ರಾಜ್ಯಾದ್ಯಂತ ಕಾರ್ಮಿಕರ ಮುಷ್ಕರ ಬಂದ್ ನೀರಸ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.8- ವೇತನ ಹೆಚ್ಚಳ, ಮಹಿಳೆ ಯರ ರಾತ್ರಿ ಪಾಳಿ ರದ್ದು, ಪಿಂಚಣಿ 10 ಸಾವಿರ ನಿಗದಿ, ನಿರುದ್ಯೋಗ ನಿವಾರಣೆ, ಪಡಿತರ ವಿತರಣೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿ ಟ್ಟುಕೊಂಡು ದೇಶಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳು ಇಂದು ಕರೆ ಕೊಟ್ಟಿದ್ದ ಮುಷ್ಕರಕ್ಕೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಎಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ವಾಹನ ಸಂಚಾರ ಎಂದಿನಂತಿದ್ದರೂ ಜನರ ಓಡಾಟ ವಿರಳವಾಗಿತ್ತು. ಶಾಲಾ ಕಾಲೇಜುಗಳು ಯಥಾಸ್ಥಿತಿಯಲ್ಲಿ ನಡೆದವು. ರಾಜಧಾನಿ ಬೆಂಗಳೂರಿನಲ್ಲಿ ಬಂದ್‍ನ ಬಿಸಿ ಜನರನ್ನು ಹೆಚ್ಚಾಗಿ ಕಾಡಲಿಲ್ಲ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳ ಓಡಾಟ ಎಂದಿನಂತಿತ್ತು. ಬಂದ್ ಪರಿಣಾಮದಿಂದ ಏನಾಗಬಹುದೋ ಎಂಬ ಆತಂಕದಿಂದ ಜನ ಹೊರಬಂದಿರಲಿಲ್ಲ. ಹಾಗಾಗಿ ಬಸ್ ನಿಲ್ದಾಣದಲ್ಲಿ ಜನರ ಓಡಾಟ ವಿರಳವಾಗಿತ್ತು.

ಬಸ್‍ಗಳು ಸಿದ್ಧವಾಗಿದ್ದರೂ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿತ್ತು.ಸದಾ ಗಿಜಿಗುಡುತ್ತಿದ್ದ ಎಪಿಎಂಸಿ ಮಾರುಕಟ್ಟೆ, ಕೆ.ಆರ್.ಮಾರುಕಟ್ಟೆ, ರಸಲ್ ಮಾರುಕಟ್ಟೆಯಲ್ಲಿ ಜನರ ಓಡಾಟ ಕೊಂಚ ತಗ್ಗಿತ್ತು.  ಕಾರ್ಮಿಕರು ಪ್ರತಿಭಟನೆಗಿಳಿದಿದ್ದರಿಂದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾದಂತಿತ್ತು. ಪೀಣ್ಯ ಎರಡನೇ ಹಂತದಿಂದ ಜಾಲಹಳ್ಳಿ ಕ್ರಾಸ್‍ವರೆಗೆ ಕಾರ್ಮಿಕರು ಪ್ರತಿಭಟನಾ ರ್ಯಾಲಿ ನಡೆಸಿದರು. ಬಹುತೇಕ ಸಣ್ಣ ಸಣ್ಣ ಕೈಗಾರಿಕಾ ಕಂಪನಿಗಳು, ಗಾರ್ಮೆಂಟ್ಸ್‍ಗಳು ಮುಚ್ಚಿದ್ದವು.

ಇನ್ನುಳಿದಂತೆ ಶಾಲಾ-ಕಾಲೇಜುಗಳು ಎಂದಿನಂತೆ ನಡೆದವು. ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್‍ಗಳ ಓಡಾಟ ಸಾಮಾನ್ಯವಾಗಿತ್ತು. ರೈಲು ಸಂಚಾರಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಮಾಲ್‍ಗಳು, ಚಿತ್ರಮಂದಿರಗಳು ಎಂದಿನಂತೆ ತೆರೆದಿದ್ದವು. ಆದರೆ ಜನರು ಬರುವುದು ಕಡಿಮೆಯಿತ್ತು. ಕಾರ್ಮಿಕರ ಪ್ರತಿಭಟನೆಗೆ ರೈತ ಪರ ಸಂಘಟನೆಗಳು ಬೆಂಬಲ ನೀಡಿದ್ದ ಹಿನ್ನೆಲೆಯಲ್ಲಿ ಎಪಿಎಂಸಿ ಮಾರುಕಟ್ಟೆ ಹೂ ಹಣ್ಣು ತರಕಾರಿ ಮಾರುಕಟ್ಟೆ ಮೇಲೆ ಕೊಂಚ ಪರಿಣಾಮ ಬೀರಿತ್ತು.

ಕೆಲವೆಡೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದರೆ ಮತ್ತೆ ಹಲವೆಡೆ ರಸ್ತೆ ತಡೆ ನಡೆಸಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಲವಂತವಾಗಿ ಅಂಗಡಿ ಮುಂಗಟ್ಟುಗಳು, ಹೊಟೇಲ್‍ಗಳನ್ನು ಮುಚ್ಚಿಸುವ ಯತ್ನ ಹಾಗೂ ರಾಜ್ಯ ರಸ್ತೆ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ ಮಾಡಿರುವ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಉದ್ದೇಶಿತ ಬಂದ್ ಅಷ್ಟಾಗಿ ಯಶಸ್ವಿಯಾಗಿಲ್ಲ. ಜನಜೀವನ ಎಂದಿನಂತಿತ್ತು. ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಖಾಸಗಿ ಬಸ್‍ಗಳು, ಆಟೋ, ಟ್ಯಾಕ್ಸಿಗಳ ಸಂಚಾರ ಸಾಮಾನ್ಯವಾಗಿತ್ತಾದರೂ ಜನರ ಓಡಾಟ ತಗ್ಗಿತ್ತು.

ಮಡಿಕೇರಿಯಿಂದ ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.  ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ ತೆರೆದಿದ್ದ ಹೊಟೇಲ್‍ನ್ನು ಬಲವಂತವಾಗಿ ಮುಚ್ಚಿಸಲು ಕಾರ್ಮಿಕ ಸಂಘಟನೆಗಳು ಪ್ರಯತ್ನ ನಡೆಸಿದವು. ಹೆದ್ದಾರಿ ಬಳಿ ಹೊಟೇಲ್ ತೆರೆದಿದ್ದ ಮಾಲೀಕರ ಮೇಲೆ ಹಲ್ಲೆ ನಡೆಸುವ ಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಮೈಸೂರಿನಲ್ಲಿ ಬಂದ್ ಬಿಸಿ ತಟ್ಟಿಲ್ಲ. ಜನಜೀವನ ಎಂದಿನಂತಿತ್ತು. ಕಾರ್ಮಿಕ ಸಂಘಟನೆಗಳವರು 10 ಗಂಟೆಯ ಮೇಲೆ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅದನ್ನು ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಶಿವಮೊಗ್ಗದಲ್ಲಿ ಪ್ರತಿಭಟನೆಯ ಕಾವು ಕಂಡುಬರಲಿಲ್ಲ. ಕಾರ್ಮಿಕ ಸಂಘಟನೆಗಳವರು ತಮ್ಮ ಧ್ವಜ ಹಿಡಿದು ರ್ಯಾಲಿ ನಡೆಸಿ ಕೇಂದ್ರ ಸರ್ಕಾರದ ಧೋರಣೆಯನ್ನು ವಿರೋಧಿಸಿದರು. ಅತ್ತ ಕೋಲಾರದಲ್ಲಿ ಬಸ್ ಡಿಫೋ ಮುಂದೆ ಪ್ರತಿಭಟನೆ ನಡೆಸಲು ಮುಂದಾದ ಸಿಪಿಐಎಂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ತುಮಕೂರಿನಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಬೃಹತ್ ಸಮಾವೇಶವನ್ನು ನಡೆಸಿ ಬಿಎಸ್‍ಎನ್‍ಎಲ್‍ಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಹಲವರನ್ನು ವಶಕ್ಕೆ ಪಡೆದರು. ಕಲಬುರಗಿಯಲ್ಲಿ ರಾಜ್ಯ ಪ್ರಾಂತರೈತ ಸಂಘದ ಮಾರುತಿ ಮಾನ್ಪಡೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರಸ್ತೆ ಸಾರಿಗೆ ಬಸ್ ತಡೆಯಲು ಯತ್ನಿಸಿದ ಸಂದರ್ಭದಲ್ಲಿ ಮಾನ್ಪಡೆಯವರನ್ನು ಪೊಲೀಸರು ವಶಕ್ಕೆ ಪಡೆದರು ಹಾಗೂ ಸಾರಿಗೆ ಬಸ್‍ಗಳ ಓಡಾಟಕ್ಕೆ ಅಡ್ಡಿಪಡಿಸಬಾರದೆಂಬ ಎಚ್ಚರಿಕೆಯನ್ನು ಪ್ರತಿಭಟನಾಕಾರರಿಗೆ ನೀಡಿದರು.

ಬೆಳಗಾವಿ,ಹುಬ್ಬಳ್ಳಿ, ಧಾರವಾಡ, ಗದಗದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳವರು ಶಾಂತಿಯುತ ಪ್ರತಿಭಟನಾ ರ್ಯಾಲಿ ನಡೆಸಿ ತಮ್ಮ ಹಕ್ಕೋತ್ತಾಯ ಮಂಡಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಚಾಮರಾಜನಗರ-ಕೇರಳ ಬಸ್ ಸಂಚಾರವನ್ನು ಸಂಜೆ 5ರವರೆಗೆ ಸ್ಥಗಿತಗೊಳಿಸಲಾಗಿತ್ತು. ಮುಷ್ಕರದ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಸಂಚಾರಿ ವಿಭಾಗದ ಮುಖ್ಯಸ್ಥ ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ. ಇನ್ನುಳಿದಂತೆ ಬಸ್‍ಗಳು ಎಂದಿನಂತೆ ಸಂಚರಿಸಲಿವೆ.

ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ: ಎಸ್‍ಬಿಐ ಹೊರತುಪಡಿಸಿ ಎಲ್ಲಾ ಬ್ಯಾಂಕ್, ಅಂಚೆ, ಎಲ್‍ಐಸಿ ನೌಕರರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಬಹುತೇಕ ಗ್ರಾಹಕರು ಬ್ಯಾಂಕ್‍ಗಳ ಬಂದ್‍ನಿಂದ ತೊಂದರೆ ಅನುಭವಿಸುವಂತಾಯಿತು. ಪ್ರತಿಭಟನಾ ರ್ಯಾಲಿ ನಡೆಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳ ಸುಮಾರು 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಫ್ರೀಡಂ ಪಾರ್ಕ್ ಬಳಿ ಸಮಾವೇಶ ನಡೆಸಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿದರು.

ಕೇಂದ್ರ ಸರ್ಕಾರ ಕಾರ್ಮಿಕರಿಗೆ ಕನಿಷ್ಠ 21 ಸಾವಿರ ವೇತನ ನಿಗದಿ ಮಾಡಬೇಕು. ಮಹಿಳೆಯರಿಗೆ ರಾತ್ರಿ ಪಾಳಿಯನ್ನು ರದ್ದು ಮಾಡಬೇಕು, ಸಾಕಷ್ಟು ಕೈಗಾರಿಕೆಗಳು ಮುಚ್ಚಿ ಹೋಗಿರುವುದರಿಂದ ನಿರುದ್ಯೋಗಿಗಳಾಗಿರುವ ಕಾರ್ಮಿಕರಿಗೆ ಉದ್ಯೋಗ ನೀಡಬೇಕು. ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೊಳಿಸುವುದು ಸೇರಿದಂತೆ 12 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಸೆಪ್ಟೆಂಬರ್‍ನಲ್ಲೇ ಮನವಿ ಸಲ್ಲಿಸಿದ್ದೆವು. ಆದರ ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಿರಲಿಲ್ಲ.

ಹಾಗಾಗಿ ಪ್ರತಿಭಟನೆಯ ಹಾದಿ ಹಿಡಿದಿದ್ದೇವೆ. ನಾವು ಭಾರತ್ ಬಂದ್‍ಗೆ ಕರೆ ನೀಡಿಲ್ಲ. ಒಂದು ದಿನ ಕಾರ್ಮಿಕರು ಕೆಲಸ ಮಾಡದೆ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದೇವೆ. ಅದರಂತೆ ಕೆಲಸ ಮಾಡದೆ ಪ್ರತಿಭಟನೆ ಮಾಡುತ್ತಿದ್ದೇವೆ. ನಮಗೆ ರ್ಯಾಲಿ ನಡೆಸಲು ಪೊಲೀಸರು ಅವಕಾಶ ಕೊಟ್ಟಿಲ್ಲ. ಹಾಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಸಮಾವೇಶ ನಡೆಸುತ್ತಿದ್ದೇವೆ. ಈ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ ಎಂದು ಕಾರ್ಮಿಕ ಮುಖಂಡರು ಹೇಳಿದರು.

ದೇಶಾದ್ಯಂತ ಕರೆ ಕೊಟ್ಟಿರುವ ಮುಷ್ಕರ ಯಶಸ್ವಿಯಾಗಿದೆ. ಈಗಲಾದರೂ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಕಾರ್ಮಿಕ ವಿರೋಧಿ ಧೋರಣೆ ಕೈಬಿಡಬೇಕು ಎಂದು ಪ್ರತಿಭಟನಾನಿರತ ಕಾರ್ಮಿಕರು ಮುಖಂಡರು ಆಗ್ರಹಿಸಿದರು.

Facebook Comments