ರಾಜಧಾನಿ ಬೆಂಗಳೂರಿನಲ್ಲಿ ಭಾರತ್ ಬಂದ್ ಎಫೆಕ್ಟ್ ಹೇಗಿದೆ..?

ಈ ಸುದ್ದಿಯನ್ನು ಶೇರ್ ಮಾಡಿ

Bengaluru-bandh--01

ಬೆಂಗಳೂರು, ಜ.8- ರಾಜಧಾನಿ ಬೆಂಗಳೂರಿನ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳಲ್ಲಿ ಬಸ್‍ಗಳಿವೆ, ಪ್ರಯಾಣಿಕರಿಲ್ಲ. ಚಿತ್ರಮಂದಿರಗಳು ಓಪನ್ ಆಗಿವೆ, ಪ್ರೇಕ್ಷಕರಿಲ್ಲ. ಮಾರುಕಟ್ಟೆಗಳು, ತರಕಾರಿ, ಹಣ್ಣು, ದಿನಸಿ ಮಾರುಕಟ್ಟೆಗಳು ತೆರೆದಿವೆ, ಗ್ರಾಹಕರಿಲ್ಲದೆ ಬಣಗುಡುತ್ತಿವೆ- ಇವೆಲ್ಲ ಮುಷ್ಕರದ ಎಫೆಕ್ಟ್…

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ಜನವಿರೋಧಿ ನೀತಿ ಖಂಡಿಸಿ ಎಡಪಕ್ಷಗಳು ದೇಶಾದ್ಯಂತ ಎರಡು ದಿನಗಳ ಕಾಲ ಕರೆ ಕೊಟ್ಟಿರುವ ಮುಷ್ಕರದಿಂದ ಸದಾ ಗಿಜಿಗುಡುತ್ತಿದ್ದ ನಗರದ ಕೆಆರ್ ಮಾರುಕಟ್ಟೆ, ಎಪಿಎಂಸಿ ಮಾರುಕಟ್ಟೆ, ರೈತರ ಸಂತೆ ಇಂದು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.

ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳು ಓಡಾಟಕ್ಕೆ ಅನುವಾಗಿದ್ದರೂ ಪ್ರಯಾಣಿಕರಿಲ್ಲದ ಪರಿಣಾಮ ಓಡಾಟವನ್ನು ಸ್ಥಗಿತಗೊಳಿಸಿದವು. ಚಲನಚಿತ್ರ ವಾಣಿಜ್ಯ ಮಂಡಳಿಯವರು ಬಂದ್‍ಗೆ ನೈತಿಕ ಬೆಂಬಲ ಘೋಷಿಸಿದ್ದರು.

ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಸ್.ಎ.ಚಿನ್ನೇಗೌಡ ಅವರು ಚಲನಚಿತ್ರ ರಂಗದ ಚಟುವಟಿಕೆಗಳು ಎಂದಿನಂತೆ ನಡೆಯಲಿವೆ. ಕಪ್ಪುಪಟ್ಟಿ ಧರಿಸಿ ಪ್ರತಿಭಟನೆಗೆ ಬೆಂಬಲ ನೀಡುತ್ತಿವೆ ಎಂದು ತಿಳಿಸಿದ್ದಾರೆ.  ಹಾಗಾಗಿ ಶೂಟಿಂಗ್ ಚಟುವಟಿಕೆಗಳು ನಿಂತಿಲ್ಲ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಎಂದಿನಂತಿದ್ದರೂ ಮುಷ್ಕರದ ಪರಿಣಾಮ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಇರಲಿಲ್ಲ.

ಬಂದ್ ಬಿಸಿ ಮಾಲ್‍ಗಳಿಗೂ ತಟ್ಟಿತ್ತು. ಮಂತ್ರಿ ಮಾಲ್, ಒರಾಯನ್ ಮಾಲ್, ಗೋಪಾಲನ್ ಮಾಲ್, ಬಿಗ್ ಬಜಾರ್, ಕೋರಮಂಗಲ, ಇಂದಿರಾನಗರ ಸೇರಿದಂತೆ ನಗರದೆಲ್ಲೆಡೆ ಮಾಲ್‍ಗಳು ತೆರೆದಿದ್ದರೂ ಹೆಚ್ಚಿನ ಗ್ರಾಹಕರು ಇರಲಿಲ್ಲ.

ಸರ್ಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿ ವಿರಳವಾಗಿತ್ತು. ಬಸ್‍ಗಳಿಲ್ಲದ ಪರಿಣಾಮ ಕಚೇರಿಗೆ ಬಹುತೇಕ ನೌಕರರು ಹಾಜರಾಗಿರಲಿಲ್ಲ. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಕೋರ್ಟ್ ಸೇರಿದಂತೆ ಹಲವು ಕಚೇರಿಗಳಲ್ಲಿ ನೌಕರರ ಹಾಜರಾತಿ ಕೊರತೆ ಎದ್ದು ಕಾಣುತ್ತಿತ್ತು.

Facebook Comments

Sri Raghav

Admin