಷನ್‍ನ ಭಜರಂಗಿ 2 ಚಿತ್ರಕ್ಕೂ ಪ್ಯಾನ್ ಇಂಡಿಯಾ ಸ್ಪರ್ಷ ಸಿಕ್ಕಿದೆ.

ಕಾಲಿವುಡ್‍ನ ಸ್ಟಾರ್ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸುವ ಹೊಸ ಚಿತ್ರದಲ್ಲಿ ಶಿವಣ್ಣ ತಮಿಳು ಚಿತ್ರರಂಗದ ಸ್ಟಾರ್ ನಟ ವಿಕ್ರಮ್‍ರೊಂದಿಗೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಈ ಚಿತ್ರದಲ್ಲಿ ವಿಕ್ರಮ್‍ರ ಪುತ್ರ ಧ್ರುವ ವಿಕ್ರಮ್ ಕೂಡ ಕಾಣಿಸಿಕೊಂಡಿದ್ದು ಈ ಚಿತ್ರಕ್ಕೆ ಪ್ಯಾನ್ ಇಂಡಿಯಾ ಸ್ಪರ್ಶ ನೀಡುವ ಉದ್ದೇಶವಿರುವುದರಿಂದ ಸ್ಯಾಂಡಲ್‍ವುಡ್‍ನ ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಅವರನ್ನು ಸಂಪರ್ಕ ಮಾಡಿದ್ದಾರಂತೆ.

ರೌಡಿಸಂ ಕಥೆ ಹೊಂದಿರುವ ಈ ಚಿತ್ರದಲ್ಲಿ ಶಿವಣ್ಣ ಅವರೇ ನಟಿಸಿದರೆ ಚೆನ್ನ ಎಂದು ನಿರ್ದೇಶಕ ಕಾರ್ತಿಕ್‍ಸುಬ್ಬರಾಜ್ ಅವರು ಬೆಂಗಳೂರಿಗೆ ಬಂದು ಅವರಿಗೆ ಕಥೆಯ ಎಳೆಯನ್ನು ಕೂಡ ಹೇಳಿ ಹೋಗಿದ್ದಾರಂತೆ. ಆದರೆ ಶಿವರಾಜ್‍ಕುಮಾರ್ ಅವರು ಚಂದನವನದಲ್ಲೇ ಬ್ಯುಜಿಯಾಗಿರುವುದರಿಂದ ವಿಕ್ರಮ್ ಚಿತ್ರಕ್ಕೆ ಡೇಟ್ ಹೊಂದಾಣಿಕೆ ಮಾಡಿಕೊಂಡು ನಟಿಸುತ್ತಾರೋ ಇಲ್ಲವೋ ಎಂಬ ಅನುಮಾನಗಳು ಕೂಡ ಎದ್ದಿವೆ.

ಆದರೆ ಜಿಗರ್‍ಥಂಡಾ, ಪಿಜ್ಜಾ, ಇರೈವಿ, ಪೆಟ್ಟಾ ಮುಂತಾದ ಸೂಪರ್ ಡೂಪರ್ ಹಿಟ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ನಿರ್ದೇಶಳಕ ಕಾರ್ತಿಕ್ ಸುಬ್ಬರಾವ್‍ಗೆ ಈ ಚಿತ್ರದಲ್ಲಿ ಶಿವಣ್ಣ ನಟಿಸಲೇಬೇಕೆಂಬ ಬಯಕೆ ಇದೆ, ಅದಕ್ಕಾಗಿ ಕಾಯಲು ಸಿದ್ಧ ಎಂದು ಹೇಳುತ್ತಿದ್ದಾರೆ. ಈಗಾಗಲೇ ವಿಕ್ರಮ್ ಅಭಿನಯದ 60ನೆ ಚಿತ್ರವನ್ನು ಮಲಯಾಳಂ, ತೆಲುಗಿಗೆ ಡಬ್ ಕೂಡ ಮಾಡಲು ಸಿದ್ಧತೆ ನಡೆಸಿದ್ದು, ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯಬೇಕಾದರೆ ಸೆಂಚುರಿಸ್ಟಾರ್ ಶಿವರಾಜ್‍ಕುಮಾರ್ ನಟಿಸಿದರೆ ಉತ್ತಮ ಎಂಬುದು ಚಿತ್ರತಂಡದ ಅನಿಸಿಕೆ.

ಈಗಾಗಲೇ ತೆಲುಗಿನ ಗೌತಮಪುತ್ರ ಶತಕರ್ಣಿ ಚಿತ್ರದಲ್ಲಿ ನಟಿಸುವ ಮೂಲಕ ಟಾಲಿವುಡ್‍ನಲ್ಲಿ ಮಿಂಚಿರುವ ಶಿವರಾಜ್‍ಕುಮಾರ್ ಅವರು ವಿಕ್ರಮ್‍ರ 60ನೇ ಚಿತ್ರದಲ್ಲಿ ನಟಿಸುವ ಮೂಲಕ ಅಪೂರ್ವ ಸಂಗಮವಾಗಲಿ ಅಲ್ಲವೇ..?

Facebook Comments