ಕರ್ನಾಟಕದಲ್ಲಿ ಭಾರತ್ ಬಂದ್‌ಗೆ ಇಲ್ಲ ಬೆಂಬಲ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.7- ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಡಪಕ್ಷಗಳ ಬೆಂಬಲಿತ ಸಂಘಟನೆಗಳು ನಾಳೆ ಕರೆ ನೀಡಿರುವ ಭಾರತ್ ಬಂದ್ ವಿಫಲಗೊಳಿಸುವಂತೆ ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಪರೋಕ್ಷ ಸೂಚನೆ ಕೊಟ್ಟಿದೆ. ಯಾವುದೇ ಇಲಾಖೆಯ ನೌಕರರು ಇಲ್ಲವೆ ಸಂಘಟನೆಗಳು ಬಂದ್‍ನಲ್ಲಿ ಭಾಗವಹಿಸಿದರೆ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ಆಯಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆಯೂ ಮಾತುಕತೆ ನಡೆಸಿ ಬಂದ್‍ಗೆ ಯಾರೂ ಬೆಂಬಲ ನೀಡದಂತೆ ಮೌಖಿಕ ಸೂಚನೆ ಕೊಡುವಂತೆ ನಿರ್ದೇಶಿಸಿದ್ದಾರೆ. ಹೀಗಾಗಿ ಆಯಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಕೆಳಹಂತದ ಅಧಿಕಾರಿಗಳಿಗೆ ಸೂಚನೆ ನೀಡಿರುವ ಮುಖ್ಯ ಕಾರ್ಯದರ್ಶಿಯವರು ಬಂದ್‍ನಲ್ಲಿ ಭಾಗವಹಿಸದೆ ನಾಳೆ ಎಂದಿನಂತೆ ಕರ್ತವ್ಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಲಾಗಿದೆ.

ಯಾರಾದರೂ ಬಂದ್ ಬೆಂಬಲಿಸಿ ಭಾಗವಹಿಸಿದರೆ ಅವರ ಮೇಲೆ ಶಿಸ್ತುಕ್ರಮದ ಜತೆಗೆ ವೇತನವನ್ನೂ ಕಡಿತಗೊಳಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಶಿಕ್ಷಕರ ಸಂಘಟನೆಗಳು ಸೇರಿದಂತೆ ಕೆಲವು ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿ ತಾವು ಕೂಡ ಭಾಗವಹಿಸುವುದಾಗಿ ಹೇಳಿದ್ದರು.  ಕೇಂದ್ರ ಸರ್ಕಾರದ ವಿರುದ್ಧ ಈ ಬಂದ್ ನಡೆಯುತ್ತಿರುವುದರಿಂದ ರಾಜ್ಯದಲ್ಲಿ ಬಂದ್ ಯಶಸ್ವಿಯಾದರೆ ಆಡಳಿತಾರೂಢ ಬಿಜೆಪಿಗೆ ಮುಜುಗರವಾಗಬಹುದೆಂಬ ಕಾರಣಕ್ಕಾಗಿ ವಿಫಲಗೊಳಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.

ಸಾರಿಗೆ, ಶಾಲಾ-ಕಾಲೇಜುಗಳು, ಬ್ಯಾಂಕ್‍ಗಳು, ಸರ್ಕಾರಿ ಕಚೇರಿಗಳಿಗೆ ಯಾವುದೇ ಕಾರಣಕ್ಕೂ ರಜೆ ನೀಡಬಾರದು. ಎಂದಿನಂತೆ ಕಾರ್ಯನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನಲ್ಲಿ ಯಾವುದೇ ಕಾರಣಕ್ಕೂ ಪ್ರತಿಭಟನೆ ನಡೆಸಬಾರದೆಂದು ಈಗಾಗಲೇ ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಿಯಮ ಉಲ್ಲಂಘಿಸಿ ಯಾರಾದರೂ ಪ್ರತಿಭಟನೆ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ಬಂದ್ ವಿಫಲಗೊಳಿಸಲು ಸರ್ಕಾರವೇ ಪರೋಕ್ಷವಾಗಿ ಸೂಚನೆ ಕೊಟ್ಟಿರುವುದರಿಂದ ಬಹುತೇಕ ಸರ್ಕಾರಿ, ಖಾಸಗಿ, ಅರೆಖಾಸಗಿ ಸೇರಿದಂತೆ ಎಲ್ಲ ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ. ಯಾವುದೇ ಜನಪ್ರತಿನಿಧಿಗಳು ಇಲ್ಲವೆ ಸರ್ಕಾರಗಳು ಬಂದ್‍ಗೆ ಬೆಂಬಲ ನೀಡಬಾರದು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವ ಕಾರಣವನ್ನು ಮುಂದಿಟ್ಟುಕೊಂಡು ರಾಜ್ಯಸರ್ಕಾರ ಬಂದ್ ವಿಫಲಗೊಳಿಸಲು ಸರ್ವಪ್ರಯತ್ನ ನಡೆಸಿದೆ.

Facebook Comments