ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ‘ಭಾರತ್ ಬಚಾವೋ’ ಎಂದು ಅಬ್ಬರಿಸಿದ ಕಾಂಗ್ರೆಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.14- ವಿವಾದಾತ್ಮಕ ಮಸೂದೆಗಳು , ನಿರುದ್ಯೋಗ, ರೈತರ ಸಂಕಷ್ಟ , ಆರ್ಥಿಕ ಕುಸಿತ ಸೇರಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಇಂದು ರಾಜಧಾನಿ ದೆಹಲಿಯಲ್ಲಿ ಭಾರತ್ ಬಚಾವೋ (ಭಾರತ ರಕ್ಷಿಸಿ) ಆಂದೋಲನದ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿತು.

ರಾಮಲೀಲಾ ಮೈದಾನದಲ್ಲಿ ನಡೆದ ಭಾರತ ರಕ್ಷಿಸಿ ಆಂದೋಲನದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಮಾಜಿ ಪ್ರಧಾನಿ ಡಾ.ಮನಮೋಹನಸಿಂಗ್, ಪಕ್ಷದ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್, ಅಜಿತ್ ರಂಜನ್ ಚೌದರಿ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ,ಅಹಮದ್ ಪಟೇಲ್, ಆನಂದ ಶರ್ಮ, ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡು ಕೇಂದ್ರದ ವಿವಾದಾತ್ಮಕ ನೀತಿಗಳನ್ನು ಖಂಡಿಸಿದರು.

ಸೋನಿಯಾಗಾಂಧಿ ಸೇರಿದಂತೆ ಪಕ್ಷದ ಮುಖಂಡರು ಮಾತನಾಡಿ, ಕೇಂದ್ರ ಸರ್ಕಾರದ ನೀತಿಗಳಿಂದ ದೇಶ ವಿಭಜನೆಯತ್ತ ಸಾಗಿದೆ. ಸಂವಿಧಾನದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು. ಭಾರತ್ ಬಚಾವೋ ಆಂದೋಲನದಲ್ಲಿ ದೇಶದ ವಿವಿಧೆಡೆಗಳಿಂದ ದೇಶದ ಮುಖಂಡರು ಮತ್ತು ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ರೈತರಸಂಕಷ್ಟ, ನಿರುದ್ಯೋಗ ಸಮಸ್ಯೆ, ಆರ್ಥಿಕ ಹಿನ್ನಡೆ ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿದ ಪಕ್ಷದ ಮುಖಂಡರು ಪೌರತ್ವ ತಿದ್ದುಪಡಿ ಮಸೂದೆಯಿಂದ ಈಶಾನ್ಯ ರಾಜ್ಯ ಹೊತ್ತಿ ಉರಿದು ಸಾವು ನೋವುಗಳಿಗೆ ಕಾರಣವಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಹರಿಹಾಯ್ದರು. ರ‍್ಯಾಲಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Facebook Comments